ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವನ ಆರಾಧನೆಗೆ ದೇಗುಲ ಸಜ್ಜು: ಪುಣ್ಯ ಕ್ಷೇತ್ರಗಳಂತೆ ಕಂಗೊಳಿಸುವ ದೇಗುಲ

ಮಹಾರುದ್ರಾಭಿಷೇಕ, ಬಿಲ್ವಾರ್ಚನೆಯೊಂದಿಗೆ ವಿಶೇಷ ಪೂಜೆ
Last Updated 10 ಮಾರ್ಚ್ 2021, 16:04 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿವನಾಮ ಸ್ಮರಣೆಯಲ್ಲಿ ಮಿಂದೇಳಲು ಭಕ್ತರು ಉತ್ಸುಕರಾಗಿದ್ದಾರೆ. ಶಿವನ ಪುಣ್ಯಕ್ಷೇತ್ರಗಳಂತೆ ದೇಗುಲಗಳಲ್ಲಿ ಕಂಗೊಳಿಸಲಿವೆ. ಗುರುವಾರ ನಡೆಯಲಿರುವ ಮಹಾಶಿವರಾತ್ರಿ ಹಬ್ಬಕ್ಕೆ ಶಿವ ದೇಗುಲಗಳಲ್ಲಿ ಬುಧವಾರದಿಂದಲೇ ಸಿದ್ಧತೆಗಳು ಭರದಿಂದ ನಡೆದಿವೆ.

ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನಡೆಯಲಿವೆ. ಅದಕ್ಕಾಗಿ ದೇಗುಲಗಳ ಆವರಣವನ್ನು ಪುಷ್ಪಾಲಂಕಾರದಿಂದ ಸಿಂಗರಿಸಲಾಗುತ್ತಿದೆ. ದೀಪಾಲಂಕಾರ ಸೇರಿ ಅಗತ್ಯ ತಯಾರಿ ನಡೆಸಲಾಗುತ್ತಿದೆ.

ನಾಗಲಿಂಗೇಶ್ವರ ಸ್ವಾಮಿ ಆಕರ್ಷಣೆ: ಪವಿತ್ರ ಯಾತ್ರಾ ಸ್ಥಳವಾದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಲೇಪಾಕ್ಷಿಯಲ್ಲಿನ ನಾಗಲಿಂಗೇಶ್ವರಸ್ವಾಮಿ ಮೂರ್ತಿ ಮಾದರಿಯನ್ನು ಇದೇ ಪ್ರಥಮ ಬಾರಿಗೆ ನಗರದ ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ನಿರ್ಮಿಸಲಾಗುತ್ತಿದೆ.

ಲೇಪಾಕ್ಷಿ ಶಿವನ ಮಾದರಿ ಮೂರ್ತಿ ಹಾಗೂ ದೇಗುಲದಲ್ಲಿನ ನಾಗರೇಶ್ವರ ಸ್ವಾಮಿಗೆ ಬಿಲ್ವಪತ್ರೆಯಿಂದ ಪೂಜೆ ನಡೆಯಲಿದೆ. ರಾತ್ರಿ 9ಕ್ಕೆ, ಮಧ್ಯರಾತ್ರಿ 12ಕ್ಕೆ, ನಸುಕಿನ 3ಕ್ಕೆ ಹಾಗೂ ಬೆಳಿಗ್ಗೆ 6ಕ್ಕೆ ಮಹಾರುದ್ರಾಭಿಷೇಕ ಕೂಡ ಜರುಗಲಿದೆ.

‘ಮುಂಜಾನೆ ಪೂಜೆ ಬಳಿಕ ಬೆಳಿಗ್ಗೆ 8ರಿಂದ 10.30ರ ವರೆಗೂ ಭಕ್ತರಿಂದ ಸ್ವಾಮಿಯ ಮೂರ್ತಿಗೆ ಕ್ಷೀರಾಭಿಷೇಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಾಗರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಭಜನೆ ಆಯೋಜಿಸಲಾಗಿದೆ. ದೇಗುಲಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಲಾಡು, ಹಣ್ಣುಗಳ ರಸಾಯನ, ಮಂಡಕ್ಕಿ, ಮೊಸರನ್ನ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷ ಕಾಶಿವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ.

ನೀಲಕಂಠೇಶ್ವರಸ್ವಾಮಿ: ಹೊಳಲ್ಕೆರೆ ರಸ್ತೆಯ ನೀಲಕಂಠೇಶ್ವರಸ್ವಾಮಿ ದೇಗುಲದಲ್ಲಿ ಮಾರ್ಚ್‌ 11ರಂದು ಬೆಳಿಗ್ಗೆ 5ರಿಂದ 10ರವರೆಗೆ ಸಾಮೂಹಿಕ ರುದ್ರಾಭಿಷೇಕ ನಡೆಯಲಿದೆ. ಬೆಳಿಗ್ಗೆ 8ಕ್ಕೆ ಮಹಾಮಂಗಳಾರತಿ ಪೂಜೆ ಜರುಗಲಿದ್ದು, ನಂತರ ವಿಶೇಷ ಪುಷ್ಪಾಲಂಕಾರ ಮಾಡಲಾಗುತ್ತದೆ.

‘ದೇಗುಲದಲ್ಲಿ ಪಾರ್ವತಿ, ಗಣಪತಿ, ವೀರಭದ್ರಸ್ವಾಮಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗುವುದು. ಭಕ್ತರಿಗೆ ಪ್ರಸಾದ ವಿತರಿಸಲಾಗುವುದು. ವರ್ಷದಿಂದ ವರ್ಷಕ್ಕೆ ಈ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಸ್ವಾಮಿಯ ಗರ್ಭಗುಡಿಗೆ ಬೆಳ್ಳಿ ಕವಚ ಅಳವಡಿಸಿರುವುದು ಈ ಬಾರಿಯ ಪ್ರಮುಖ ಆಕರ್ಷಣೆ’ ಎನ್ನುತ್ತಾರೆ ವೀರಶೈವ ಸಮಾಜದ ಮುಖಂಡ ಶಿವಣ್ಣ ಸಿದ್ಧಾಪುರ.

ಬರಗೇರಮ್ಮ ದೇಗುಲ: ‘ಬರಗೇರಮ್ಮ ದೇಗುಲ ವಿಶೇಷ ಅಲಂಕಾರದಿಂದಲೇ ಭಕ್ತರನ್ನು ಸೆಳೆಯಲ್ಲಿದೆ. ಕೋವಿಡ್‌ ಕಾರಣಕ್ಕೆ ಈ ಬಾರಿ ದೇಗುಲದಲ್ಲಿ ದೇವಿಯ ಮೂರ್ತಿಯನ್ನು ಸರಳವಾಗಿ ಅಲಂಕರಿಸಲು ತೀರ್ಮಾನಿಸಲಾಗಿದೆ’ ಎಂದು ದೇಗುಲದ ಪ್ರಧಾನ ಅರ್ಚಕ ಪೂಜಾರ್ ಸತ್ಯಪ್ಪ ತಿಳಿಸಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ದೇಗುಲದ ಬಾಗಿಲು ತೆರೆದು ಭಕ್ತರಿಗೆ ದರ್ಶನ ಕಲ್ಪಿಸುವ ಆನೆಬಾಗಿಲು ಸಮೀಪದ ಪಾತಾಳ ಲಿಂಗೇಶ್ವರ ದೇಗುಲದಲ್ಲೂ ಸಿದ್ಧತೆ ನಡೆದಿವೆ.ಜೋಗಿಮಟ್ಟಿ ರಸ್ತೆಯ ಕೂಡಲಿ ಶೃಂಗೇರಿ ಶಂಕರಾಚಾರ್ಯ ಶಾಖಾ ಮಠದಲ್ಲಿ ಚಂದ್ರಮೌಳೇಶ್ವರಸ್ವಾಮಿ ದೇಗುಲದಲ್ಲಿ ಅಭಿಷೇಕ ನಡೆಸಲಾಗುತ್ತಿದೆ.

‘ದೊಡ್ಡಪೇಟೆ ಕಂಬಳಿ ಬೀದಿಯಲ್ಲಿ ಇರುವ ಬೀರಗಲ್ಲೇಶ್ವರ ಸ್ವಾಮಿ ದೇಗುಲದಲ್ಲಿ ಮಹಾಶಿವರಾತ್ರಿ ಅಂಗವಾಗಿ ಸ್ವಾಮಿಗೆ ರುದ್ರಾಭಿಷೇಕ ನೆರವೇರಲಿದೆ. ರಾತ್ರಿ 9ರ ನಂತರ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ದೇಗುಲ ಅಭಿವೃದ್ಧಿ ಸಮಿತಿಯ ದೀನ್‌ದಯಾಳು ತಿಳಿಸಿದ್ದಾರೆ.

ಐತಿಹಾಸಿಕ ಕೋಟೆಯೊಳಗಿನ ಮೇಲುದುರ್ಗದ ಏಕನಾಥೇಶ್ವರಿ, ಹಿಡಂಬೇಶ್ವರ, ಸಂಪಿಗೆ ಸಿದ್ಧೇಶ್ವರ, ಕಾಶಿ ವಿಶ್ವೇಶ್ವರ ದೇಗುಲಗಳಲ್ಲಿ ಶಿವರಾತ್ರಿ ಅಂಗವಾಗಿ ಮಹಾ ರುದ್ರಾಭಿಷೇಕ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಗಾರೆ ಬಾಗಿಲು ಈಶ್ವರ, ಉಮಾ ಮಹೇಶ್ವರ, ಗಾರೇಹಟ್ಟಿಯ ಮಹಾಬಲೇಶ್ವರ, ಭೈರವೇಶ್ವರ, ಕೆಳಗೋಟೆಯ ಬೇಡರ ಕಣ್ಣಪ್ಪ, ಚಿಕ್ಕಪೇಟೆಯ ಮಲ್ಲಿಕಾರ್ಜುನ ಸ್ವಾಮಿ, ಕೋಟೆ ವ್ಯಾಪ್ತಿಯ ಕರಿವರ್ತೀಶ್ವರ ಸ್ವಾಮಿ ದೇಗುಲಗಳಲ್ಲೂ ಪೂಜೆಗಾಗಿ ತಯಾರಿ ನಡೆಯುತ್ತಿದೆ.

ಪೂಜಾ ಸಾಮಗ್ರಿ ಖರೀದಿ:ಹಬ್ಬಕ್ಕಾಗಿ ಸಾರ್ವಜನಿಕರು ಗಾಂಧಿ ವೃತ್ತ, ಸಂತೆ ಹೊಂಡ, ಸೂಪರ್ ಮಾರ್ಕೆಟ್, ಪ್ರವಾಸಿ ಮಂದಿರ, ಮೆದೇಹಳ್ಳಿ ರಸ್ತೆ ಸೇರಿ ಇತರೆ ಪ್ರದೇಶಗಳಲ್ಲಿ ಹಣ್ಣು, ಹೂವು, ಬಿಲ್ವಪತ್ರೆ ಸೇರಿ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿಗೆ ಮುಂದಾದರು.

ಶಿವರಾತ್ರಿ ಉಪವಾಸ ಮತ್ತು ಜಾಗರಣೆಯ ಹಬ್ಬವಾದ್ದರಿಂದ ಹಣ್ಣುಗಳ ಖರೀದಿ ಜೋರಾಗಿತ್ತು. ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಸೇಬು, ಕಿತ್ತಳೆ, ಮೂಸಂಬಿ, ಬಾಳೆಹಣ್ಣು, ತೆಂಗಿನಕಾಯಿಗಳನ್ನು ಹೆಚ್ಚಾಗಿ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT