ಚುನಾವಣಾ ಕರ್ತವ್ಯಕ್ಕೆ ಕಾರಾಗೃಹ ಸಿಬ್ಬಂದಿ

ಮಂಗಳವಾರ, ಏಪ್ರಿಲ್ 23, 2019
33 °C
ಪೊಲೀಸರೊಂದಿಗೆ ಭದ್ರತೆಗೆ ನಿಯೋಜನೆ, ಇದೇ ಮೊದಲ ಪ್ರಯತ್ನ

ಚುನಾವಣಾ ಕರ್ತವ್ಯಕ್ಕೆ ಕಾರಾಗೃಹ ಸಿಬ್ಬಂದಿ

Published:
Updated:

ಚಿತ್ರದುರ್ಗ: ಚುನಾವಣಾ ಕರ್ತವ್ಯಕ್ಕೆ ಕಾರಾಗೃಹ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಇದೇ ಮೊದಲ ಬಾರಿಗೆ ಪೊಲೀಸರೊಂದಿಗೆ ಭದ್ರತೆ ಕಾಪಾಡುವ ಕೆಲಸ ಮಾಡಲಿದ್ದಾರೆ.

ಕಾರಾಗೃಹ ಇಲಾಖೆ ಈಚೆಗೆ ನೇಮಕಾತಿ ಮಾಡಿಕೊಂಡಿದ್ದ 1,070 ವಾರ್ಡರ್‌ ಪ್ರಶಿಕ್ಷಣಾರ್ಥಿಗಳನ್ನು ಹಲವು ಲೋಕಸಭಾ ಕ್ಷೇತ್ರಗಳಿಗೆ ನಿಯೋಜಿಸಲಾಗಿದೆ. ಏ.6ರಂದು ಕರ್ತವ್ಯಕ್ಕೆ ಹಾಜರಾಗಿರುವ ವಾರ್ಡರ್‌ಗಳು ಪೊಲೀಸರ ಕರ್ತವ್ಯಕ್ಕೆ ನೆರವಾಗುತ್ತಿದ್ದಾರೆ.

ಕಲಬುರ್ಗಿ ತರಬೇತಿ ಶಾಲೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆಯುತ್ತಿದ್ದ 132 ವಾರ್ಡರ್‌ಗಳು ಚಿತ್ರದುರ್ಗ ಜಿಲ್ಲೆಗೆ ಬಂದಿದ್ದಾರೆ. ಏ.9ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ರ‍್ಯಾಲಿ ಭದ್ರತೆಗೆ ಕೆಲಸ ಮಾಡಿದ್ದಾರೆ. ಏ.13ರಂದು ನಡೆಯಲಿರುವ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಸಭೆಗೂ ಭದ್ರತೆ ಒದಗಿಸಲಿದ್ದಾರೆ. ಬಳಿಕ ಜಿಲ್ಲೆಯ ಎಲ್ಲ ಠಾಣೆಗಳಿಗೆ ಇವರನ್ನು ಕಳುಹಿಸಲಾಗುತ್ತದೆ.

ವಾರ್ಡರ್‌ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವಂತೆ ಡಿಜಿಪಿ ನೀಲಮಣಿ ರಾಜು ಮಾರ್ಚ್‌ 23ರಂದು ಆದೇಶ ಹೊರಡಿಸಿದ್ದರು. ತರಬೇತಿ ಹಂತದ ಕಾನ್‌ಸ್ಟೆಬಲ್‌ ಸೇವೆ ಬಳಸಿಕೊಳ್ಳುವ ರೀತಿಯಲ್ಲಿಯೇ ಇವರ ಸೇವೆಯನ್ನೂ ಪಡೆಯಲಾಗುತ್ತಿದೆ.

ಬೆಳಗಾವಿ ತರಬೇತಿ ಶಾಲೆಯಲ್ಲಿದ್ದ ಪ್ರಶಿಕ್ಷಣಾರ್ಥಿಗಳನ್ನು ಮಂಡ್ಯ ಜಿಲ್ಲೆಗೆ, ಖಾನಾಪುರ ಶಾಲೆಯ ವಾರ್ಡರ್‌ಗಳನ್ನು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ, ಧಾರವಾಡದ ಮಹಿಳಾ ತರಬೇತಿ ಶಾಲೆಯ ಪ್ರಶಿಕ್ಷಣಾರ್ಥಿಗಳನ್ನು ಹಾಸನಕ್ಕೆ ನಿಯೋಜಿಸಲಾಗಿದೆ. ತುಮಕೂರು ಹಾಗೂ ಮೈಸೂರು ಕಾರಾಗೃಹ ತರಬೇತಿ ಸಂಸ್ಥೆಯಲ್ಲಿದ್ದವರನ್ನು ಅದೇ ಲೋಕಸಭಾ ಕ್ಷೇತ್ರದ ಭದ್ರತೆಗೆ ಕಳುಹಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !