ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವಕ್ಕೆ ಸಿದ್ಧತೆ

ಮೂರು ದಿನಗಳ ಸರಳ ಆಚರಣೆ, ಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ
Last Updated 2 ಅಕ್ಟೋಬರ್ 2022, 5:06 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಧ್ಯ ಕರ್ನಾಟಕದ ದಸರಾ ಎಂದೇ ಖ್ಯಾತಿಗಳಿಸಿರುವ ಕೋಟೆನಾಡಿನ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಈ ಬಾರಿ ಮೂರು ದಿನದ ಸರಳ ಆಚರಣೆಗೆ ಸೀಮಿತವಾಗಿದೆ. ಮಠದ ಅಂಗಳದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ.

ಮುರುಘಾ ಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಮುರುಘ ರಾಜೇಂದ್ರ ಬೃಹನ್ಮಠದಲ್ಲಿ ಅ.4ರಿಂದ 6ರವರೆಗೆ ‘ಶರಣ ಸಂಸ್ಕೃತಿ ಉತ್ಸವ –2022’ ನಡೆಯಲಿದೆ. ಸೆ.28ರಂದು ವಿವಿಧ ಮಠಾಧೀಶರು ಕರ್ತೃಗದ್ದುಗೆಗೆ ವಚನಾಭಿಷೇಕ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದ್ದರು.

‘ಸರ್ವ ಜನಾಂಗದ ಶಾಂತಿಯ ತೋಟವಾದ ಮುರುಘಾ ಮಠದಲ್ಲಿ ಭಕ್ತರ ಭಾವನೆಗೆ ಧಕ್ಕೆಯಾಗದಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ಸಹಜ ಶಿವಯೋಗ ಶಿಬಿರ ನಡೆಯುತ್ತಿದೆ. ಮೂರು ದಿನವೂ ಮಠಕ್ಕೆ ವಿದ್ಯುತ್‌ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗುತ್ತದೆ ಎಂದು ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಎಸ್‌. ಲಿಂಗಮೂರ್ತಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ.4ರಂದು ಬೆಳಿಗ್ಗೆ 8.30ಕ್ಕೆ ಮಠದ ಆವರಣದಲ್ಲಿ ಕನಕಪುರ ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಬಸವತತ್ವ ಧ್ವಜಾರೋಹಣ ನೆರವೇರಿಸುವರು. ಸಂಜೆ 6.3ಂಕ್ಕೆ ಶರಣಸಂಸ್ಕೃತಿ ಉತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದರು.

ಇಳಕಲ್‌ನ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ರಾವಂದೂರು ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಸಮ್ಮುಖ ವಹಿಸುವರು. ‘ಶತಮಾನಗಳಿಂದ ಸಾಗಿಬಂದ ಶೂನ್ಯಪೀಠ ಪರಂಪರೆ’ ವಿಷಯ ಕುರಿತು ಸಂಶೋಧಕ ಡಾ.ಬಿ. ರಾಜಶೇಖರಪ್ಪ ಉಪನ್ಯಾಸ ನೀಡುವರು ಎಂದು ತಿಳಿಸಿದರು.

5ರಂದು ಬೆಳಿಗ್ಗೆ 10.30ಕ್ಕೆ ಮಡಿವಾಳ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಸಮ್ಮುಖದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಲಿದೆ. ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಶಿದ್ದರಹಳ್ಳಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಭಾಗವಹಿಸುವರು ಎಂದರು.

ಪ್ರತಿ ವರ್ಷ ನಡೆಯುತ್ತಿದ್ದ ಜನಪದ ಕಲಾತಂಡಗಳ ಮೆರವಣಿಗೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಶ್ರೀಮಠದ ಸ್ವಾಮೀಜಿಗಳು ಕಾರಿನಲ್ಲಿ ಕೋಟೆ ಆವರಣಕ್ಕೆ ತೆರಳಲಿದ್ದಾರೆ. ಸಂಜೆ 5ಕ್ಕೆ ಮೇಲುದುರ್ಗದ ಮುರುಘಾಮಠದಲ್ಲಿ ಚಿತ್ರದುರ್ಗ ರಾಜವಂಶಸ್ಥರಿಂದ ಶ್ರೀಗಳಿಗೆ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಂಜೆ 6.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಮ್ಮುಖ ವಹಿಸಲಿದ್ದು, ಅಥಣಿ ಗಚ್ಚಿನಮಠದ ಶಿವಬಸವ ಗುರುಮುರುಘ ರಾಜೇಂದ್ರ ಸ್ವಾಮೀಜಿ ಉಪಸ್ಥಿತರಿರುವರು. ‘ಬಸವತತ್ವ-ಸಾರ್ವಕಾಲಿಕ ಪ್ರಸ್ತುತತೆ’ ವಿಷಯ ಕುರಿತು ಬೆಂಗಳೂರಿನ ಡಾ.ಬೈರಮಂಗಲ ರಾಮೇಗೌಡ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

6 ರಂದು ಬೆಳಿಗ್ಗೆ 10.3ಕ್ಕೆ ಶೂನ್ಯಪೀಠ ಪರಂಪರೆಯ ಮುರಿಗಾ ಶಾಂತವೀರ ಸ್ವಾಮಿಗಳ ಭಾವಚಿತ್ರದೊಂದಿಗೆ ಪೀಠಾರೋಹಣ ನಡೆಯಲಿದೆ. ನಂತರ ಅಲ್ಲಮಪ್ರಭು, ಬಸವಣ್ಣನವರ ಭಾವಚಿತ್ರ ಮತ್ತು ವಚನಕಟ್ಟುಗಳ ಪಲ್ಲಕ್ಕಿ ಉತ್ಸವ ಸಾಗಲಿದೆ. ಸಂಜೆ 6.30ಕ್ಕೆ ಶರಣಸಂಸ್ಕೃತಿ ಉತ್ಸವದ ಸಮಾರೋಪ ನಡೆಯಲಿದ್ದು, ಹೊಸದುರ್ಗ ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ ಸಮ್ಮುಖ ವಹಿಸುವರು. ಗುರುಮಠಕಲ್‌ನ ಶಾಂತವೀರ
ಗುರುಮುರುಘ ರಾಜೇಂದ್ರ ಸ್ವಾಮೀಜಿ,ತಿಪಟೂರಿನ ಷಡಕ್ಷರ ಮಠದ ರುದ್ರಮುನಿಸ್ವಾಮೀಜಿ ಭಾಗವಹಿಸುವರು. ‘ಪ್ರಾಚೀನ ಮುರುಘಾ ಪೀಠಾಧೀಶರ ಸಾಹಿತ್ಯ’ ಕುರಿತು ಸಾಹಿತಿ ಡಾ.ಬಿ. ನಂಜುಂಡಸ್ವಾಮಿ ಚಿಂತನೆ ನಡೆಸುವರು. ಶ್ರೀಮಠದ ಶಾಖಾಮಠಗಳ ಪೂಜ್ಯರುಹಾಗೂ ವಿವಿಧ ಸಮಾಜದ ಮಠಾಧೀಶರುಭಾಗವಹಿಸುವರು ಎಂದರು.

‘ಒಂಬತ್ತು ದಿನಗಳ ಉತ್ಸವಕ್ಕೆ ಎರಡು ತಿಂಗಳಿನಿಂದ ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆ ನಡೆಸಲಾಗಿತ್ತು. ಮಠದಲ್ಲಿ ನಡೆದ ಘಟನೆಯಿಂದ ಉತ್ಸವವನ್ನು ಮೂರು ದಿನಕ್ಕೆ ಸಿಮೀತಗೊಳಿಸಲಾಗಿದೆ. ಮುರುಘಾ ಮಠದ ಪರಂಪರೆಯಂತೆ ಇಲ್ಲಿನ ಯಾವುದೇ ಆಚರಣೆ, ಉತ್ಸವಗಳನ್ನು ನಿಲ್ಲಿಸದಂತೆ ಮುನ್ನಡೆಸಲಾಗುತ್ತಿದೆ. ಮುರುಘಾ ಮಠಕ್ಕೆ ಚಾರಿತ್ರಿಕ ಪರಂಪರೆ, ಇತಿಹಾಸವಿದೆ. ಜಾತ್ಯತೀತವಾಗಿ ಅನ್ನ, ಅಕ್ಷರ ದಾಸೋಹ ನಿರಂತರವಾಗಿ ನಡೆದುಕೊಂಡು ಬಂದಿದ್ದು ಎಲ್ಲ ಸೇವೆಗಳು ನಿರಂತರವಾಗಿ ನಡೆಯುತ್ತಿವೆ’ ಎಂದುಉತ್ಸವ ಸಮಿತಿಯ ಗೌರವಾಧ್ಯಕ್ಷ ಬಸವಕುಮಾರ ಸ್ವಾಮೀಜಿ ಹೇಳಿದರು.

ಮಹಾಂತ ರುದ್ರೇಶ್ವರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶಿವಬಸವ ಗುರುಮುರುಘ ರಾಜೇಂದ್ರ ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಬಸವಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವಮಹಾಲಿಂಗ ಸ್ವಾಮೀಜಿ, ಬಸವಕಿರಣ ಸ್ವಾಮೀಜಿ, ಇಮ್ಮಡಿ ಬಸವಕೇತೇಶ್ವರ ಸ್ವಾಮೀಜಿ, ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎಸ್‌.ಬಿ. ವಸ್ತ್ರದಮಠ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT