ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

ಸ್ವಚ್ಛತಾ ಕಾರ್ಯ ನಡೆಸಿದ ಶಿಕ್ಷಕರು, ಮಕ್ಕಳ ಸ್ವಾಗತಕ್ಕೆ ಶಾಲೆಗಳಿಗೆ ತಳಿರು–ತೋರಣ
Last Updated 15 ಮೇ 2022, 4:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಕಾರಣ ಶಾಲಾ ಅಂಗಳದಲ್ಲಿ ಕಳೆದೆರಡು ವರ್ಷಗಳಿಂದ ಆವರಿಸಿದ್ದ ಆತಂಕ ದೂರವಾಗಿದೆ. 2022–23ನೇ ಸಾಲಿನ ಶೈಕ್ಷಣಿಕ ವರ್ಷ ನವೋಲ್ಲಾಸ ತಂದಿದೆ.

ಬೇಸಿಗೆ ರಜೆ ಮುಗಿದು ಶಾಲೆಗಳಿಗೆ ಚಿಣ್ಣರು ಬರಲು 24 ಗಂಟೆ ಮಾತ್ರ ಬಾಕಿ ಉಳಿದಿದೆ. ಕೊರೊನಾ ಕಾರಣಕ್ಕೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾದ್ದರಿಂದ ಸರ್ಕಾರ ಅವಧಿಗೂ ಮುನ್ನವೇ ಶಾಲೆ ಪ್ರಾರಂಭಿಸುವ ನಿರ್ಧಾರ ಪ್ರಕಟಿಸಿದ್ದರಿಂದ ಮೇ 16ಕ್ಕೆ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವ ನಡೆಯಲಿದೆ.

ಸೋಮವಾರದಿಂದ ಶಾಲೆಗಳು ಬಾಗಿಲು ತೆರೆಯುತ್ತಿರುವುದರಿಂದ ಶಿಕ್ಷಣ ಇಲಾಖೆ ಸೂಚನೆಯಂತೆ ಶನಿವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದವು. ಸಿಬ್ಬಂದಿ ಜತೆ ಕೈ ಜೋಡಿಸಿದ ಶಿಕ್ಷಕರು ಶಾಲಾ ಆವರಣದಲ್ಲಿ ಬಿದ್ದಿದ್ದ ಕಸ–ಕಡ್ಡಿ, ಘನತ್ಯಾಜ್ಯ ವಿಲೇವಾರಿ ಹಾಗೂ ಕೊಠಡಿ ಸ್ವಚ್ಛತೆ ನಡೆಸಿದರು.

ನಗರದ ವಿಪಿ ಬಡಾವಣೆ, ಬಾರ್‌ಲೈನ್‌ ರಸ್ತೆ, ಮಲ್ಲಾಪುರ ಸೇರಿ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಿದ್ಧತೆಗಳು ನಡೆದವು. ಗ್ರಾಮೀಣ ಭಾಗದಲ್ಲಿ ಮಕ್ಕಳ ಜತೆ ಗ್ರಾಮಗಳಲ್ಲಿ ಸಂಚರಿಸಿದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ದಾಖಲಾತಿ ಆಂದೋಲನ ನಡೆಸಿದರು.

ಸರ್ಕಾರಿ ಶಾಲೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಪ್ರಾರಂಭದ ದಿನ ಶಾಲಾ ಆವರಣದಲ್ಲಿ ಮಕ್ಕಳಿಗೆ ಗುಲಾಬಿ ನೀಡುವುದು, ಅಲಂಕೃತ ಎತ್ತಿನ ಬಂಡಿಯಲ್ಲಿ ಮಕ್ಕಳನ್ನು ಕರೆ ತರುವುದು, ಬಿಸಿಯೂಟಕ್ಕೆ ಸಿಹಿ ಅಡುಗೆ ಮಾಡಿಸುವುದು ಸೇರಿ ವಿವಿಧ ರೀತಿ ಸಿದ್ಧತಾ ಕಾರ್ಯಗಳು ಕಂಡುಬಂದವು.

ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಸೇರಿ 858 ಕಿರಿಯ ಪ್ರಾಥಮಿಕ, 1,168 ಹಿರಿಯ ಪ್ರಾಥಮಿಕ ಹಾಗೂ 490 ಪ್ರೌಢಶಾಲೆಗಳಿವೆ. ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿವೆ. ಸರ್ಕಾರಿ, ಅನುದಾನಿತ ಶಾಲೆಗಳು ಮಾತ್ರ ಪ್ರತಿ ವರ್ಷದಂತೆ ಮಕ್ಕಳ ದಾಖಲಾತಿಗೆ ಎದುರು ನೋಡುತ್ತಿವೆ.

ಶಾಲಾ ಪ್ರಾರಂಭದ ದಿನದಂದಲೇ ಬಿಸಿಯೂಟ ಪ್ರಾರಂಭವಾಗುವ ಕಾರಣ ಅಡುಗೆ ಮನೆಯ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದ್ದು ಸಾಮಾನ್ಯವಾಗಿತ್ತು. ನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿನ ಘಟಕ, ಅಡುಗೆ ಪಾತ್ರೆಗಳನ್ನು ಶುಚಿಗೊಳಿಸಲಾಯಿತು.

ಶನಿವಾರ ಶಾಲೆಗಳಲ್ಲಿ ಸಭೆ ನಡೆಸಿದ ಮುಖ್ಯಶಿಕ್ಷಕರು ಶಾಲಾ ಪ್ರಾರಂಭೋತ್ಸವ ವಿಶೇಷವಾಗಿ ನಡೆಯುವಂತೆ ಸೂಚಿಸಿದರು. ಸ್ಥಳೀಯ ಜನಪ್ರತಿನಿಧಿಗಳಿಗೆ, ಶಿಕ್ಷಣ ಆಸಕ್ತರಿಗೆ, ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಆಹ್ವಾನ ನೀಡಲು ನಿರ್ಧರಿಸಿವೆ.

ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ
2022–23ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ಆರಂಭವಾಗುತ್ತಿರುವ ಹೊತ್ತಲ್ಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಲು ‘ಅತಿಥಿ ಶಿಕ್ಷಕರ’ ನೇಮಕಾತಿಗೆ ಶಿಕ್ಷಣ ಇಲಾಖೆ ಕ್ರಮವಹಿಸಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ 78 ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 499 ಹುದ್ದೆಗಳಿಗೆ ಕ್ರಮವಾಗಿ ₹ 8,000 ಹಾಗೂ ₹ 7,500 ಗೌರವಧನ ನೀಡಿ ನಿಯಮಾನುಸಾರ ಆಯ್ಕೆ ಮಾಡಿಕೊಳ್ಳಲು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ತಮ್ಮ ಹಂತದಲ್ಲಿನ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಮುಖ್ಯಸ್ಥರಿಗೆ ಅಗತ್ಯ ಸೂಚನೆ ನೀಡಿ ಕ್ರಮವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

*

ಸೋಮವಾರದಿಂದ ಶಾಲೆಗಳು ವಿಧ್ಯುಕ್ತವಾಗಿ ಪ್ರಾರಂಭವಾಗುತ್ತಿದ್ದು, ಅಗತ್ಯ ಸಿದ್ಧತೆ ನಡೆಸಲಾಗಿದೆ. ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗಿದೆ. ಶಾಲಾ ಪ್ರಾರಂಭೋತ್ಸವ ಹಬ್ಬದ ರೀತಿ ನಡೆಯಲಿದೆ.
–ರವಿಶಂಕರರೆಡ್ಡಿ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT