ಮಂಗಳವಾರ, ಅಕ್ಟೋಬರ್ 26, 2021
20 °C
ಕೇಂದ್ರ ಗೃಹ ಖಾತೆ ಸಚಿವ ಅಜಯ್‌ ಮಿಶ್ರಾ ವಜಾಗೆ ಆಗ್ರಹ

ಉತ್ತರ ಪ್ರದೇಶದ ಲಖಿಂಪುರದಲ್ಲಾದ ರೈತರ ಹತ್ಯೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಉತ್ತರ ಪ್ರದೇಶದ ಹೋರಾಟ ನಿರತ ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಯಡಿ ರೈತರು ಹಾಗೂ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಕಾರಣರಾದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಸುಪ್ರೀಂ ಕೋರ್ಟ್‌ ಉಸ್ತುವಾರಿಯಲ್ಲಿ ತನಿಖೆ ನಡೆಸಲು ಎಸ್‌ಐಟಿ ನೇಮಕ ಮಾಡಬೇಕು ಎಂದು
ಆಗ್ರಹಿಸಿದರು.

ಉತ್ತರ ಪ್ರದೇಶದ ಲಿಖಿಂಪುರ್‌ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ವಾಹನ ಹರಿದಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆಯಂತೆ ಕಾಣುತ್ತಿಲ್ಲ. ಹೋರಾಟ ನಿರತ ರೈತರನ್ನು ಬೆದರಿಸುವ ಹಾಗೂ ಪ್ರಚೋದನೆ ನೀಡುವ ಉದ್ದೇಶದಿಂದ ನಡೆಸಿದ ದಾಳಿಯಾಗಿದೆ. ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕ್ರೂರವಾಗಿ ನಡೆದುಕೊಳ್ಳುತ್ತಿವೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವ ರೆಡ್ಡಿ, ‘ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಅವರು ರೈತರ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ ಬೆನ್ನಲ್ಲೇ ಈ ಕ್ರೂರ ಘಟನೆ ನಡೆದಿದೆ. ಮುಖ್ಯಮಂತ್ರಿ ಸಾಂವಿಧಾನಿಕ ಹುದ್ದೆಯಲ್ಲಿದ್ದು ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿದ್ದಾರೆ. ಇದನ್ನು ರಾಷ್ಟ್ರಪತಿ ಗಂಭೀರವಾಗಿ ಪರಿಗಣಿಸಬೇಕು. ಗೂಂಡಾ ಸಂಸ್ಕೃತಿ ಪ್ರದರ್ಶಿಸುತ್ತಿರುವ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ಹತ್ತು ತಿಂಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ರೊಚ್ಚಿಗೆಬ್ಬಿಸುವ ಉದ್ದೇಶ ಬಿಜೆಪಿಗೆ ಇದೆ. ಈ ಘಟನೆಯ ಮೂಲಕ ಅದು ಬಿಂಬಿತವಾಗಿದೆ. ಹೋರಾಟವನ್ನು ದಮನ ಮಾಡಲು ವಾಮಮಾರ್ಗವನ್ನು ಸರ್ಕಾರ ಕಂಡುಕೊಂಡಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳದೇ ಗಾಂಧಿ ಮಾರ್ಗದಲ್ಲಿ ಹೋರಾಟ ಮಾಡೋಣ’ ಎಂದು ಮನವಿ
ಮಾಡಿದರು.

ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶಬಾಬು, ಎಸ್‌ಯುಸಿಐ ಮುಖಂಡ ರವಿಕುಮಾರ್‌, ಸಿಪಿಐ ಮುಖಂಡ ಸುರೇಶಬಾಬು, ಜನಶಕ್ತಿ ಸಂಘಟನೆ ಮುಖಂಡ ಟಿ.ಷಫಿವುಲ್ಲ ಇದ್ದರು.

ರಾಷ್ಟ್ರಪತಿ ಆಡಳಿತ ಜಾರಿಗೆ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಕಾರ್ಯಾದ್ಯಕ್ಷ ಸಿ.ಶಿವು ಯಾದವ್ ಒತ್ತಾಯಿಸಿದ್ದಾರೆ.

‘ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ದೇಶದೆಲ್ಲೆಡೆ ಕೊಲೆ, ದರೋಡೆ, ಅತ್ಯಾಚಾರ ನಡೆಯುತ್ತಿವೆ. ಹಿಂದುಳಿದ ವರ್ಗ ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿವೆ. ಅಪರಾಧ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

‘ರೈತರ ಮೇಲೆ ವಾಹನ ಹರಿಸಿ ಹತ್ಯೆ ಮಾಡಿದ ಸ್ಥಳಕ್ಕೆ ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿದ್ದು ಖಂಡನೀಯ. ಉತ್ತರ ಪ್ರದೇಶ ಸರ್ಕಾರದ ಈ ಪ್ರಜಾಪ್ರಭುತ್ವ ವಿರೋಧಿ ನಿಲುವು, ಸರ್ವಾಧಿಕಾರಿ ಧೋರಣೆಯ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

.....

ಸರ್ಕಾರದ ಹುನ್ನಾರ ರೈತರಿಗೆ ಅರ್ಥವಾಗಿದೆ. ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಹೋರಾಟ ಮುಂದುವರಿಯಲಿದೆ. ಬಿಜೆಪಿ ಹಾಗೂ ಸರ್ಕಾರದ ಪ್ರಚೋದನೆ ಫಲಿಸದು.

-ಟಿ.ನುಲೇನೂರು ಶಂಕರಪ್ಪ, ರೈತ ಸಂಘದ ಪ್ರಧಾನ ಕಾರ್ಯದರ್ಶಿ

......

ಹೋರಾಟನಿರತ ರೈತರನ್ನು ಸರ್ಕಾರ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ. ಸರ್ಕಾರದ ನೀತಿಯಿಂದ ಕಂಗೆಟ್ಟಿರುವ ಪ್ರತಿಯೊಬ್ಬರೂ ರೈತರ ಹೋರಾಟವನ್ನು ಬೆಂಬಲಿಸಬೇಕು.

-ಸುಜಾತಾ, ನಾಯಕಿ ಎಐಎಂಎಸ್‌

***

ಸರ್ಕಾರದ ಹುನ್ನಾರ ರೈತರಿಗೆ ಅರ್ಥವಾಗಿದೆ. ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಹೋರಾಟ ಮುಂದುವರಿಯಲಿದೆ. ಬಿಜೆಪಿ ಹಾಗೂ ಸರ್ಕಾರದ ಪ್ರಚೋದನೆ ಫಲಿಸದು.

- ಟಿ.ನುಲೇನೂರು ಶಂಕರಪ್ಪ, ರೈತ ಸಂಘದ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು