ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ, ಪ್ರಬುದ್ಧತೆಯಿಂದ ಸಮಾಜಕ್ಕೆ ಒಳಿತು: ಶಿವಮೂರ್ತಿ ಮುರುಘಾ ಶರಣರು

ಬಿಜೆಪಿ ಮುಖಂಡ ಸೇತೂರಾಂ ಮನೆಯಲ್ಲಿ ನಡೆದ ನಿತ್ಯ ಕಲ್ಯಾಣ
Last Updated 19 ಆಗಸ್ಟ್ 2021, 14:45 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮಾನವರಿಂದ ಸಮಾಜಕ್ಕೆ ಒಳಿತಾಗಬೇಕು. ಅದಕ್ಕಾಗಿ ಪ್ರತಿಯೊಬ್ಬರು ಪ್ರಾಮಾಣಿಕತೆ, ಪ್ರಬುದ್ಧತೆ, ಪ್ರಯೋಗಶೀಲತೆಯಿಂದ ನಡೆದುಕೊಳ್ಳಬೇಕು’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಇಲ್ಲಿನ ಬ್ಯಾಂಕ್ ಕಾಲೊನಿಯ ಸೇತೂರಾಂ ಅವರ ಮನೆಯಲ್ಲಿ ಮುರುಘಾಮಠದಿಂದ ನಡೆದ ‘ನಿತ್ಯ ಕಲ್ಯಾಣ’ ಕಾರ್ಯಕ್ರಮದಲ್ಲಿ ‘ಭರವಸೆಯ ವ್ಯಕ್ತಿ ಆಗುವುದು ಹೇಗೆ?’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಸ್ವಾರ್ಥದಿಂದ ತುಂಬಿರುವ ಜಗತ್ತಿನಲ್ಲಿ ದೇಶ ಮತ್ತು ಸಮಾಜಕ್ಕೆ ನಿಸ್ವಾರ್ಥಿಗಳು ಹೆಚ್ಚಾಗಿ ಬೇಕಾಗಿದ್ದಾರೆ. ಮಾನವರಲ್ಲಿ ಜನಮುಖಿ ಆಲೋಚನೆಗಳು ಬಂದಾಗ ಇದು ಸಾಧ್ಯವಾಗುತ್ತದೆ. ಸನ್ಮಾರ್ಗದಲ್ಲಿ ನಡೆಸುವ ಬೋಧಕರ ಅಗತ್ಯ ಪ್ರಸ್ತುತ ದಿನಗಳಲ್ಲಿ ತುಂಬಾ ಇದೆ. ರಾಷ್ಟ್ರದ ಹಿತಕಾಯುವ, ಭದ್ರ ಭವಿಷ್ಯ ಸೃಷ್ಟಿಸುವವರ ಅಗತ್ಯವೂ ಇದೆ’ ಎಂದು ಅಭಿಪ್ರಾಯಪಟ್ಟರು.

ಭರವಸೆ ಬದ್ಧತೆಯೊಂದಿಗೆ ಸಾಗುವ ಏಣಿಯಾಗಿದೆ. ಸತ್ಪುರುಷರು, ಸಮಾಜ ಚಿಂತಕರು, ದಾರ್ಶನಿಕರಲ್ಲಿ ಬದ್ಧತೆಯ ಜತೆಗೆ ಪ್ರಬುದ್ಧತೆ ಇತ್ತು. ಆದರೆ, 21ನೇ ಶತಮಾನದಲ್ಲಿ ಆದರ್ಶದ ಬದುಕು ನುಚ್ಚು ನೂರಾಗುತ್ತಿವೆ. ಬದ್ಧತೆಗೆ ಒಳಗಾಗದೆ ಅಪ್ರಬುದ್ಧ ನಡೆ–ನುಡಿ ಜಾಸ್ತಿಯಾಗುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ವಿಷಾದಿಸಿದರು.

‘ಭಂಡತನ ಬದುಕಿನಯಾವುದೇ ಹಂತದಲ್ಲಿಯೂ ಆವರಿಸಬಾರದು. ಇದೊಂದು ರೀತಿ ಗೋಸುಂಬೆ ಬಣ್ಣ ಬದಲಿಸಿದಂತೆ. ಇಂತಹ ವ್ಯಕ್ತಿಗಳು ನಾಟಕೀಯ ನಡವಳಿಕೆಯೊಂದಿಗೆ ಯಾವುದೇ ದುಷ್ಕೃತ್ಯಕ್ಕೂ ಸಿದ್ಧರಿರುತ್ತಾರೆ’ ಎಂದ ಅವರು, ‘ಬಂಡವಾಳ ಇಲ್ಲದೆ ಕೆಲವರಿಗೆ ಬದುಕು ಕಷ್ಟವಾಗುತ್ತದೆ. ಬಂಡವಾಳಕ್ಕಿಂತ ನಂಬಿಕೆ, ಆತ್ಮವಿಶ್ವಾಸ ಇದ್ದಲ್ಲಿ ಬದುಕು ಹಸನಾಗುತ್ತದೆ’ ಎಂದು ಸಲಹೆ ನೀಡಿದರು.

ಡಾಬಸ್‌ಪೇಟೆಯ ವನಕಲ್ಲು ಮಲ್ಲೇಶ್ವರ ಮಠದ ಬಸವರಮಾನಂದ ಸ್ವಾಮೀಜಿ, ‘ನಂಬಿಕೆಗೆ ಅರ್ಹರಾದವರು ಮಾತ್ರ ಭರವಸೆಯ ವ್ಯಕ್ತಿಗಳಾಗುತ್ತಾರೆ. ಯಾವ ಸಾಧನೆ ಮಾಡಬೇಕೆಂದರು ನಂಬಿಕೆ ಬಹಳ ಮುಖ್ಯ. ಬಸವಣ್ಣ ಅವರ ತತ್ವಾದರ್ಶದ ಹಾದಿಯಲ್ಲಿ ನಡೆದರೆ ನೂರಾರು ಸಮಸ್ಯೆ ಎದುರಾದರೂ ಧೈರ್ಯವಾಗಿ ನಿಭಾಯಿಸುವ ಶಕ್ತಿ, ಸಾಮರ್ಥ್ಯ ಬೆಳೆಯಲಿದೆ’ ಎಂದರು.

ಬಸವನಾಗಿದೇವ ಸ್ವಾಮೀಜಿ, ಕಾರ್ಯಕ್ರಮದ ದಾಸೋಹಿ ಸೇತೂರಾಂ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT