ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವೆ ಸ್ಥಗಿತ: ಆಶಾ ಕಾರ್ಯಕರ್ತೆಯರ ಎಚ್ಚರಿಕೆ

Last Updated 8 ಜುಲೈ 2020, 12:39 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹ 12 ಸಾವಿರ ಗೌರವಧನ ನೀಡಬೇಕು ಎಂದು ಒತ್ತಾಯಿಸಿ ಜುಲೈ 10ರಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು’ ಎಂದು ಎಐಯುಟಿಯುಸಿ ಮುಖಂಡ ರವಿಕುಮಾರ್ ತಿಳಿಸಿದರು.

‘ಜನವರಿ ತಿಂಗಳಿನಿಂದ ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಹತ್ತು ಬಾರಿ ಮನವಿ ಸಲ್ಲಿಸಲಾಗಿದೆ. ಈ ಕುರಿತು ಚರ್ಚಿಸಲು ಈವರೆಗೂ ಸರ್ಕಾರ ಪ್ರತಿಕ್ರಿಯಿಸಿಲ್ಲ. ಈ ಕಾರಣಕ್ಕಾಗಿ ಪ್ರತಿಭಟನೆ ಅನಿವಾರ್ಯವಾಗಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ಪ್ರಸ್ತುತ ನೀಡುತ್ತಿರುವ ಗೌರವಧನ ಜೀವನ ನಿರ್ವಹಣೆಗೂ ಸಾಕಾಗುತ್ತಿಲ್ಲ. ಕೆಲಸಕ್ಕೆ ತಕ್ಕ ಗೌರವಧನ ಸಿಗಬೇಕು ಎಂಬುದು ಬಹುದಿನದ ಬೇಡಿಕೆಯಾಗಿದ್ದು, ಅದನ್ನು ಸರ್ಕಾರ ಈಡೇರಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು 1.59 ಕೋಟಿ ಮನೆ-ಮನೆ ಸಮೀಕ್ಷೆ, ಅಂತರ ರಾಜ್ಯ ಪ್ರಯಾಣಿಕರು, ವಲಸೆ ಕಾರ್ಮಿಕರು ಸೇರಿ ಇತರರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿದ್ದಾರೆ. ಕೊರೊನಾ ಸೋಂಕು ಪತ್ತೆ ಹೆಚ್ಚುವಲ್ಲಿ ಸಕ್ರಿಯರಾಗಿದ್ದಾರೆ. ಇದೇ ಕಾರಣಕ್ಕಾಗಿ ಕೇಂದ್ರ ಆರೋಗ್ಯ ಸಚಿವಾಲಯ ಕೊರೊನಾ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿರುವುದಕ್ಕೆ ಇವರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೂ, ಇವರಿಗೆ ನ್ಯಾಯ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಂಟೈನ್‌ಮೆಂಟ್ ಪ್ರದೇಶದಲ್ಲಿ ನಿತ್ಯ ಮಾಹಿತಿ ಸಂಗ್ರಹ, ಇನ್‌ಫ್ಲುಯೆಂಜಾ, ತೀವ್ರ ಉಸಿರಾಟದ ತೊಂದರೆ ಇರುವವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ, ಫೀವರ್‌ ಕ್ಲಿನಿಕ್‌ಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಜೀವ ಲೆಕ್ಕಿಸದೇ ಕೋವಿಡ್ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಸೋಂಕಿತರ ನಡುವೆ ನಿತ್ಯ ಕೆಲಸ ಮಾಡುವ ಇವರ ಆರೋಗ್ಯ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸುರಕ್ಷತಾ ಉಪಕರಣಗಳನ್ನು ಆಶಾ ಕಾರ್ಯಕರ್ತೆಯರಿಗೂ ನೀಡಬೇಕು’ ಎಂದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷೆ ಗಿರಿಜಮ್ಮ, ಸದಸ್ಯರಾದ ಲಕ್ಷ್ಮಿ, ಶಿಲ್ಪಾ, ಎಐಎಂಎಸ್‌ಎಸ್‌ನ ಸುಜಾತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT