ಗುರುವಾರ , ನವೆಂಬರ್ 21, 2019
21 °C
ಜಮುರಾ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶಿವಮೂರ್ತಿ ಮುರುಘಾ ಶರಣರು

ಪ್ರಗತಿಪರರಿಗೆ ಬೆಂಬಲ ದೊರೆಯುವುದು ಕಷ್ಟ

Published:
Updated:
Prajavani

ಚಿತ್ರದುರ್ಗ: ‘ಪ್ರಸ್ತುತ ಸಮಾಜದಲ್ಲಿ ವೈದಿಕತೆ, ಮೂಢನಂಬಿಕೆಗಳೊಂದಿಗೆ ಸಾಗುವವರಿಗೆ ಜನ ಹಣ ನೀಡುತ್ತಾರೆ. ಆದರೆ, ವೈಚಾರಿಕತೆ, ಪ್ರಗತಿಪರ ಆಲೋಚನೆ ಮಾಡುವವರಿಗೆ ಬೆಂಬಲ ದೊರೆಯುವುದು ಕಷ್ಟ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದ ಅನುಭವ ಮಂಟಪದಲ್ಲಿ ಮಠ, ಜಮುರಾ ಕಲಾಲೋಕದಿಂದ ಹಮ್ಮಿಕೊಂಡಿರುವ ‘ಜಮುರಾ ರಾಷ್ಟ್ರೀಯ ನಾಟಕೋತ್ಸವ’ ಮೂರನೇ ದಿನದ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.

‘ಸುಳ್ಳು ವಾದಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಅವೈಜ್ಞಾನಿಕತೆಯ ಹಾದಿಯಲ್ಲಿ ಸಾಗುತ್ತಿರುವ ಜನರಿಗೆ ವಾಸ್ತವಿಕತೆಯನ್ನು ಎತ್ತಿಹಿಡಿಯುವ ಪ್ರಯತ್ನದೊಂದಿಗೆ ಬದುಕನ್ನು ಕಟ್ಟಿಕೊಡಲು ನಮ್ಮ ಮಠವು ಶ್ರಮಿಸುತ್ತಿದೆ’ ಎಂದರು.

ವಸತಿ ಸಚಿವ ವಿ. ಸೋಮಣ್ಣ, ‘ಮುರುಘಾಮಠದ ಶರಣರು ನಾಟಕೋತ್ಸವದ ಮೂಲಕ ಪ್ರತಿಭೆಗಳಿಗೆ ಅವಕಾಶ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಅಲ್ಲದೆ, ಭಾವೈಕ್ಯತೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಮಠವು ಜ್ಞಾನದಾಸೋಹ, ಅನ್ನದಾಸೋಹ ಮಾಡುತ್ತಿದೆ. ನಾವೆಲ್ಲರೂ ಸಮಾಜಮುಖಿಗಳಾಗಿ ಸಮಾಜಕ್ಕೆ ಕೊಡುಗೆ ನೀಡುವಂತೆ ಶರಣ ಸಂಸ್ಕೃತಿ ಉತ್ಸವ, ರಾಷ್ಟ್ರೀಯ ನಾಟಕೋತ್ಸವ ಪ್ರೇರೇಪಿಸುತ್ತಿದೆ. ಲೋಕಕಲ್ಯಾಣಕ್ಕಾಗಿ ಎಲ್ಲ ಧರ್ಮ, ಜನಾಂಗದವರನ್ನು ಸಮನಾಗಿ ಕಾಣುತ್ತ ಹಲವು ಸಂಕಷ್ಟದ ಸಂದರ್ಭಗಳಲ್ಲೂ ಜನಸಾಮಾನ್ಯರ ಪರವಾದ ಕಾರ್ಯಗಳನ್ನು ಆಯೋಜಿಸುತ್ತಿದೆ’ ಎಂದರು.

‘ರೈತರನ್ನು ಸದಾ ಸಚೇತನಗೊಳಿಸುವ, ಅವರ ಬದುಕನ್ನು ಸುಧಾರಿಸುವ ಹತ್ತಾರು ಕೆಲಸಗಳನ್ನು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ರಾಜ್ಯ ಸರ್ಕಾರ ಮಾಡುತ್ತಿದೆ’ ಎಂದು ಸೋಮಣ್ಣ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್, ಕೆ.ಪಿ.ಎಂ.ಗಣೇಶಯ್ಯ ಇದ್ದರು. ಹಿರಿಯ ರಂಗಕಲಾವಿದೆ ಹಿರಿಯೂರಿನ ಭಾಗ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ನೀನಾಸಂ ತಂಡದ ಕಲಾವಿದರು ಕರ್ಣ ಸಾಂಗತ್ಯ ನಾಟಕ ಪ್ರದರ್ಶಿಸಿದರು.

ಪ್ರತಿಕ್ರಿಯಿಸಿ (+)