ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಜನಸಂಪರ್ಕ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಶ್ರೀರಾಮುಲು
Last Updated 13 ಆಗಸ್ಟ್ 2018, 14:36 IST
ಅಕ್ಷರ ಗಾತ್ರ

ನಾಯಕನಹಟ್ಟಿ : ಕ್ಷೇತ್ರಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ಪಟ್ಟಣದ ತೇರುಬೀದಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಕ್ಷೇತ್ರದ ಎಲ್ಲ ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಸೇರಿ ಸರ್ಕಾರಿ ಸೌಲಭ್ಯಗಳಲ್ಲಿ ಯಾವುದೇ ಲೋಪವಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇವುಗಳಲ್ಲಿ ಲೋಪವಾದರೆ ಕ್ರಮ ಕೈಗೊಳ್ಳಲಾಗುವುದು. ಎರಡು ದಿನಗಳಿಂದ ಸ್ವಲ್ಪ ಮಟ್ಟಿನ ಮಳೆಯಾಗಿದೆ. ಹೀಗಾಗಿ ಶೇಂಗಾ ಬೆಳೆಗೆ ಒಂದಿಷ್ಟು ಜೀವ ಬಂದಂತಾಗಿದೆ. ಸರ್ಕಾರ ಹಾಗೂ ರಾಜಕಾರಣಿಗಳ ನಿರ್ಲಕ್ಷದಿಂದಾಗಿ ಇಂಥಹ ಪರಿಸ್ಥಿತಿ ಉಂಟಾಗಿದೆ. ನಾನು ಗೆಲುವು ಸಾಧಿಸಿದ ತಕ್ಷಣ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ. ಬಹುತೇಕ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯನ್ನು ಗಮನಕ್ಕೆ ಬಂದಿದೆ. ಭೂಮಿಯಲ್ಲಿನ ನೀರಿನ ಪ್ರಮಾಣ ಹಾಗೂ ಸ್ಥಳ ತಿಳಿಯುವುದಕ್ಕಾಗಿ ನನ್ನ ವೈಯುಕ್ತಿಕ ಆಸಕ್ತಿಯಿಂದ ವಿಜ್ಞಾನಿಗಳನ್ನು ಕರೆಯಿಸಿದ್ದೇನೆ’ ಎಂದು ಹೇಳಿದರು.

‘ರಾಜಕೀಯದಲ್ಲಿ 30 ವರ್ಷದ ಅನುಭವದ ಹೊಂದಿದ್ದೇನೆ. ದೀನ, ದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದೇನೆ. ಕ್ಷೇತ್ರದಲ್ಲಿ ಶೀಘ್ರದಲ್ಲಿ ಸಾಮೂಹಿಕ ವಿವಾಹ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ ಮಾತನಾಡಿ, ‘ಶಾಸಕ ಬಿ. ಶ್ರೀರಾಮುಲು ಜನರ ಸಂಪರ್ಕಕ್ಕೆ ದೊರೆಯುವುದಿಲ್ಲ ಎನ್ನುವ ಆಪಾದನೆಯಿತ್ತು. ಆದರೆ ಶಾಸಕರು ಚುನಾವಣೆಯ ನಂತರ 15 ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಪ್ರತಿ ಹೋಬಳಿಯಲ್ಲಿ ಜನಸಂಪರ್ಕ ಕಚೇರಿ ತೆರೆಯಲಾಗಿದೆ. ಜನರು ತಮ್ಮ ಸಮಸ್ಯೆಗಳನ್ನು ಕಚೇರಿಗೆ ನೀಡಬಹುದು’ ಎಂದು ಹೇಳಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ, ಮಂಡಲ ಕಾರ್ಯದರ್ಶಿ ಪಿ. ಶಿವಣ್ಣ, ಪಟ್ಟಣಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಎನ್. ಮಹಾಂತಣ್ಣ, ಸದಸ್ಯರಾದ ವೈ. ಗಿರಿಜಮ್ಮ, ಬೋರಮ್ಮ, ಮುಖಂಡರಾದ ಸಿ.ಬಿ. ಮೋಹನ್, ಪರಮೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT