ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು ದೇಗುಲ ಧ್ವಂಸ ಖಂಡಿಸಿ ಪ್ರತಿಭಟನೆ

Last Updated 18 ಸೆಪ್ಟೆಂಬರ್ 2021, 14:29 IST
ಅಕ್ಷರ ಗಾತ್ರ

ಚಿತ್ರದುರ್ಗ: ನಂಜಗೂಡು ನಗರದಲ್ಲಿ ಪುರಾತನ ಕಾಲದ ದೇಗುಲವನ್ನು ಧ್ವಂಸ ಮಾಡಿದ ಘಟನೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪು ಪಾಲನೆ ಮಾಡುವ ನೆಪದಲ್ಲಿ ಹಿಂದೂ ದೇಗುಲಗಳನ್ನು ಮಾತ್ರ ತೆರವು ಮಾಡಲಾಗುತ್ತಿದೆ. ರಾಜ್ಯದ ಹಲವೆಡೆ ದೇಗುಲ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇದರಿಂದ ಹಿಂದೂ ಧರ್ಮಿಯರ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ. ಕೂಡಲೇ ಈ ಕಾರ್ಯವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕೇಂದ್ರಗಳನ್ನು ಅನಿವಾರ್ಯವಿದ್ದಾಗ ಮಾತ್ರ ತೆರವುಗೊಳಿಸುವ ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಪ್ರತಿಯೊಂದು ಶ್ರದ್ಧಾ ಕೇಂದ್ರದ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕಿದೆ. ಆದರೆ, ಮೈಸೂರು ಜಿಲ್ಲಾಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ಪುರಾತನ ಹಿಂದೂ ದೇವಾಲಯವನ್ನು ಮಾತ್ರ ಕೆಡವಿರುವುದು ಖಂಡನೀಯ ಎಂದು ಕಿಡಿಕಾರಿದರು.

ಚಿತ್ರದುರ್ಗದ ಗಾಂಧಿ ವೃತ್ತದ ಬಳಿಯ ಧಾರ್ಮಿಕ ಕೇಂದ್ರವೊಂದು ರಸ್ತೆ ವಿಸ್ತರಣೆಗೆ ಅಡ್ಡಿಯಾಗಿದೆ. ಇಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಮಾಡಿಲ್ಲ. ಆದರೆ, ಈಗಾಗಲೇ ಹಲವು ದೇಗುಲಗಳನ್ನು ನೆಲಸಮಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಅನುಷ್ಠಾನದಲ್ಲಿ ತಾರತಮ್ಯ ಮಾಡಿದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಗೋರಕ್ಷಕ್ ಪ್ರಮುಖ್ ಪಿ. ರುದ್ರೇಶ್, ಗ್ರಾಮಾಂತರ ಸಂಚಾಲಕ ಕೇಶವ್, ವಿಶ್ವ ಹಿಂದೂ ಪರಿಷತ್ತಿನ ನಗರ ಉಪಾಧ್ಯಕ್ಷ ರೋಹಿತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT