ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಸಂಪರ್ಕಕ್ಕೆ ಒತ್ತಾಯಿಸಿ ಪ್ರತಿಭಟನೆ

ಪುರಾತತ್ವ ಇಲಾಖೆ ವಿರುದ್ಧ ಸಾರ್ವಜನಿಕರ ಆಕ್ರೋಶ
Last Updated 10 ಜನವರಿ 2019, 13:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಏಳು ಸುತ್ತಿನ ಕೋಟೆಯಲ್ಲಿರುವ ದೇಗುಲಗಳಿಗೆ ತೆರಳುವ ಮಾರ್ಗದಲ್ಲಿನ ವಿದ್ಯುತ್‌ ಸಂಪರ್ಕ ತೆಗೆದುಹಾಕಿರುವುದನ್ನು ವಿರೋಧಿಸಿ ಅರ್ಚಕರು ಹಾಗೂ ಭಕ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪುರಾತತ್ವ ಇಲಾಖೆಯ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೋಟೆ ಸಮೀಪದ ಸಾರ್ವಜನಿಕರು ಹಾಗೂ ಪ್ರವಾಸಿಗರು ಪ್ರತಿಭಟನೆಯನ್ನು ಬೆಂಬಲಿಸಿದರು. ಸ್ಥಳಕ್ಕೆ ಧಾವಿಸಿದ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್‌ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.

ಏಳು ಸುತ್ತಿನ ಕೋಟೆಯಲ್ಲಿ ಏಕನಾಥೇಶ್ವರಿ, ಬನಶಂಕರಿ, ಹಿಡಂಬೇಶ್ವರಿ, ಗಣೇಶ, ಸಂಪಿಗೆ ಸಿದ್ದೇಶ್ವರ, ಆಂಜನೇಯಸ್ವಾಮಿ, ವೇಣುಗೋಪಾಲಸ್ವಾಮಿ ಸೇರಿ ಹಲವು ದೇಗುಲಗಳಿವೆ. ಮುರುಘಾ ಮಠದ ಮೂಲ ಮಠವೂ ಇಲ್ಲಿದೆ. ನಸುಕಿನಲ್ಲಿ ಹಾಗೂ ಸಂಜೆ ವೇಳೆ ಈ ದೇಗುಲಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚು. ವಿದ್ಯುತ್ ದೀಪದ ಕೊರತೆಯಿಂದ ಹಲವು ದಿನಗಳಿಂದ ಸಮಸ್ಯೆಗೆ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಗುಲಗಳಿಗೆ ಸಾಗುವ ದಾರಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ಕತ್ತಲು ಆವರಿಸಿದ ನಂತರ ದೇಗುಲಗಳಿಗೆ ತೆರಳುವುದು ಕಷ್ಟವಾಗುತ್ತಿದೆ. ಅರ್ಚಕರು ನಿತ್ಯ ಪೂಜೆ ಮಾಡುವುದಕ್ಕೂ ತೊಂದರೆ ಉಂಟಾಗುತ್ತಿದೆ. ವಾಯು ವಿಹಾರಿಗಳಿಗೂ ಸಮಸ್ಯೆಯಾಗಿದೆ ಎಂದು ದೂರಿದರು.

ಕೋಟೆಯ ಸುತ್ತಲಿನ ಪ್ರದೇಶದಲ್ಲಿ ಚಿರತೆ, ಕರಡಿಗಳಿವೆ. ಕತ್ತಲಾಗುತ್ತಿದ್ದಂತೆ ಇವು ಬೆಟ್ಟದಿಂದ ಕೆಳಗೆ ಇಳಿಯುತ್ತವೆ. ವಿದ್ಯುತ್ ದೀಪ ಇಲ್ಲದ ಪರಿಣಾಮ ಭಕ್ತರಿಗೆ ಜೀವಭಯ ಕಾಡಲಾರಂಭಿಸಿದೆ. ಹಾವು, ಚೇಳು ಕಚ್ಚಿಸಿಕೊಂಡ ನಿದರ್ಶನಗಳೂ ಇವೆ. ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಮೊದಲಿನಂತೆ ಕೋಟೆ ಒಳಗೆ ಬೀದಿ ದೀಪದ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಕೋಟೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮಾತ್ರ ಟಿಕೆಟ್‌ ವ್ಯವಸ್ಥೆ ಇದೆ. ಕೋಟೆ ಪ್ರವೇಶಿಸುವ ವಾಯುವಿಹಾರಿಗಳಿಗೂ ಟಿಕೆಟ್‌ ಕೇಳಲಾಗುತ್ತಿದೆ. ಭಕ್ತರಿಗೂ ಇದೇ ನೀತಿ ಅನುಸರಿಸಿದರೆ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಐತಿಹಾಸಿಕ ಕೋಟೆಯಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿ ಸೌಲಭ್ಯಗಳ ಕೊರತೆ ಇದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯ ಕರ್ಮಗಳಿಗೆ ಬಯಲು ಅವಲಂಬಿಸುವುದು ಅನಿವಾರ್ಯವಾಗಿದೆ. ಕೂಡಲೇ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಏಕನಾಥೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ದೇವಸ್ಥಾನದ ಪ್ರಧಾನ ಅರ್ಚಕ ವಿ.ಮೃತ್ಯುಂಜಯ ಮೂರ್ತಿ, ಮಲ್ಲಿಕಾರ್ಜುನ್, ಎಚ್.ತಿಮ್ಮಣ್ಣ, ರಾಮಜ್ಜ, ಅಂಗಡಿ ಹನುಮಂತ, ಗೌಡ್ರು ಗುರುಸಿದ್ದಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT