ಸಾರಿಗೆ ಇಲಾಖೆ ವಿರುದ್ಧ ಪ್ರತಿಭಟನೆ

7
ತಾಂತ್ರಿಕ ಸಮಸ್ಯೆ, ವಾಹನ ನೋಂದಣಿಗೆ ತೊಂದರೆ

ಸಾರಿಗೆ ಇಲಾಖೆ ವಿರುದ್ಧ ಪ್ರತಿಭಟನೆ

Published:
Updated:
ಚಿತ್ರದುರ್ಗದ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿದ ವಾಹನ ಮಾಲೀಕರೊಂದಿಗೆ ಸಾರಿಗೆ ಅಧಿಕಾರಿ ಶ್ರೀಕಾಂತ್‌ ಮಾತನಾಡಿದರು

ಚಿತ್ರದುರ್ಗ: ವಾಹನ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲು ಮುಂದಾದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಸಿಬ್ಬಂದಿಯ ಕ್ರಮವನ್ನು ಖಂಡಿಸಿ ಸಾರ್ವಜನಿಕರು ಮಂಗಳವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಆರ್‌ಟಿಒ ಕಚೇರಿಯ ಗೇಟ್‌ ಮುಚ್ಚಿದ ಪ್ರತಿಭಟನಾಕಾರರು ಸಾರಿಗೆ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ವಾಹನ ನೋಂದಣಿಗೆ ಅವಕಾಶ ಕಲ್ಪಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ವಾಹನ ನೋಂದಣಿ, ತೆರಿಗೆ, ಶುಲ್ಕ ಪಾವತಿ ಸೇರಿ ವಿವಿಧ ಸೇವೆಗಳಿಗೆ ಸಾರಿಗೆ ಇಲಾಖೆ ‘ವಾಹನ–4’ ಎಂಬ ತಂತ್ರಾಂಶ ಪರಿಚಯಿಸುತ್ತಿದೆ. ನೂತನ ವಾಹನ ಖರೀದಿಸಿದ ಮಾಲೀಕರು ನೋಂದಣಿ ಹಾಗೂ ಶುಲ್ಕ ಪಾವತಿಗೆ ಆರ್‌ಟಿಒ ಕಚೇರಿಗೆ ಬರುವ ಅಗತ್ಯವಿಲ್ಲ. ವಾಹನಗಳ ಷೋರೂಂಗಳಲ್ಲಿಯೇ ಈ ಸೇವೆ ಪಡೆಯಬಹುದಾಗಿದೆ. ಈಗಾಗಲೇ ತೆರಿಗೆ ಮತ್ತು ಶುಲ್ಕ ಪಾವತಿಸಿದವರ ವಾಹನ ನೋಂದಣಿಗೆ ಮಂಗಳವಾರದವರೆಗೆ ಕಾಲಾವಕಾಶ ನೀಡಲಾಗಿತ್ತು.

ವಾಹನ ನೋಂದಣಿಗೆ ಮಂಗಳವಾರ ನೂರಾರು ಜನ ಧಾವಿಸಿದ್ದರು. ಸರ್ವರ್‌ ಸಮಸ್ಯೆಯಿಂದಾಗಿ ಈ ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತಿರಲಿಲ್ಲ. ತಾಂತ್ರಿಕ ಸಮಸ್ಯೆಯಿಂದ ಆರ್‌ಟಿಒ ಕಚೇರಿಯ ಸಿಬ್ಬಂದಿಯೂ ಕೈಚೆಲ್ಲಿದರು. ಇದರಿಂದ ಅಸಮಾಧಾನಗೊಂಡ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

‘ಆನ್‌ಲೈನ್‌ನಲ್ಲಿ ತೆರಿಗೆ ಹಾಗೂ ಶುಲ್ಕ ಪಾವತಿಸಿದ್ದೇವೆ. ವಾಹನ ನೋಂದಣಿ ಮಾಡಿಸಿಕೊಳ್ಳಲು ಸಾರಿಗೆ ಇಲಾಖೆ ನೀಡಿದ ಗಡುವು ಮುಕ್ತಾಯಗೊಳ್ಳುತ್ತಿದೆ. ಆರ್‌ಟಿಒ ಕಚೇರಿ ಸಿಬ್ಬಂದಿ ಕಾಲಮಿತಿಯಲ್ಲಿ ಸೇವೆ ಒದಗಿಸುತ್ತಿಲ್ಲ. ಹೀಗಾಗಿ, ಈ ಗಡುವು ವಿಸ್ತರಣೆಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ನೋಂದಣಿ ಪ್ರಕ್ರಿಯೆ ಸ್ಥಗಿತ

ನೂತನ ತಂತ್ರಾಂಶ ಅಳವಡಿಸುತ್ತಿರುವುದರಿಂದ ಆರ್‌ಟಿಒ ಕಚೇರಿಯಲ್ಲಿ ವಾಹನ ನೋಂದಣಿ ಪ್ರಕ್ರಿಯೆ ಜೂನ್‌ 28 ಮತ್ತು 29ರಂದು ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

‘ವಾವ್‌’ ಐಡಿ ಸೃಜಿಸಿ ತೆರಿಗೆ ಹಾಗೂ ಶುಲ್ಕ ಪಾವತಿಸಿದ ವಾಹನಗಳ ನೋಂದಣಿಗೆ ಸಾರಿಗೆ ಇಲಾಖೆ ಮಂಗಳವಾರದವರೆಗೆ ಅವಕಾಶ ನೀಡಿತ್ತು. ಬಾಕಿ ಉಳಿದ ಕೆಲಸಕ್ಕೆ ಜೂನ್‌ 27ರವರೆಗೆ ಅವಕಾಶ ನೀಡಿದ್ದು, ಅಂದಿನಿಂದ ಖಜಾನೆಯೂ ಬಂದ್‌ ಆಗಲಿದೆ.

ಕಂಪ್ಯೂಟರ್‌ನಲ್ಲಿರುವ ಮಾಹಿತಿ ಸಂಗ್ರಹ ಹಾಗೂ ಸಂರಕ್ಷಣೆಗೆ ಎರಡು ದಿನ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಆರ್‌ಟಿಒ ಕಚೇರಿಯ ಇತರ ಕೆಲಸಗಳು ಸ್ಥಗಿತಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಲಾವಕಾಶಕ್ಕೆ ಕೋರಿಕೆ

ವಾಹನ ನೋಂದಣಿಗೆ ಅಳವಡಿಸುತ್ತಿರುವ ‘ವಾಹನ–4’ ತಂತ್ರಾಂಶ ಕಾರ್ಯಗತಗೊಳಿಸಲು ಕಾಲಾವಕಾಶ ನೀಡುವಂತೆ ಆರ್‌ಟಿಒ ಕಚೇರಿ ಅಧಿಕಾರಿಗಳು ಸಾರಿಗೆ ಇಲಾಖೆಗೆ ಕೋರಿಕೆ ಸಲ್ಲಿಸಿದ್ದಾರೆ.

ಜೂನ್‌ 1ರಿಂದ ‘ಸಾರಥಿ–4’ ಎಂಬ ನೂತನ ತಂತ್ರಾಂಶವನ್ನು ಆರ್‌ಟಿಒ ಕಚೇರಿ ಅಳವಡಿಸಿಕೊಂಡಿದೆ. ವಾಹನ ಚಾಲನಾ ಪರವಾನಗಿ ಹಾಗೂ ಎಲ್‌ಎಲ್‌ಆರ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಈ ವ್ಯವಸ್ಥೆಗೆ ಸರ್ವರ್‌ ಸಮಸ್ಯೆ ಎದುರಾಗಿದೆ.

ಬಿಎಸ್‌ಎನ್‌ಎಲ್‌ ಅಂತರ್ಜಾಲ ಸಂಪರ್ಕ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ಸೇವೆ ಒದಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾರಿಗೆ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !