ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

7

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಹೊಸದುರ್ಗ: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಬಿಸಿಯೂಟ ಕಾರ್ಯಕರ್ತೆಯರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ತಾಲ್ಲೂಕು ಕಚೇರಿಗೆ ಮನವಿ ಸಲ್ಲಿಸಿದರು.

‘ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶುಚಿಯಾಗಿ ಬಿಸಿಯೂಟ ತಯಾರಿಸಿ ಬಡಿಸುತ್ತಿದ್ದೇವೆ. ಇದರಿಂದ ಶಾಲಾ ಹಾಜರಾತಿ ಹಾಗೂ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಿಸುವಲ್ಲಿ ನಮ್ಮಗಳ ಸೇವೆಯೂ ಮಹತ್ತರವಾಗಿದೆ. ಆದರೆ ನಮ್ಮ ಕೆಲಸಕ್ಕೆ ಸರ್ಕಾರ ನೀಡುತ್ತಿರುವ ವೇತನ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ’ ಎಂದು ಪ್ರತಿಭಟನಾ ನಿರತರು ದೂರಿದರು.

ಜೀವನ ನಿರ್ವಹಣೆಯ ದಿನಸಿ ಸಾಮಾನು, ಗ್ಯಾಸ್‌ ಸಿಲಿಂಡರ್‌, ಹಾಲಿನ ವೆಚ್ಚ, ವಿದ್ಯುತ್‌ ವೆಚ್ಚ, ಬಸ್‌ ಪ್ರಯಾಣ ದರ ಸೇರಿ ಇನ್ನಿತರ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ನೀಡುತ್ತಿರುವ ವೇತನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಕನಿಷ್ಠ ₹ 18 ಸಾವಿರ ವೇತನ, ಸೇವಾ ಭದ್ರತೆ, ನಿವೃತ್ತಿ ವೇತನ ಸೌಲಭ್ಯ, ಹೆರಿಗೆ ಭತ್ಯೆ, ಇಎಸ್‌ಐ, ಪಿಎಫ್‌, ಆರೋಗ್ಯ ವಿಮೆ, ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ದಸರಾ ಮತ್ತು ಬೇಸಿಗೆ ರಜೆಯ ವೇತನ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ಒತ್ತಾಯಿಸಿದರು.

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎನ್‌. ರಮೇಶ್, ಕಾರ್ಯದರ್ಶಿ ವಸಂತಬಾಯಿ, ಉಪಾಧ್ಯಕ್ಷೆ ಶಿವಮ್ಮ, ದ್ರಾಕ್ಷಾಯಣಮ್ಮ, ಓಂಕಾರಮ್ಮ, ಭಾರತಮ್ಮ, ಸುನಿತಾಬಾಯಿ, ಅಂಬಿಕಾ, ರತ್ನಮ್ಮ, ಜಯಮ್ಮ, ಗಾತ್ರಮ್ಮ, ಗಂಗಮ್ಮ, ಕೆಂಚಮ್ಮ, ಶಾರದಮ್ಮ, ಸುನಂದಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !