ಸಂವಿಧಾನ ಸುಟ್ಟವರನ್ನು ಶಿಕ್ಷಿಸಲು ಒತ್ತಾಯ

7

ಸಂವಿಧಾನ ಸುಟ್ಟವರನ್ನು ಶಿಕ್ಷಿಸಲು ಒತ್ತಾಯ

Published:
Updated:
Deccan Herald

ಚಿತ್ರದುರ್ಗ: ಸಂವಿಧಾನ ಸುಟ್ಟ ದೇಶದ್ರೋಹಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಸಂವಿಧಾನ ಹೋರಾಟ ಸಮಿತಿ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಬಂದ ಪ್ರತಿಭಟನಾಕಾರರು, ಸಂವಿಧಾನ ವಿರೋಧಿಸುವವರ ವಿರುದ್ಧ ಘೋಷಣೆ ಕೂಗಿದರು.

ಸ್ವರಾಜ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ‘ಸಂವಿಧಾನದ ಬಗ್ಗೆ ಹಗುರುವಾಗಿ ಮಾತನಾಡುವವರನ್ನು ಶಿಕ್ಷೆಗೆ ಗುರುಪಡಿಸಬೇಕು. ಇಂದಿರಾಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ತುರ್ತು ಪರಿಸ್ಥಿತಿ ಹೇರಿದ್ದರಿಂದ ಪಕ್ಷದ ಗತಿ ಏನಾಯಿತು ಎಂಬುದನ್ನು ಈಗಿನ ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಎಚ್ಚರಿಸಿದರು.

‘ಬುದ್ದಿಜೀವಿಗಳನ್ನು ಮುಗಿಸಬೇಕು ಎಂದು ಒಬ್ಬ ಮಂತ್ರಿ ಹೇಳಿದರೆ ಮತ್ತೊಬ್ಬರು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ದೇಶದ ಪವಿತ್ರ ಗ್ರಂಥ ಸಂವಿಧಾನ. ಇದಕ್ಕೂ ಮಿಗಿಲಾದ ಗ್ರಂಥ ಬೇರೆ ಯಾವುದೂ ಇಲ್ಲ ಎನ್ನುವುದನ್ನು ಆಳುವ ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕು’ ಎಂದರು.

ಸಂವಿಧಾನ ಉಳಿಸಿ ಹೋರಾಟ ಸಮಿತಿ ಸಂಘಟಕ ಪ್ರೊ.ಸಿ.ಕೆ.ಮಹೇಶ್ವರಪ್ಪ,‘ಸಂವಿಧಾನಕ್ಕೆ ಸಮನಾದ ಯಾವುದೇ ಪವಿತ್ರ ಗ್ರಂಥವಿಲ್ಲ. ಸಂವಿಧಾನ ಸುಟ್ಟುವರನ್ನು ದೇಶದ್ರೋಹಿಗಳು ಎಂದು ಪರಿಗಣಿಸಿ ಗಡಿಪಾರು ಮಾಡಬೇಕು ಎಂದು ಹೇಳಿದರು.

ಸಂವಿಧಾನ ಸುಡುವವರಿಗೆ ಆರ್‌ಎಸ್‌ಎಸ್‌ ಪ್ರೇರಿತ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಸಂವಿಧಾನ ಸುಡುವವರು ದೇಶವನ್ನು ಸುಡದೆ ಇರಲಾರರು ಅದಕ್ಕಾಗಿ ಕೂಡಲೇ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್, ‘ದೇಶಭಕ್ತಿಯ ಹೆಸರಿನಲ್ಲಿ ಕೆಲವು ಗುಂಪುಗಳು ದೇಶದಲ್ಲಿ ಶಾಂತಿ ಕದಡುವ ಕೆಲಸಕ್ಕೆ ಕೈಹಾಕುತ್ತಿವೆ. ಸಂವಿಧಾನ ಸುಡುವವರು ಭಯೋತ್ಪಾದಕರು, ಉಗ್ರಗಾಮಿಗಳಿಗಿಂತ ಅಪಾಯಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಕೆ.ಕುಮಾರ್, ಚಿಕ್ಕಣ್ಣ, ಕುಮಾರ್, ನಸ್ರುಲ್ಲಾ, ಜೈನುಲ್ಲಾಬ್ದಿನ್, ಮೆಹಬೂಬ್‌ಖಾತೂನ್, ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !