ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಕೆಜಿ, ಯುಕೆಜಿ ಆರಂಭಕ್ಕೆ ಒತ್ತಾಯ

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
Last Updated 5 ಡಿಸೆಂಬರ್ 2019, 9:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಂಗವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸುವಂತೆ ಒತ್ತಾಯಿಸಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬುಧವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟರು. ಗಾಂಧಿ ವೃತ್ತ, ಬಿ.ಡಿ.ರಸ್ತೆ, ಪ್ರವಾಸಿ ಮಂದಿರದ ಮೂಲಕ ಒನಕೆ ಓಬವ್ವ ವೃತ್ತ ತಲುಪಿ ಪ್ರತಿಭಟನೆ ನಡೆಸಿದರು.

ಮೂರರಿಂದ ಆರು ವರ್ಷದ ಒಳಗೆ ಮಗುವಿನ ಮಿದುಳು ವೇಗವಾಗಿ ಬೆಳವಣಿಗೆ ಹೊಂದುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿಗೆ ಅಗತ್ಯ ಶಿಕ್ಷಣ ನೀಡಬೇಕು. ಆರೈಕೆ, ಪೌಷ್ಟಿಕ ಆಹಾರವನ್ನು ನೀಡುವ ಅಗತ್ಯವಿರುತ್ತದೆ. ಅಂಗನವಾಡಿ ಕೇಂದ್ರಗಳು ಈ ಕಾರ್ಯ ಮಾಡುತ್ತಿವೆ. ಆದರೆ, ಸರ್ಕಾರ ಅಂಗವಾಡಿ ಕೇಂದ್ರಗಳನ್ನು ದುರ್ಬಲಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.

ಶಾಲಾ ಪೂರ್ವ ಶಿಕ್ಷಣ ದಂಧೆಯಾಗಿ ಮಾರ್ಪಟ್ಟಿದೆ. ಪ್ರತಿ ವರ್ಷ ಈ ಶಿಕ್ಷಣದಲ್ಲಿ ಅಂದಾಜು 20 ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರೀನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಿ ಹಣ ಕಬಳಿಸುತ್ತಿವೆ. ಆರ್ಥಿಕವಾಗಿ ಸಶಕ್ತರಾಗಿರದ ಜನರಿಗೆ ಇದು ಕಷ್ಟವಾಗುತ್ತಿದೆ. ಹೀಗಾಗಿ, ಸರ್ಕಾರವೇ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಬೇಕು. ಅಂಗನವಾಡಿ ಸಿಬ್ಬಂದಿಗೆ ಸಾಮರ್ಥ್ಯವಿದ್ದು, ಅವರಿಗೆ ಈ ಹೊಣೆ ನೀಡಬೇಕು ಎಂದು ಆಗ್ರಹಿಸಿದರು.

ಅಂಗವಾಡಿ ನೌಕರರನ್ನು ಶಿಶು ಅಭಿವೃದ್ಧಿ ಯೋಜನೆಗೆ ಮಾತ್ರ ಸೀಮಿತಗೊಳಿಸಬೇಕು. ಸಮೀಕ್ಷೆ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿ ಇತರ ಜವಾಬ್ದಾರಿಗಳಿಂದ ಮುಕ್ತಿಗೊಳಿಸಬೇಕು. ಅಂಗವಾಡಿಗೆ ಮೂಲ ಸೌಲಭ್ಯ ಒದಗಿಸಬೇಕು. ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಇಂದಿರಮ್ಮ, ಮುಖಂಡರಾದ ಸೌಭಾಗ್ಯಮ್ಮ, ಗಂಗಮ್ಮ, ಸುಧಾ, ಜೆ.ಎನ್‌.ಗಂಗಮ್ಮ, ಬಿ.ಬೋರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT