ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಗಣತಿ, ಎನ್‌ಪಿಆರ್‌ಗೆ ಜಿಲ್ಲೆಯಲ್ಲಿ ಸಿದ್ಧತೆ

ವಲಸೆ ಪ್ರವೃತ್ತಿ ಜನಗಣತಿಗೆ ಸವಾಲು– ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ
Last Updated 24 ಫೆಬ್ರುವರಿ 2020, 12:01 IST
ಅಕ್ಷರ ಗಾತ್ರ

ಚಿತ್ರದುರ್ಗ: ಉದ್ಯೋಗ ಅರಸಿ ವಲಸೆ ಹೋಗುವ ಪ್ರವೃತ್ತಿ ಜಿಲ್ಲೆಯ ಜನರಲ್ಲಿದ್ದು, ಜನಗಣತಿಗೆ ಸವಾಲಾಗುವ ಸಾಧ್ಯತೆ ಇದೆ. ಗಣತಿದಾರರು ಆಸಕ್ತಿ ಹಾಗೂ ಜಾಗೃತಿಯಿಂದ ನಿಖರ ಮಾಹಿತಿ ಸಂಗ್ರಹಿಸಲು ಶ್ರಮಿಸಬೇಕು ಎಂದು ಪ್ರಧಾನ ಜಿಲ್ಲಾ ಜನಗಣತಿ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ಸೂಚನೆ ನೀಡಿದರು.

ಭಾರತೀಯ ಜನಗಣತಿ 2020–21 ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್‌) ಸಂಬಂಧಿಸಿದಂತೆ ಇಲ್ಲಿನ ಲೋಕೋಪಯೋಗಿ ಇಲಾಖೆ ಸಭಾಂಗಣದಲ್ಲಿ ಜಿಲ್ಲಾಡಳಿತ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜಿಲ್ಲಾ ವ್ಯಾಪ್ತಿಯ ಗಣತಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

‘ಜಿಲ್ಲೆಯ ಹಲವು ಗ್ರಾಮಗಳ ಜನರು ಗುಳೆ ಹೋಗುತ್ತಾರೆ. ನಿಗದಿತ ಕಾಲಾವಧಿ ಮುಗಿದ ಬಳಿಕ ಗ್ರಾಮಕ್ಕೆ ಮರಳುತ್ತಾರೆ. ಈ ವಲಸೆ ಪ್ರವೃತ್ತಿಯು ಜನಗಣತಿಗೆ ಸವಾಲಾಗಿದೆ. ಗೊಂದಲ ರಹಿತ ಜನಗಣತಿಗೆ ವ್ಯವಸ್ಥಿತ ಸಿದ್ಧತೆಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಜನಗಣತಿ ಮೂಲಕ ಸರ್ಕಾರ ದತ್ತಾಂಶ ಸಂಗ್ರಹಿಸುತ್ತದೆ. ಈ ದತ್ತಾಂಶವನ್ನು ಆಧಾರವಾಗಿಟ್ಟುಕೊಂಡು ಯೋಜನೆ ರೂಪಿಸುತ್ತದೆ. ಸಾರ್ವಜನಿಕರು ಜನಗಣತಿಗೆ ಸಹಕಾರ ನೀಡಬೇಕು. ಗಣತಿದಾರರು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಏ.15ರಿಂದ ಮೇ 29ರವರೆಗೆ ಗಣತಿ ಕಾರ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಮಾತನಾಡಿ, ‘ದೇಶದಲ್ಲಿ 16ನೇ ಜನಗಣತಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಈ ಗಣತಿ ನಡೆಯುತ್ತದೆ. ವಿವರವಾದ ಮಾಹಿತಿ ಕಲೆ ಹಾಕಲು ಗಣತಿದಾರರು ಒತ್ತು ನೀಡಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬ ನಾಗರಿಕರ ಆರ್ಥಿಕ, ಸಾಮಾಜಿಕ ಸ್ಥಿತಿ, ಸಾಕ್ಷರತೆ ಪ್ರಮಾಣ, ಉದ್ಯೋಗ ಸೇರಿ ಹಲವು ಮಾಹಿತಿ ಸಂಗ್ರಹಿಸುವ ಹೊಣೆ ಗಣತಿದಾರರ ಮೇಲಿದೆ. ಅತ್ಯಂತ ಪ್ರಮಾಣಿಕವಾಗಿ ಗಣತಿ ಕಾರ್ಯ ಮಾಡಬೇಕು. ಸೂಕ್ಷ್ಮ ಸಂಗತಿಗಳನ್ನು ಅರಿತು ದಾಖಲಿಸಬೇಕು. ಗಣತಿಯಲ್ಲಿ ಗೊಂದಲಗಳಿದ್ದರೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಎರಡು ದಿನಗಳ ಕಾಲ ತರಬೇತಿ ಕಾರ್ಯಾಗಾರ ನಡೆಯಲಿದೆ. ವಾರ್ಡ್‌ ಹಾಗೂ ಕ್ಷೇತ್ರ ಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ. ಬಳಿಕ ಮನೆ–ಮನೆಗೆ ತೆರಳಿ ಗಣತಿ ನಡೆಯಲಿದೆ.

ಗಣತಿಗೆ ಮೊಬೈಲ್‌ ಆ್ಯಪ್‌

ಈವರೆಗೆ ನಡೆದ 15 ಜನಗಣತಿಗಳನ್ನು ಸರ್ಕಾರಿ ನೌಕರರು ಕೈಬರಹದ ಮೂಲಕ ದಾಖಲಿಸುತ್ತಿದ್ದರು. ಇದೇ ಮೊದಲ ಬಾರಿಗೆ ಗಣತಿ ಕಾರ್ಯಕ್ಕೆ ಮೊಬೈಲ್‌ ಆ್ಯಪ್‌ ಬಳಕೆ ಮಾಡಲಾಗುತ್ತಿದೆ.

‘ಈ ಹಿಂದೆ ಗಣತಿ ಕಾರ್ಯಕ್ಕೆ ಹೆಚ್ಚು ಸಮಯ ವ್ಯರ್ಥವಾಗುತ್ತಿತ್ತು. ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದ್ದರಿಂದ ಸಿಬ್ಬಂದಿಗೆ ಸಮಯ ಉಳಿತಾಯವಾಗುತ್ತದೆ. ಆದರೂ, ಗಣತಿದಾರರು ನೋಟ್‌ ಪುಸ್ತಕದಲ್ಲಿ ಮಾಹಿತಿ ಬರೆದಿಟ್ಟುಕೊಳ್ಳುವುದು ಅನುಕೂಲ. ಗಣತಿದಾರರು ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಕೇಳುವ ಪ್ರಶ್ನೆಗಳು ವ್ಯಂಗ್ಯ ಹಾಗೂ ಸಿಟ್ಟಿನಿಂದ ಕೂಡಿರಬಾರದು’ ಎಂಬ ಎಚ್ಚರಿಕೆಯನ್ನು ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ತರಬೇತುದಾರರಾದ ಜಯೇಶ್, ವಿಜಯ್ ಕುಮಾರ್, ಎಲ್ಲ ತಾಲ್ಲೂಕಿನ ತಹಶೀಲ್ದಾರ್‌, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT