ಮಂಗಳವಾರ, ಫೆಬ್ರವರಿ 7, 2023
27 °C
ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಪ್ರತಿಭಟನೆ

ಬಸ್‌ಪಾಸ್‌ ಹೆಸರಲ್ಲಿ ಹಣ ದುರ್ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಶ್ರಮಜೀವಿ ಕಾರ್ಮಿಕರ ಹಣವನ್ನು ವಸತಿ ಹಾಗೂ ಕಾರ್ಮಿಕ ಸಚಿವರು ಬಸ್‌ ಪಾಸ್‌ ವಿತರಣೆ ಹೆಸರಿನಲ್ಲಿ ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ದಾವಣಗೆರೆ ರಸ್ತೆಯ ಎಐಟಿಯುಸಿ ಕಚೇರಿಯಿಂದ ಮೆರವಣಿಗೆ ಮೂಲಕ ಬಂದ ಪ್ರತಿಭಟನಕಾರರು ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಚಿವರಾದ ವಿ.ಸೋಮಣ್ಣ, ಶಿವರಾಮ್‌ ಹೆಬ್ಬಾರ್‌ ಕಾರ್ಮಿಕರ ಹಣದ ಮೇಲೆ ಕಣ್ಣಿಟ್ಟಿದ್ದಾರೆ. ಸಾರಿಗೆ ಇಲಾಖೆಯಿಂದ ಉಚಿತವಾಗಿ ಬಸ್‌ಪಾಸ್ ವಿತರಿಸುತ್ತೇವೆಂದು ತಪ್ಪು ಸಂದೇಶ ನೀಡಿ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಹಣವನ್ನು ಒಂದು ಪಾಸ್‌ಗೆ ₹ 1,400ರಂತೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಇದಕ್ಕೆ ತಡೆ ಹಾಕಬೇಕು ಎಂದು ಆಗ್ರಹಿಸಿದರು.

‘ಕಟ್ಟಡ ನಿರ್ಮಾಣ ಮಂಡಳಿ ತೆಗೆದುಕೊಳ್ಳುತ್ತಿರುವ ಅವೈಜ್ಞಾನಿಕ ತೀರ್ಮಾನಗಳಿಂದ ಶ್ರಮಜೀವಿ ಕಟ್ಟಡ ಕಾರ್ಮಿಕರ ಬೆವರಿನಿಂದ ಕೂಡಿಟ್ಟಿರುವ ಹಣ ಉಳ್ಳವರ ಪಾಲಾಗುತ್ತಿದೆ. 2006–07ರಲ್ಲಿ ನೋಂದಣಿಯಾದ ನೈಜ ಕಟ್ಟಡ ಕಾರ್ಮಿಕರು ಸಾಕಷ್ಟು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆನ್‌ಲೈನ್‌ ಕಾರ್ಡ್‌ ಮಾಡಿಸಿಕೊಳ್ಳದ ಸದಸ್ಯರಿಗೆ ಕೋವಿಡ್‌ ಪರಿಹಾರ ಮೊತ್ತ ಹಾಗೂ ಕಿಟ್‌ಗಳು ಸಹ ಸಿಗಲಿಲ್ಲ’ ಎಂದು ದೂರಿದರು.

‘ಕೊಳಚೆ ನಿರ್ಮೂಲನಾ ಮಂಡಳಿಗೆ 2019–20ನೇ ಸಾಲಿನಲ್ಲಿ 5,129 ಫಲಾನುಭವಿಗಳಿಗೆ ₹ 76 ಕೋಟಿ ಮಂಜೂರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಖರ್ಚಿನ ವಿವರವನ್ನು ಮಂಡಳಿಯು ಈವರೆಗೂ ಪಡೆದುಕೊಂಡಿಲ್ಲ. ಪುನಃ 2021–22ರಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಗೆ ₹ 433 ಕೋಟಿ ಮಂಜೂರು ಮಾಡಿರುವುದನ್ನು ಈ ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಈಗಾಗಲೇ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ನಿಯಮಾನುಸಾರ ₹ 2 ಲಕ್ಷವನ್ನು ನೇರವಾಗಿ ಮಂಜೂರು ಮಾಡಬೇಕು. ಕೋವಿಡ್‌ ಸಮಯದಲ್ಲಿ ವಿತರಿಸಿದ ಫುಡ್‌, ಬೂಸ್ಟರ್‌, ಸುರಕ್ಷಾ ಹಾಗೂ ವೃತ್ತಿ ಬದುಕಿಗೆ ಸಂಬಂಧಿಸಿದ ಕಿಟ್‌ಗಳು ಸಂಪೂರ್ಣ ಕಳಪೆಯಾಗಿವೆ. ನೂರಾರು ಕೋಟಿ ಅವ್ಯವಹಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು’ ಎಂದರು.

‘ಸಿಜಿಎಚ್‌ ಆಧಾರಿತ ವೈದ್ಯಕೀಯ ಮರು ಪಾವತಿ ಯೋಜನೆ ರದ್ದುಗೊಳಿಸಿ ಎಲ್ಲ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಕುಟುಂಬದವರಿಗೆ ‘ಆರೋಗ್ಯ ಸಂಜೀವಿನಿ 2021’ ಅಥವಾ ಇಎಸ್‌ಐ ನಗದು ರಹಿತ ಸೇವೆಯನ್ನು ಜಾರಿಗೊಳಿಸಬೇಕು. ಈಗಾಗಲೇ ಸಲ್ಲಿಸಲಾದ ವೈದ್ಯಕೀಯ ಅರ್ಜಿಗಳನ್ನು ಇತ್ಯರ್ಥ್ಯಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ನಗರದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹಳಷ್ಟು ಕಾರ್ಮಿಕರು ಸ್ವಂತ ಮನೆಯಿಲ್ಲದೆ ಬಾಡಿಗೆ ಮನೆಗಳಲ್ಲಿದ್ದಾರೆ. ಕೆಲವರು ಸರ್ಕಾರಿ ಮತ್ತು ಅರೆ ಸರ್ಕಾರಿ ಜಾಗಗಳಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಂಡು ಕಷ್ಟದಲ್ಲಿ ಬದುಕುತ್ತಿದ್ದಾರೆ. ನಿವೇಶನವಿಲ್ಲದವರಿಗೆ ಸರ್ಕಾರಿ ಮತ್ತು ಖಾಸಗಿ ಜಮೀನುಗಳನ್ನು ಗುರುತಿಸಿ ಕಲ್ಯಾಣ ಮಂಡಳಿಯಿಂದ ಖರೀದಿಸಿ ಮನೆಗಳನ್ನು ನಿರ್ಮಿಸಿಕೊಡಬೇಕು’ ಮನವಿ ಮಾಡಿದರು.

‘ಮಂಡ್ಯ ಜಿಲ್ಲೆಯಲ್ಲಿ 30 ನಕಲಿ ಕಾರ್ಡ್‌ ನೋಂದಣಿ ಮಾಡಿಸಲು ಕಾರಣವಾದ ಮತ್ತು ಮಂಡಳಿಗೆ ₹ 15 ಲಕ್ಷ ನಷ್ಟ ಉಂಟು ಮಾಡಿದ ಕಾರ್ಮಿಕ ನಿರೀಕ್ಷಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ ಬಾಬು, ಸತ್ಯಕೀರ್ತಿ, ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ, ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಬಸವರಾಜಪ್ಪ, ರಾಜ್ಯ ಮಂಡಳಿ ಉಪಾಧ್ಯಕ್ಷ ಟಿ.ಆರ್‌.ಉಮಾಪತಿ, ತಾಲ್ಲೂಕು ಅಧ್ಯಕ್ಷರಾದ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಸ್‌.ಸಿ.ಕುಮಾರ್‌, ಜಾಫರ್‌ ಷರೀಫ್‌, ಎನ್‌.ಸಿ.ಕುಮಾರ ಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜಪ್ಪ, ಕಾರ್ಯದರ್ಶಿಗಳಾದ ಎಂ.ಆರ್‌.ಬಾಬು, ರವಿ ಕುಮಾರ್‌, ಖಜಾಂಚಿ ತಿಪ್ಪೇಸ್ವಾಮಿ ಇದ್ದರು.

***

ಗುರುತಿನ ಕಾರ್ಡ್‌ ಹೊಂದಿದ ಕಾರ್ಮಿಕರಿಗೆ ಯಾವುದೇ ನಿರ್ಭಂದನೆ ಇಲ್ಲದೆ ಜೇಷ್ಠತೆ ಆಧಾರ ಪರಿಗಣಿಸಿ ಮನೆ ಮತ್ತು ಇತರೆ ಸವಲತ್ತುಗಳನ್ನು ನಿಯಮಾನುಸಾರ ನೀಡಬೇಕು.

ಜಿ.ಸಿ.ಸುರೇಶ್‌ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಎಐಟಿಯುಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು