ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಗವದ್ಗೀತಾ ಮಹಾಸಮರ್ಪಣೆ’ ಡಿ.7ಕ್ಕೆ

15 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ
Last Updated 4 ಡಿಸೆಂಬರ್ 2019, 9:03 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಕೈಗೆತ್ತಿಕೊಂಡಿರುವ ‘ಭಗವದ್ಗೀತಾ ಅಭಿಯಾನ’ದ ಮಹಾಸಮರ್ಪಣಾ ಸಮಾರಂಭ ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಡಿ.7ಕ್ಕೆ ನಡೆಯಲಿದೆ.

‘ಸಾಮಾಜಿಕ ಸಾಮರಸ್ಯ, ವ್ಯಕ್ತಿತ್ವ ವಿಕಸನ ಹಾಗೂ ರಾಷ್ಟ್ರೀಯ ಭಾವೈಕ್ಯ ಮೂಡಿಸುವ ಉದ್ದೇಶದಿಂದ ಮಠ 2007ರಿಂದ ಅಭಿಯಾನ ನಡೆಸುತ್ತಿದೆ. ಚಿತ್ರದುರ್ಗದಲ್ಲಿ ಅ.30ರಂದು ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು, ಭಗವದ್ಗೀತೆಯ ಸಂದೇಶವನ್ನು ತಲುಪಿಸುವ ಕಾರ್ಯ ರಾಜ್ಯದ ಎಲ್ಲೆಡೆ ತಿಂಗಳು ಕಾಲ ನಡೆದಿದೆ’ ಎಂದು ಭಗವದ್ಗೀತಾ ಅಭಿಯಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ರಾಜೀವಲೋಚನ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಚಿತ್ರದುರ್ಗ ಜಿಲ್ಲೆಯ 1,050 ಕೇಂದ್ರಗಳಲ್ಲಿ ಅಭಿಯಾನ ನಡೆದಿದೆ. 15 ಸಾವಿರಕ್ಕೂ ಹೆಚ್ಚು ಮಕ್ಕಳು ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ದೇಗುಲ, ಕಾರಾಗೃಹ ಸೇರಿ ಹಲವೆಡೆ ಸಾರ್ವಜನಿಕ ಸಮಾರಂಭಗಳನ್ನು ನಡೆಸಲಾಗಿದೆ. ಕಾರಾಗೃಹದಲ್ಲಿ ನಡೆದ ಉಪನ್ಯಾಸಕ್ಕೆ ನಿರೀಕ್ಷೆಗೂ ಮೀರಿ ಪ್ರತಿಸ್ಪಂದನೆ ಸಿಕ್ಕಿದ್ದು, ಕೈದಿಗಳ ಮನಪರಿವರ್ತನೆಗೆ ಪ್ರೇರಣೆ ನೀಡಿದೆ’ ಎಂದು ಹೇಳಿದರು.

‘ಭಗವದ್ಗೀತೆಯ 16ನೇ ಅಧ್ಯಾಯದಲ್ಲಿರುವ 24 ಶ್ಲೋಕಗಳನ್ನು ಮಕ್ಕಳು ಕಂಠಪಾಠ ಮಾಡಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ವಕೀಲರು, ಭಜನಾ ಮಂಡಳಿಯ ಸದಸ್ಯರು, ಸ್ವಸಹಾಯ ಸಂಘದ ಮಹಿಳಾ ಕಾರ್ಯಕರ್ತರಿಗೂ ತರಬೇತಿ ನೀಡಲಾಗಿದೆ’ ಎಂದು ವಿವರಿಸಿದರು.

‘ರಾಜ್ಯಮಟ್ಟದ ಮಹಾಸಮರ್ಪಣಾ ಸಮಾರಂಭಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿವೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರ ‘ಗೀತಾಂತರಂಗ– ಭಾಗ 3’ ಇಂಗ್ಲಿಷ್‌ ಕೃತಿ ಬಿಡುಗಡೆಯಾಗಲಿದೆ. ರಾಜ್ಯ ಮಟ್ಟದ ಸ್ವರ್ಧಾ ವಿಜೇತರಿಗೆ ಶಿಕ್ಷಣ ಸಚಿವ ಎಸ್.ಸುರೇಶಕುಮಾರ್‌ ಬಹುಮಾನ ವಿತರಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿಲ್ಲಪ್ಪ ಭಾಗವಹಿಸಲಿದ್ದಾರೆ. ಸಾವಿರಾರು ಮಕ್ಕಳು ಏಕಕಂಠದಲ್ಲಿ ಭಗವದ್ಗೀತೆ ಪಠಣ, ನೃತ್ಯ ರೂಪಕ ನಡೆಯಲಿದೆ. 15 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ’ ಎಂದು ಹೇಳಿದರು.

ಭಗವದ್ಗೀತಾ ಅಭಿಯಾನ ಸಮಿತಿ ಉಪಾಧ್ಯಕ್ಷ ಟಿ.ಕೆ. ನಾಗರಾಜ ರಾವ್‌, ದತ್ತಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT