ಶುಕ್ರವಾರ, ಸೆಪ್ಟೆಂಬರ್ 24, 2021
24 °C
ಕನ್ನಡಪರ ಸಂಘಟನೆಗಳ ಆಕ್ರೋಶ, ಹಕ್ಕುಪತ್ರ ವಿತರಣೆಗೆ ಪಟ್ಟು

ಚಿತ್ರದುರ್ಗ: ಕಾರ್ಮಿಕರು, ರೈತರ ಸರಣಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ರೈತರು, ಕಾರ್ಮಿಕರು ಸೇರಿದಂತೆ ಹಲವು ಸಂಘಟನೆಗಳು ಸೋಮವಾರ ಸರಣಿ ಪ್ರತಿಭಟನೆ ನಡೆಸಿದವು. ಹಿಂದಿ ಹೇರಿಕೆಗೆ ವಿರೋಧ, ರಸ್ತೆ ದುರಸ್ತಿಗೆ ಆಕ್ರೋಶ ವ್ಯಕ್ತವಾಯಿತು. ಹಕ್ಕುಪತ್ರ ವಿತರಣೆ, ಭೂಮಿ ಖಾತೆ ಬದಲಾವಣೆಗೆ ಕೋರಿಕೆಗಳು ಸಲ್ಲಿಕೆಯಾದವು.

ಜೆಸಿಆರ್‌ ಮುಖ್ಯರಸ್ತೆಯ ಕಾರ್ಮಿಕ ಇಲಾಖೆಯ ಎದುರು ಜಮಾಯಿಸಿದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಇಲಾಖೆಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಡ ಕಾರ್ಮಿಕರ ಸೆಸ್‌ ವಸೂಲಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರು ಸಹಜವಾಗಿ ಮೃತಪಟ್ಟರೆ ₹ 54 ಸಾವಿರ ಪರಿಹಾರ ನೀಡಿ ಕಾರ್ಮಿಕ ಇಲಾಖೆ ಕೈತೊಳೆದುಕೊಳ್ಳುತ್ತಿದೆ. ಈ ಪರಿಹಾರದ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಕೆ ಮಾಡಬೇಕು. ಖಾಸಗಿ ಕಂಪನಿಗಳು ಹಾಗೂ ಸರ್ಕಾರಿ ಉದ್ಯಮಗಳು ಕಾರ್ಮಿಕರ ಸೆಸ್‌ ಪಾವತಿ ಮಾಡುತ್ತಿಲ್ಲ. ಸೆಸ್‌ ವಸೂಲಿ ಮಾಡಿದರೆ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಮಾಣವಾಗಿ 14 ವರ್ಷ ಕಳೆದಿವೆ. ಆದರೆ, ಒಬ್ಬ ಕಾರ್ಮಿಕರಿಗೂ ಮನೆ ನಿರ್ಮಾಣಕ್ಕೆ ಸಹಾಯಧನ ಸಿಕ್ಕಿಲ್ಲ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ನೀಡಿದ ₹ 76 ಕೋಟಿ ಅನುದಾನವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಹಿಂದಿ ದಿನಕ್ಕೆ ವಿರೋಧ

ಕೇಂದ್ರ ಸರ್ಕಾರ ಸೆ.14ರಂದು ಹಿಂದಿ ದಿನ ಆಚರಿಸುವ ನೆಪದಲ್ಲಿ ಹಿಂದಿ ಹೇರಿಕೆಗೆ ಹವಣಿಸುತ್ತಿದೆ ಎಂದು ಆರೋಪಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಿಂದಿ ದಿನ ಆಚರಣೆ ಕೈಬಿಡಬೇಕು ಎಂದು ಆಗ್ರಹಿಸಿದರು.

ದೇಶದ 22 ಭಾಷೆಗಳಿಗೆ ಸಂವಿಧಾನಬದ್ಧ ರಾಷ್ಟ್ರೀಯ ಮಾನ್ಯತೆ ಸಿಕ್ಕಿದೆ. ಕನ್ನಡ ಮತ್ತು ಹಿಂದಿಗೆ ಸಮಾನ ಸ್ಥಾನವಿದೆ. ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂಬುದಾಗಿ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ಅಧಿಕೃತ ಆಡಳಿತ ಭಾಷೆಯೂ ಅಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಮಾತೃ ಭಾಷಾ ಶಿಕ್ಷಣಕ್ಕೂ ಒತ್ತು ನೀಡಬೇಕು. ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಸೆ.14ರಂದು ಹಿಂದಿ ದಿನವನ್ನು ಆಚರಣೆ ಮಾಡಬಾರದು. ಇಂತಹ ಬೆಂಬಲವನ್ನು ಕನ್ನಡಿಗರು ಖಂಡಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಟಿ.ರಾಜೇಂದ್ರ, ಉಪಾಧ್ಯಕ್ಷ ಅರುಣ್‍ಕುಮಾರ್, ಕಾರ್ಯಾಧ್ಯಕ್ಷ ಆರ್.ರಾಜೇಶ್ ಮದರಿ ಇದ್ದರು.

ಸಾಗುವಳಿ ಚೀಟಿ ನೀಡಲು ಆಗ್ರಹ

ಚಳ್ಳಕೆರೆ ತಾಲ್ಲೂಕಿನ ನೆಲಗೇತನಹಟ್ಟಿಯ ದಲಿತ ಸಮುದಾಯದ ರೈತರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಕಾಲೊನಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ನೆಲಗೇತನಹಟ್ಟಿ ಗ್ರಾಮದಲ್ಲಿ ಸಾಗುವಳಿ ಮಾಡುತ್ತಿರುವ ದಲಿತ ಸಮುದಾಯದ ರೈತರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಈ ಬಗ್ಗೆ ಹಲವು ಬಾರಿ ತಾಲ್ಲೂಕು ಆಡಳಿತದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಚಳ್ಳಕೆರೆ ತಾಲ್ಲೂಕಿನ ಲಿಡ್ಕರ್‌ ಫಲಾನುಭವಿಗಳಿಗೂ ಹಕ್ಕುಪತ್ರ ನೀಡಿ ವಸತಿ ಸೌಲಭ್ಯ ಕಲ್ಪಿಸಬೇಕು. ವೆಂಕಟೇಶ್ವರ ನಗರದಲ್ಲಿ ವಾಸ ಮಾಡುತ್ತಿರುವರಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆ ಮುಖಂಡರಾದ ಎಚ್.ಎನ್.ಶಿವಮೂರ್ತಿ ಭೀಮನಕೆರೆ, ಎನ್.ಪ್ರಕಾಶ್, ಪಿ.ರೇಣುಕಮ್ಮ, ಮಂಜಮ್ಮ, ಪಿ.ಜಯಣ್ಣ ಇದ್ದರು.

ಸಮಾಧಿ ಧ್ವಂಸ–ಆರೋಪ

ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿರುವ ಓಬಣ್ಣನಾಯಕರ ಸಮಾಧಿಯನ್ನು ನಿಧಿ ಆಸೆಗಾಗಿ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿ ಚಿತ್ರನಾಯಕ ವೇದಿಕೆ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಚಿತ್ರದುರ್ಗ ಸಂಸ್ಥಾನವನ್ನು 45 ವರ್ಷ ಆಳಿದ ಓಬಣ್ಣನಾಯಕ ಪರಾಕ್ರಮಕ್ಕೆ ಹೆಸರಾಗಿದ್ದರು. ಅನೇಕ ಕೆರೆ, ಕಟ್ಟೆಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ಅವರ ಸಮಾಧಿ ಸ್ಥಳವನ್ನು ಇತ್ತೀಚೆಗೆ ಅಗೆದು ವಿರೂಪಗೊಳಿಸಲಾಗಿದೆ. ಪುರಾತನ ಕಲ್ಲಿನಿಂದ ನಿರ್ಮಿಸಿದ ಸಮಾಧಿಗೆ ಧಕ್ಕೆಯಾಗಿದೆ. ಇದರಿಂದ ನಾಯಕ ಸಮುದಾಯದ ಭಾವನೆಗಳು ಘಾಸಿಗೊಂಡಿವೆ ಎಂದು ದೂರಿದ್ದಾರೆ.

ವೇದಿಕೆ ಅಧ್ಯಕ್ಷ ಕೆ.ಟಿ.ಪ್ರಶಾಂತಕುಮಾರ್‌ ಇದ್ದರು.

ರಸ್ತೆ ಮಧ್ಯೆ ಏಕಾಂಗಿ ಧರಣಿ

ಗಾಂಧಿ ವೃತ್ತದಿಂದ ಮೆದೇಹಳ್ಳಿಗೆ ಸಂಪರ್ಕಿಸುವ ರಸ್ತೆ ದುರಸ್ತಿಗೆ ಆಗ್ರಹಿಸಿ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ ಸೋಮವಾರ ಏಕಾಂಗಿ ಪ್ರತಿಭಟನೆ ನಡೆಸಿದರು.

ರಸ್ತೆ ಬಹುತೇಕ ಹಾಳಾಗಿದೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಕೂಡಲೇ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ರಸ್ತೆ ಹಾಳಾಗಿರುವುದಕ್ಕೆ ಸಂಬಂಧಿಸಿದಂತೆ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಗುಂಡಿ ಮುಚ್ಚುವಂತೆ ಕೋರಿಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈವರೆಗೆ ಗಮನಹರಿಸಿಲ್ಲ. ಗಾಂಧಿ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ದ್ವಿಪಥ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಡಿಸಿಗೆ ರೈತರ ಮನವಿ

ಖಾತೆ ಬದಲಾವಣೆ ಹಾಗೂ ಕೆರೆ ಒತ್ತುವರಿ ತೆರವುಗೊಳಿಸಲು ತಹಶೀಲ್ದಾರ್‌ ನೇತೃತ್ವದಲ್ಲಿ ಪ್ರತಿ ತಾಲ್ಲೂಕಿನಲ್ಲಿ ಆಂದೋಲನ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಖಾತೆ ಬದಲಾವಣೆ ದೊಡ್ಡ ಸಮಸ್ಯೆಯಾಗಿದೆ. ಪಿತ್ರಾರ್ಜಿ ಆಸ್ತಿ ವರ್ಗಾವಣೆ ಸಂಕೀರ್ಣ ವ್ಯವಸ್ಥೆಯಾಗಿದೆ. ರೈತರು ವರ್ಷಗಟ್ಟಲೆ ತಾಲ್ಲೂಕು ಕಚೇರಿಗೆ ಅಲೆಯುವಂತಾಗಿದೆ. ಜನಸಾಮಾನ್ಯರು ನ್ಯಾಯದಿಂದ ವಂಚಿತರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಗುವಳಿ ಚೀಟಿ ಸಿಗದೇ ಅನೇಕರು ಪರದಾಡುತ್ತಿದ್ದಾರೆ. ಜಮೀನುಗಳಿಗೆ ತೆರಳಲು ದಾರಿ ಇಲ್ಲದೇ ಸಮಸ್ಯೆ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಭೂವ್ಯಾಜ್ಯಗಳು ಹೆಚ್ಚಾಗುತ್ತಿವೆ. ಇವುಗಳ ಪರಿಹಾರಕ್ಕೆ ಕಂದಾಯ ಇಲಾಖೆ ಒಲವು ತೋರಬೇಕು. 2005ರಲ್ಲಿ ಮಾಡಿದ ವಿಶೇಷ ಪ್ರಯತ್ನ ಮತ್ತೆ ಆರಂಭವಾಗಬೇಕು ಎಂದು ಕೋರಿಕೊಂಡರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಮುಖಂಡರಾದ ಕೆ.ಪಿ.ಭೂತಯ್ಯ, ಕೆ.ಸಿ.ಹೊರಕೇರಪ್ಪ, ಬಸ್ತಿಹಳ್ಳಿ ಸುರೇಶಬಾಬು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು