ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಿಕ್ಷಣ ಕನ್ನಡದಿಂದಲೇ ಆರಂಭವಾಗಲಿ: ಡಾ.ಎಚ್. ಶಿವಲಿಂಗಪ್ಪ

ಶಿವಪುರದಲ್ಲಿ ಹರಿದ ಕನ್ನಡದ ತೇರು, ಅಕ್ಷರ ಜಾತ್ರೆಯಲ್ಲಿ ಸಂಭ್ರಮಿಸಿದ ಸಾಹಿತ್ಯಾಸಕ್ತರು
Last Updated 31 ಜನವರಿ 2019, 14:48 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪ್ರಾಥಮಿಕ ಶಿಕ್ಷಣವನ್ನು ಕನ್ನಡದಿಂದಲೇ ಆರಂಭಿಸಬೇಕು ಎಂದು ಅನುವಾದಕ, ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್. ಶಿವಲಿಂಗಪ್ಪ ಹೇಳಿದರು.

ತಾಲ್ಲೂಕಿನ ಶಿವಪುರದಲ್ಲಿ ಗುರುವಾರ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ತೆಲುಗು, ತಮಿಳು, ಮಲಯಾಳಿ, ಮರಾಠಿ, ಉರ್ದು ಭಾಷಿಕರು ತಮ್ಮ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಸುತ್ತಾರೆ. ಫ್ರಾನ್ಸ್, ಜರ್ಮನಿ, ಜಪಾನ್, ಚೀನಾ ದೇಶಗಳು ಇಂಗ್ಲಿಷ್ ಬಳಸದಿದ್ದರೂ, ಪ್ರಪಂಚದ ಮುಂದುವರಿದ ರಾಷ್ಟ್ರಗಳಾಗಿವೆ. ಆದರೆ ಕನ್ನಡಿಗರು ಮಾತ್ರ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸುತ್ತಾರೆ. ಸರ್ಕಾರವೂ ಇಂಗ್ಲಿಷ್ ಶಾಲೆಗಳನ್ನು ತೆರೆದು ಪೋಷಕರನ್ನು ಪ್ರೇರೇಪಿಸುತ್ತಿದೆ. ಮಾತೃಭಾಷೆ ರಕ್ತದಲ್ಲಿ ಸೇರಿರುತ್ತದೆ. ಮನುಷ್ಯನ ಅಂತರಾತ್ಮದಲ್ಲಿ ಅದು ಅಡಗಿರುತ್ತದೆ ಎಂದರು.

ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಭಾಷಾಪ್ರೇಮ ಮೂಡಿಸುವ ಹಾಗೂ ಸರ್ಕಾರದ ಕಣ್ಣು ತೆರೆಸುವ ಕೆಲಸ ಆಗಬೇಕಿದೆ. ಮಾತೃಭಾಷೆ ಕಲಿಕೆಯ ನಂತರ ಉಳಿದ ಭಾಷೆಗಳನ್ನು ಕಲಿಯಬೇಕು. ವ್ಯವಹಾರಿಕ ದೃಷ್ಟಿಯಿಂದ ಹಿಂದಿ, ಇಂಗ್ಲಿಷ್ ಅನಿವಾರ್ಯವಾಗಿದ್ದು, ಜ್ಞಾನಾರ್ಜನೆಗೆ ಆ ಭಾಷೆಗಳನ್ನೂ ಕಲಿಯಬೇಕು. ಸಾಹಿತ್ಯ ಮನುಷ್ಯನನ್ನು ಪಕ್ವಗೊಳಿಸುತ್ತದೆ. ಮೌಲ್ಯಗಳನ್ನು ಎತ್ತಿಹಿಡಿಯಲು ಸಾಹಿತ್ಯ ಬೇಕು ಎಂದು ಪ್ರತಿಪಾದಿಸಿದರು.

ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಒತ್ತು:

ಶಾಸಕ ಎಂ.ಚಂದ್ರಪ್ಪ ‘ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಿದ ಶಿಥಿಲ ಕಟ್ಟಡಗಳಲ್ಲೇ ಇಂದಿಗೂ ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಶಾಲೆಗೆ ಅಗತ್ಯವಾದ ಕಟ್ಟಡ, ಪೀಠೋಪಕರಣ ಮತ್ತಿತರ ಸೌಲಭ್ಯಗಳನ್ನು ನೀಡಲಾಗುವುದು. ಶಿವಪುರದ ಪ್ರತೀ ಬೀದಿಯಲ್ಲೂ ಕಾಂಕ್ರೀಟ್ ರಸ್ತೆ ಮಾಡಿದ್ದೇವೆ. ಗ್ರಾಮಕ್ಕೆ ಅತ್ಯುತ್ತಮ ಆಸ್ಪತ್ರೆ, ಮಲ್ಕಾಪುರ ಮಾರ್ಗವಾಗಿ ಪಟ್ಟಣದವರೆಗೆ ಸುಸಜ್ಜಿತ ರಸ್ತೆ ನಿರ್ಮಿಸಿದ್ದೇವೆ. ನಾನೇ ಪ್ರತೀ ಹಳ್ಳಿಗೆ ಭೇಟಿ ನೀಡಿ ಸಮಸ್ಯೆ ಗುರುತಿಸಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ವರ್ಷದ ಒಳಗೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಹೊಣೆ ನನ್ನ ಮೇಲಿದೆ’ ಎಂದರು.

‘ತಾಲ್ಲೂಕಿನಲ್ಲಿ ಕನ್ನಡ ಭವನ ನಿರ್ಮಿಸಲು ₹ 20 ಲಕ್ಷ ಅನುದಾನ ನೀಡುತ್ತೇನೆ. ₹ 13 ಕೋಟಿ ವೆಚ್ಚದಲ್ಲಿ ಕೋಟೆಹಾಳ್, ಶಿವಪುರ, ಮಲ್ಲಾಡಿಹಳ್ಳಿ ಮಾರ್ಗವಾಗಿ ಬಸಾಪುರ ಗೇಟ್ ವರೆಗೆ ರಸ್ತೆ ನಿರ್ಮಿಸಲಾಗುವುದು. ₹ 16.5 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿದ್ಯುತ್ ವಿತರಣಾ ಕೇಂದ್ರ ಮಾರ್ಚ್ ನಿಂದ ಕಾರ್ಯಾರಂಭ ಮಾಡಲಿದೆ’ ಎಂದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಕವಿ ಚಂದ್ರಶೇಖರ ತಾಳ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ತಿಪ್ಪೇಸ್ವಾಮಿ, ಮಹೇಶ್ವರಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸವಿತಾ ಬಸವರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಜಾತಾ ಧನಂಜಯ ನಾಯ್ಕ, ಗಿರಿಜಾ ಅಜ್ಜಯ್ಯ, ಭಾರತಿ ಕಲ್ಲೇಶ್, ಲೋಹಿತ್ ಕುಮಾರ್, ಡಿ.ಸಿ.ಮೋಹನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆಂಚಮ್ಮ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ದೊಡ್ಡ ಮಲ್ಲಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT