ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಂತನ ಆಗಮನಕ್ಕೆ ಸಿದ್ಧತೆ: ಮಣ್ಣಿನ ಮೂರ್ತಿಗೆ ಬೇಡಿಕೆ

ಅಲ್ಲಲ್ಲಿ ಪಿಒಪಿ ಮೂರ್ತಿ ತಯಾರಿಕೆ; ದೂರವಾಗದ ಕುಂಬಾರರ ಆತಂಕ
Last Updated 29 ಆಗಸ್ಟ್ 2022, 3:54 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಗಣೇಶನ ಹಬ್ಬದ ಸಂಭ್ರಮ ಕಳೆಗುಂದಿತ್ತು. ಇದರಿಂದ ಮೂರ್ತಿ ತಯಾರಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಸರ್ಕಾರ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಹೇರಿಲ್ಲ. ಹೀಗಾಗಿ ಎಲ್ಲೆಡೆ ಗಣೇಶೋತ್ಸವಕ್ಕೆ ಸಿದ್ಧತೆ ಜೋರಾಗಿದೆ.

ರಾಜ್ಯದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್ (ಪಿಒಪಿ) ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆಗೆ ಸರ್ಕಾರ ಹಲವು ವರ್ಷಗಳ ಹಿಂದೆಯೇ ನಿಷೇಧ ಹೇರಿದೆ. ಇದರಿಂದ ಇತ್ತೀಚಿನ ದಿನಗಳಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳತ್ತ ಒಲವು ಹೆಚ್ಚುತ್ತಿದೆ. ಹೀಗಾಗಿ ಮಣ್ಣಿನ ವಿನಾಯಕನ ಮೂರ್ತಿಗಳಿಗೆ ಬೇಡಿಕೆ ಇದೆ.

ವರುಣನ ಆರ್ಭಟಕ್ಕೆ ಬಹುತೇಕ ಕೆರೆಗಳು ಕೋಡಿ ಬಿದ್ದ ಕಾರಣ ಜೇಡಿ ಮಣ್ಣಿನ ಕೊರತೆ ಎದುರಾಗಿದೆ. ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರೂ ವಿಗ್ರಹ ತಯಾರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಮೂರ್ತಿ ತಯಾರಕರು ಇದ್ದಾರೆ.

ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪೂಜೆಗೆ ಶ್ರೇಷ್ಠ ಎಂಬುದು ಹಿರಿಯರ ನಂಬಿಕೆ ಮತ್ತು ಸಂಪ್ರದಾಯ. ಆದರೂ ಪಿಒಪಿ ಹಾಗೂ ಹುಲ್ಲಿನಿಂದ ಸಿದ್ಧಗೊಳ್ಳುವ ಮೂರ್ತಿಗಳು ಬೃಹತ್‌ ಪೆಂಡಾಲ್‌ಗಳಲ್ಲಿ ಪ್ರತಿಷ್ಠಾಪನೆಗೊಳ್ಳುವುದು ಸಾಮಾನ್ಯವಾಗಿದೆ.

ಆರು ತಿಂಗಳು ಮೊದಲೇ ಭರಮಸಾಗರ, ಹಂಪನೂರು, ಚಿಕ್ಕಜಾಜೂರು, ಕಡೂರು, ನೆಲ್ಲಿಕಟ್ಟೆ, ರಾಮಗಿರಿ, ಎಚ್‌.ಡಿ.ಪುರ ಸೇರಿದಂತೆ ಸುತ್ತಲಿನ ಕೆರೆಗಳಲ್ಲಿನ ಮಣ್ಣನ್ನು ಟ್ರ್ಯಾಕ್ಟರ್‌ಗಳಲ್ಲಿ ತಂದು ಸಂಗ್ರಹಿಸಲಾಗುತ್ತದೆ. ಬಳಿಕ ಮಣ್ಣಿನ ಜತೆ ಹತ್ತಿ, ನಾರು ಮಿಶ್ರಣ ಮಾಡಿ ಹದಗೊಳಿಸಿ ಕೆಲ ದಿನ ಬಿಡುತ್ತಾರೆ. ಹಬ್ಬಕ್ಕೆ ಎರಡು ತಿಂಗಳು ಬಾಕಿ ಇರುವಂತೆ ಮೂರ್ತಿ ತಯಾರಿಕೆ ಕಾರ್ಯ ಶುರುವಾಗುತ್ತದೆ.

ನಗರದ ದೊಡ್ಡಪೇಟೆಯಲ್ಲಿ 18 ವರ್ಷದಿಂದ ಜೇಡಿಮಣ್ಣಿನಲ್ಲಿ ಮೂರ್ತಿ ತಯಾರಿಸುತ್ತಿರುವ ಸಿದ್ದೇಶ್‌ ಕುಟುಂಬ ಈ ಬಾರಿ ನಂದಿಯ ಮೇಲೆ ಕುಳಿತಿರುವ ಗಣಪತಿ, ಇಲಿಯ ಮೇಲೆ ಸವಾರಿ ಹೊರಟ ಏಕದಂತ, ಗದೆಯ ಮೇಲಿರುವ ವಿನಾಯಕ, ನವಿಲಿನ ಮೇಲಿರುವ ಗಣಪ, ಈಶ್ವರನ ಅವತಾರದ ಗಣಪ.. ಹೀಗೆ ವಿವಿಧ ಶೈಲಿಯ ಒಂದಕ್ಕಿಂತ ಒಂದು ಭಿನ್ನವಾಗಿರುವ ಗಣಪತಿ ಮೂರ್ತಿ ಸಿದ್ಧಪಡಿಸುತ್ತಿದೆ.

ತ್ಯಾಗರಾಜ ಮಾರುಕಟ್ಟೆ ಬಳಿಯ ಕುಟುಂಬವೊಂದು ದೇಗುಲದ ಪ್ರಾಂಗಣದಲ್ಲಿ ಹಲವಾರು ವರ್ಷಗಳಿಂದ ಜೇಡಿಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದೆ. ಈ ಬಾರಿಯೂ ತಯಾರಿಕೆ ನಡೆದಿದೆ.

ಪಿಒಪಿ, ಹುಲ್ಲಿನಿಂದ ಸಿದ್ಧಗೊಳ್ಳುವ ಗಣಪತಿ ಮೂರ್ತಿಗಳು ಕೋಲ್ಕತ್ತ, ಗುಬ್ಬಿ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಹಬ್ಬದ ಮುನ್ನಾದಿನ ಮಾರುಕಟ್ಟೆ ಪ್ರವೇಶಿಸುತ್ತವೆ. ಕಡಿಮೆ ದರಕ್ಕೆ ಮೂರ್ತಿಗಳನ್ನು ಮಾರಾಟ ಮಾಡುವುದರಿಂದ ತಿಂಗಳಿನಿಂದ ಕಷ್ಟಪಟ್ಟ ಮಣ್ಣಿನ ಮೂರ್ತಿ ತಯಾರಕರ ಶ್ರಮ ವ್ಯರ್ಥವಾಗುತ್ತದೆ ಎಂಬುದು ಕುಂಬಾರರ ಅಳಲು.

‘ಪ್ರತಿ ವರ್ಷವೂ ನಮ್ಮಲ್ಲಿಗೆ ಒಂದಿಷ್ಟು ಮಂದಿ ಹಬ್ಬಕ್ಕೂ ಮುನ್ನವೇ ಬಂದು ಮುಂಗಡವಾಗಿ ಕಾಯ್ದಿರಿಸಿಕೊಳ್ಳುತ್ತಾರೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಕ್ಕಾಲು ಅಡಿಯಿಂದ ಹಿಡಿದು ಏಳು ಅಡಿಗಳವರೆಗೂ ಮೂರ್ತಿಗಳನ್ನು ತಯಾರು ಮಾಡುತ್ತೇವೆ’ ಎನ್ನುತ್ತಾರೆ ಕಲಾವಿದ ಗುರುಮೂರ್ತಿ.

‘ಗಣೇಶ ಮೂರ್ತಿಗಳ ತಯಾರಿಕೆ ನಡೆದಿದ್ದು, ಅಂತಿಮವಾಗಿ ಬಣ್ಣದ ಲೇಪನ ನಡೆಯುತ್ತದೆ. ಯಾವುದೇ ರಾಸಾಯನಿಕ ಬಣ್ಣಗಳನ್ನು ಬಳಸದೇ ಕೇವಲ ವಾಟರ್‌ ಕಲರ್‌ ಉಪಯೋಗಿಸುತ್ತಿದ್ದೇವೆ ಎನ್ನುತ್ತಾರೆ’ ಕಲಾವಿದ ವೀರೇಶ್.

ಪಿಒಪಿ, ಹುಲ್ಲು ಹಾಗೂ ತ್ಯಾಜ್ಯದಿಂದ ತಯಾರಿಸುವ ಗಣಪತಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಮುಂದಾಗಬೇಕು. ಆಗ ಮಾತ್ರ ಜೇಡಿಮಣ್ಣಿನ ಮೂರ್ತಿ ತಯಾರಕ ಕಲೆ ಉಳಿಯಲು ಸಾಧ್ಯ ಎನ್ನುತ್ತಾರೆ ಅವರು.

60 ವರ್ಷದಿಂದ ಗಣಪನಿಗೆ ನೈಸರ್ಗಿಕ ಸ್ಪರ್ಶ
–ಸಾಂತೇನಹಳ್ಳಿ ಸಂದೇಶ್‌ ಗೌಡ
ಹೊಳಲ್ಕೆರೆ:
ಆಧುನಿಕತೆಯ ದಿನಮಾನದಲ್ಲೂ ಹೊಳಲ್ಕೆರೆಯಲ್ಲಿ ಜೇಡಿಮಣ್ಣಿನಿಂದ ಸಿದ್ಧಗೊಳ್ಳುವ ಗಣೇಶ ಮೂರ್ತಿಗಳಿಗೆ ಬೇಡಿಕೆ ಕುಸಿದಿಲ್ಲ. ಪಟ್ಟಣದ ಕುಂಬಾರ ಬೀದಿಯ ಜಿ.ಎಚ್. ಈಶ್ವರಪ್ಪ ಅವರ ಕುಟುಂಬ ಕಳೆದ 60 ವರ್ಷಗಳಿಂದ ಪರಿಸರ ಸ್ನೇಹಿ ಮೂರ್ತಿ ತಯಾರಿಸುತ್ತಿರುವುದೇ ಇದಕ್ಕೆ ನಿದರ್ಶನ.

1ರಿಂದ 6 ಅಡಿ ಎತ್ತರದವರೆಗೆ ಮೂರ್ತಿಗಳನ್ನು ಇವರ ಕುಟುಂಬ ತಯಾರಿಸುತ್ತದೆ. ಈ ಕಾರ್ಯಕ್ಕೆ ಮಕ್ಕಳಾದ ಜಗದೀಶ್‌ ಕುಂಬಾರ್‌, ಪ್ರಸನ್ನ, ವೀರೇಶ್, ಸೊಸೆಯರಾದ ಶೀಲಾ, ಅನಿತಾ ಹಾಗೂ ಗಿರೀಶ್‌, ಗಂಗಾಧರ್ ಕೈಜೋಡಿಸುತ್ತಾರೆ.

‘ಈ ವರ್ಷ ಸುಮಾರು 400 ಗಣಪತಿ ಮೂರ್ತಿ ತಯಾರಿಸಿದ್ದೇವೆ. ಎರಡು ವರ್ಷ ಕೊರೊನಾದಿಂದ ವ್ಯಾಪಾರ ಕುಸಿದಿತ್ತು. ಈ ವರ್ಷ ಹೆಚ್ಚು ಮೂರ್ತಿಗಳು ಮಾರಾಟವಾಗುವ ನಿರೀಕ್ಷೆ ಇದೆ. ನಾವು ಮಣ್ಣಿನಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದು, ನೈಸರ್ಗಿಕ ಬಣ್ಣ ಬಳಸುತ್ತೇವೆ’ ಎಂದು ಗಣಪತಿ ತಯಾರಕ ಜಗದೀಶ್‌ ಕುಂಬಾರ್‌ ಹೇಳಿದರು.

‘ಎರಡು ವರ್ಷಗಳಿಂದ ಹೆಚ್ಚು ಮಳೆಯಿಂದ ಕೆರೆಗಳು ತುಂಬಿವೆ. ಇದರಿಂದ ನಮಗೆ ಎರೆಮಣ್ಣು ಸಿಗುತ್ತಿಲ್ಲ. ಸಾಗರ ಕಡೆಯಿಂದ ಬೇಸಿಗೆಯಲ್ಲೇ ಮಣ್ಣು ತರಿಸಿ ಸಂಗ್ರಹಿಸಿದ್ದೆವು. ಉತ್ಸವಗಳು ನಡೆದರೆ ಕಸುಬುದಾರರು ಉಳಿಯುತ್ತಾರೆ. ಪಿಒಪಿ, ಪೇಪರ್‌ ಹಾಗೂ ತ್ಯಾಜ್ಯದಿಂದ ತಯಾರಿಸುವ ಗಣಪತಿಗಳ ಮಾರಾಟಗಾರರ ಹಾವಳಿ ಹೆಚ್ಚುತ್ತಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಅವರು.

ಪರವಾನಗಿಯೇ ಸವಾಲು
–ಸುವರ್ಣಾ ಬಸವರಾಜ್‌
ಹಿರಿಯೂರು:
ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಜಾಗ ಹುಡುಕುವುದು, ವಿವಿಧ ಇಲಾಖೆಗಳಿಂದ ಪರವಾನಗಿ ಪಡೆಯುವುದು ಉತ್ಸವ ಸಮಿತಿಯವರಿಗೆ ದೊಡ್ಡ ಸವಾಲಾಗಿದೆ.

‘ತಿಂಗಳಿಗೂ ಮುನ್ನವೇ ಹಬ್ಬಕ್ಕೆ ಸಿದ್ಧತೆಗಳು ಆರಂಭವಾಗುತ್ತವೆ. ಆದರೆ ಸರ್ಕಾರದ ಬದಲಾಗುವ ನಿಯಮಗಳಿಂದ ಎಲ್ಲವೂ ಕೊನೆಯ ಕ್ಷಣದಲ್ಲಿ ನಿಗದಿಯಾಗುತ್ತವೆ. ಗಣಪತಿ ಉತ್ಸವಕ್ಕೆ ವಿವಿಧ ಇಲಾಖೆಗಳ ಪರವಾನಗಿ ಪಡೆಯಬೇಕು. ಮೊದಲು ಅಲ್ಲಿಂದ ತನ್ನಿ, ನಂತರ ನಾವು ಕೊಡುತ್ತೇವೆ ಎಂದು ಅಲೆದಾಡಿಸುವುದು ಸಾಮಾನ್ಯವಾಗಿದೆ’ ಎಂದು ನಗರದ ನೆಹರೂ ಮೈದಾನದಲ್ಲಿ 51ನೇ ವರ್ಷದ ಆಚರಣೆ ಮಾಡುತ್ತಿರುವ ಶಕ್ತಿ ಗಣಪತಿ ಪೂಜಾ ಸಮಿತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ಎ.ರಾಘವೇಂದ್ರ ಹೇಳಿದರು.

ರಸ್ತೆ ಬಂದ್ ಮಾಡಿ ಚಪ್ಪರ ಹಾಕುವಂತಿಲ್ಲ ಎಂಬ ನಿಯಮದಿಂದಸಮಿತಿಗಳಿಗೆ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ಹುಡುಕುವುದು ದೊಡ್ಡ ಸಾಹಸ. 20–25 ವರ್ಷದಿಂದ ಉತ್ಸವ ನಡೆಸುತ್ತ ಬಂದಿರುವವರಿಗೆ ಈ ಸಮಸ್ಯೆ ಕಾಡುತ್ತಿದೆ.ಸಂಪ್ರದಾಯದಂತೆ ಕೂರಿಸುತ್ತೇವೆ ಎಂದರೂ ಕೇಳುವುದಿಲ್ಲ ಎನ್ನುತ್ತಾರೆ ಟ್ಯಾಂಕ್ ರಸ್ತೆಯಲ್ಲಿ ಗಣೇಶ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಶ್ರೀನಿವಾಸ್.

‘ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದೂ ದುಬಾರಿಯಾಗಿದೆ. ಹೆಸರಾಂತ ಸಂಗೀತಗಾರರನ್ನು ಕರೆಸಬೇಕೆಂದರೆ ₹ 8ಲಕ್ಷದಿಂದ ₹ 10 ಲಕ್ಷ ಪಾವತಿಸಬೇಕು. ಹೀಗಾಗಿ ಹರಿಕಥೆ, ಭಜನೆ ತಂಡದವರಿಗೆ ಒತ್ತು ನೀಡುತ್ತೇವೆ’ ಎನ್ನುತ್ತಾರೆ ಆಯೋಜಕರು.

ವಿದೇಶಕ್ಕೆ ಹಾರಿದ ಗಣಪ
ಚಿತ್ರದುರ್ಗದಲ್ಲಿ 40 ರಿಂದ50 ಕುಟುಂಬಗಳು ಪ್ರತಿ ವರ್ಷ ಗಣಪತಿ ಮೂರ್ತಿ ತಯಾರಿಸುತ್ತವೆ. ಅದರಲ್ಲಿ ಬಹುತೇಕರು ಸಿದ್ಧಗೊಳಿಸುವ ಮೂರ್ತಿಗಳು ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವುದು ವಿಶೇಷ.

ದೊಡ್ಡಪೇಟೆಯ ಸಿದ್ದೇಶ್‌ ಕುಟುಂಬ ತಯಾರಿಸುವ ಮಣ್ಣಿನ ಗಣಪ, ಗೌರಿ ಮೂರ್ತಿಗಳು ಹೊರ ದೇಶಗಳಿಗೆ ಹೋಗುವುದು ಸಾಮಾನ್ಯವಾಗಿದೆ. ಈ ವರ್ಷ ಆಸ್ಟ್ರೇಲಿಯಾಗೆ ಬಾಗಿನ ಗೌರಮ್ಮ ಮೂರ್ತಿಯನ್ನು ಕಳುಹಿಸಿದ್ದಾರೆ. ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ನೆಲೆಸಿರುವ ಚಿತ್ರದುರ್ಗದವರು ತಿಂಗಳು ಮುಂಚೆಯೇ ಬಂದು ಮೂರ್ತಿಗಳನ್ನು ತೆಗೆದುಕೊಂಡು ಹೋಗುವುದು ಸಂಪ್ರದಾಯವಾಗಿದೆ.

ನಿಯಮ ಬದಲಾಗಲಿ
ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರಿಗೆ ಏಕಗವಾಕ್ಷಿ ವ್ಯವಸ್ಥೆ ಮೂಲಕ ಒಂದೇ ಕಚೇರಿಯಲ್ಲಿ ಪರವಾನಗಿ ನೀಡುವಂತಾಗಬೇಕು. ಮಣ್ಣಿನ ಗಣಪತಿಗಳಲ್ಲಿ ಒಮ್ಮೊಮ್ಮೆ ಬಿರುಕು ಕಾಣಿಸಿಕೊಳ್ಳುವುದುಂಟು. ಕೆಲವರು ಬಿರುಕು ಕಣ್ಣಿಗೆ ಬಿದ್ದರೆ ಅದಕ್ಕೆ ಅಪಶಕುನದ ಕತೆ ಕಟ್ಟುತ್ತಾರೆ. ಆದ್ದರಿಂದ ಪಿಓಪಿ ಬದಲು ಪೇಪರ್ ಬಳಸಿ ತಯಾರಿಸುವ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು ಎಂಬುದು ಕೆಲ ಸಮಿತಿಗಳ ಒತ್ತಾಯ.

ಚಪ್ಪರ ಹಾಕಲು ಬೇಕು ಕೌಶಲ
ಮರದ ಪೋಲುಗಳನ್ನು ಹೂತು, ಚಪ್ಪರ ಹಾಕಿ, ಮಳೆಗೆ ಸೋರದ ರೀತಿಯಲ್ಲಿ ಗರಿಯ ಹೊದಿಕೆ ಹಾಸುವುದು ಸುಲಭದ ಕೆಲಸವಲ್ಲ. ಮೊದಲೆಲ್ಲ ದಿನಕ್ಕೆ ₹ 700–800 ಕೂಲಿ ಕೇಳುತ್ತಿದ್ದವರು ಈ ವರ್ಷ ಎರಡು ಪಟ್ಟು ಜಾಸ್ತಿ ಕೇಳುತ್ತಿದ್ದಾರೆ. ಸ್ನೇಹಿತರೆಲ್ಲ ತೊಡಗಿಸುವ ಬಂಡವಾಳ ಚಪ್ಪರಕ್ಕೆ, ಮೂರ್ತಿ ಖರೀದಿಗೆ, ಧ್ವನಿವರ್ಧಕಕ್ಕೆ ಖರ್ಚಾಗುತ್ತದೆ. ಪೂಜೆಗೆ, ನಿತ್ಯ ರಾತ್ರಿ ಕಾವಲು ಕಾಯುವವರಿಗೆ, ಪ್ರಸಾದಕ್ಕೆ ಮತ್ತೆ ದಾನಿಗಳ ಬಳಿ ಹೋಗಬೇಕು. ಒಮ್ಮೊಮ್ಮೆ ಬೇಸರ ಎನಿಸಿದರೂ ಗಣೇಶನ ಹಬ್ಬವನ್ನು ಬಿಡಲು ಮನಸ್ಸು ಒಪ್ಪದು ಎನ್ನುತ್ತದೆ ಯುವ ಸಮುದಾಯ.

ಅಪ್ಪು ಮೂರ್ತಿಗೆ ಬೇಡಿಕೆ
ಚಿತ್ರದುರ್ಗದಲ್ಲಿ ಗಣಪನ ಜತೆ ಪುನೀತ್‌ ರಾಜ್‌ ಕುಮಾರ್‌ ಮೂರ್ತಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಾರಂಭದಲ್ಲಿ ಮಾರಾಟಕ್ಕೆ 2 ಅಡಿಯ ಮೂರ್ತಿಗಳನ್ನು ಸಿದ್ಧಗೊಳಿಸಿದ್ದರು. ಆದರೆ ಗಣಪನ ಜತೆ ‘ಅಪ್ಪು’ವನ್ನು ವಿಸರ್ಜನೆ ಮಾಡುತ್ತಾರೆ ಎಂಬ ಕಾರಣಕ್ಕೆ ಮೂರ್ತಿಗಳ ಮಾರಾಟದಿಂದ ಕೆಲ ತಯಾರಕರು ಹಿಂದೆ ಸರಿದ್ದಾರೆ. ಮನೆಯಲ್ಲಿ ಇಟ್ಟುಕೊಳ್ಳುತ್ತವೆ ಎಂದು ಕೇಳಿದವರಿಗೆ ಮಾತ್ರ ಮೂರ್ತಿ ನೀಡುತ್ತಿದ್ದಾರೆ. ಕೆಲದಿನಗಳಿಂದ ವೀರ ಸಾವರ್ಕರ್‌ ಮೂರ್ತಿಗಳನ್ನು ಗ್ರಾಹಕರು ಕೇಳುತ್ತಿದ್ದಾರೆ ಎನ್ನುತ್ತಾರೆ ಸಿದ್ದೇಶ್‌.

*

ಪಿಒಪಿ ಗಣಪತಿ ನಗರ ಪ್ರವೇಶಿಸದಂತೆ ನಿಗಾ ವಹಿಸಲಾಗಿದೆ. ಒಂದು ವೇಳೆ ಬಂದರೆ ಅವುಗಳನ್ನು ವಶಕ್ಕೆ ಪಡೆಯುತ್ತೇವೆ. ಮಾರಾಟಕ್ಕೆ ಅನುವು ಮಾಡಿಕೊಡುವುದಿಲ್ಲ. ನಗರಸಭೆಯಿಂದ ನಿರ್ಮಿಸುವ ತೊಟ್ಟಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಬೇಕು. ಕಲ್ಯಾಣಿ, ಹೊಂಡಗಳ ಬಳಿ ಸಿಬ್ಬಂದಿ ನಿಯೋಜಿಸಲಾಗುವುದು.
–‌ಜೆ.ಟಿ.ಹನುಮಂತರಾಜು, ಪೌರಾಯುಕ್ತ

*

ಪಿಒಪಿ ಹಾಗೂ ತ್ಯಾಜ್ಯದಿಂದ ತಯಾರಿಸುವ ಗಣಪತಿ ಮೂರ್ತಿಗಳನ್ನು ನಿಷೇಧಿಸುವ ಮೂಲಕ ಕುಂಬಾರರ ಕಸುಬು ಉಳಿಸಬೇಕು.
–ಜಗದೀಶ್‌ ಕುಂಬಾರ್‌, ಗಣಪತಿ ತಯಾರಕ, ಹೊಳಲ್ಕೆರೆ

*

ಗಣಪತಿ ಮೂರ್ತಿಗೆ ಬಣ್ಣ ಬಳಿದು ಅಂತಿಮ ಸ್ಪರ್ಶ ನೀಡುವುದು ನಿಜಕ್ಕೂ ಸಂತಸದ ಕಾರ್ಯ. ಸರ್ಕಾರ ಪಿಒಪಿ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಿ ಸಂಪ್ರದಾಯಿಕ ಮೂರ್ತಿ ತಯಾರಕರನ್ನು ಉಳಿಸಬೇಕು.
–ಇಂದ್ರಮ್ಮ, ಮೂರ್ತಿ ತಯಾರಕರು, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT