ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನಕ್ಕೆ ಆಗ್ರಹಿಸಿ ಗ್ರಾಮಸ್ಥರ ಧರಣಿ

Last Updated 19 ಡಿಸೆಂಬರ್ 2018, 12:00 IST
ಅಕ್ಷರ ಗಾತ್ರ

ಚಿತ್ರದುರ್ಗ: ವಸತಿ ರಹಿತ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ಪಿಳ್ಳೇಕೆರೆನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮಕ್ಕಳು, ಮಹಿಳೆಯರೊಂದಿಗೆ ನೂರಾರು ಜನರು ಓಬವ್ವ ವೃತ್ತದಲ್ಲಿ ಒಂದು ದಿನ ಸಾಂಕೇತಿಕ ಧರಣಿ ನಡೆಸಿದರು. ಹತ್ತಾರು ವರ್ಷಗಳ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನವನ್ನು ಹೊರಹಾಕಿದರು.

ಮದಕರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಿಳ್ಳೇಕೆರೆನಹಳ್ಳಿ, ಚಿತ್ರದುರ್ಗ ನಗರದಿಂದ ಒಂದು ಕಿ.ಮೀ ದೂರದಲ್ಲಿದೆ. ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿ– 13 ಹಾದು ಹೋಗಿದ್ದರೂ ಜೀವನ ಮಟ್ಟ ಮಾತ್ರ ಸುಧಾರಣೆ ಕಂಡಿಲ್ಲ. ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರೇ ಶೇ 75ರಷ್ಟಿದ್ದಾರೆ. ಇವರಲ್ಲಿ ಬಹುತೇಕರಿಗೆ ನಿವೇಶನ, ಮನೆ, ಜಮೀನು ಇಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಗ್ರಾಮದ ಬಹುತೇಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಕುಟುಂಬಗಳು ದೊಡ್ಡದಾದಂತೆ ಗ್ರಾಮದ ಜನಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಗ್ರಾಮದ ವ್ಯಾಪ್ತಿ ಮಾತ್ರ ಎರಡು ದಶಕಗಳಿಂದ ವಿಸ್ತರಿಸಿಲ್ಲ. ಪ್ರತಿ ಮನೆಯಲ್ಲಿ ಮೂರು, ನಾಲ್ಕು ಸಂಸಾರಗಳು ಬದುಕು ಸಾಗಿಸುತ್ತಿವೆ. ಘನತೆಯಿಂದ ಜೀವಿಸಲು ತೊಂದರೆಗಳು ಎದುರಾಗುತ್ತಿವೆ ಎಂದು ಆರೋಪಿಸಿದರು.

ಬಡವರು ನಿರ್ಮಿಸಿಕೊಂಡಿದ್ದ ಗುಡಿಸಲನ್ನು ಈ ಹಿಂದೆ ನಗರಸಭೆ ತೆರವುಗೊಳಿಸಿದೆ. ಇದರಿಂದ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ವಾಸಿಸಲು ಮನೆ ಇಲ್ಲದೆ, ಬೀದಿ ಬದಿಯಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ದುಡುಮೆಯಿಂದ ಬರುವ ಹಣದಲ್ಲಿ ಸಂಸಾರ ಸಾಗಿಸುವುದು ಕಷ್ಟವಾಗುತ್ತಿದೆ. ವಾಸಕ್ಕೆ ನೆಲೆ ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

ಗ್ರಾಮದ ಸಮೀಪದಲ್ಲಿಯೇ ಸರ್ಕಾರಿ ಜಮೀನು ಇದೆ. ಇದರಲ್ಲಿಯೇ ನಿವೇಶನ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. 15 ದಿನಗಳಲ್ಲಿ ಸರ್ಕಾರ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.

ಗ್ರಾಮದ ಮುಖಂಡರಾದ ಪ್ರಕಾಶ್, ಸಿದ್ದಪ್ಪ, ದಿವಾಕರ್, ಬಸವರಾಜ್‌, ನಾಗರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT