ಬುಧವಾರ, ಡಿಸೆಂಬರ್ 8, 2021
28 °C
ಒಗ್ಗಟ್ಟು ಪ್ರದರ್ಶಿಸಲು ದಲಿತ ಸಂಘರ್ಷ ಸಮಿತಿ ಮನವಿ

ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿದ ವರದಿಯನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಬಿ.ಡಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಅಧಿವೇಶನದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಇದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ 2012ರಲ್ಲಿ ಸಲ್ಲಿಕೆಯಾಗಿದೆ. ಅಧಿಕಾರಕ್ಕೆ ಬಂದ ಯಾವ ಪಕ್ಷಗಳು ವರದಿ ಜಾರಿಗೆ ಮುಂದಾಗಿಲ್ಲ. ಪರಿಶಿಷ್ಟ ಜಾತಿಯೊಳಗಿನ ಸ್ಪೃಶ್ಯರು ವರದಿ ಜಾರಿಯಾಗದಂತೆ ತಡೆಯುತ್ತಿದ್ದಾರೆ. ಕೆಲ ಜಾತಿಗಳ ಒತ್ತಡಕ್ಕೆ ಮಣಿದ ರಾಜಕೀಯ ಪಕ್ಷಗಳು ಸದನದಲ್ಲಿ ವರದಿ ಮಂಡನೆ ಮಾಡದಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೆ ಸಂವಿಧಾನದ ಆಶಯಗಳು ಅನುಷ್ಠಾನ ಆಗಬೇಕಿದೆ. ಶೋಷಿತ ಜಾತಿಗಳು ಬದುಕಿನ ಅವಕಾಶಗಳನ್ನು ನ್ಯಾಯಯುತವಾಗಿ ಹಂಚಿಕೊಳ್ಳುವ ಅಗತ್ಯವಿದೆ. ಆಗ ಮಾತ್ರ ದಲಿತ ಸಮುದಾಯದ ಏಳಿಗೆ ಸಾಧ್ಯವಾಗಲಿದೆ. ಒಗ್ಗಟ್ಟು ಪ್ರದರ್ಶಿಸದೇ ಇದ್ದರೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಬಲವಾಗಿರುವವರು ಇನ್ನಷ್ಟು ಶೋಷಣೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪಂಜಾಬ್‌ ರಾಜ್ಯದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದ ಹೋರಾಟ ಆರಂಭವಾಯಿತು. ನೆರೆಯ ಆಂಧ್ರಪ್ರದೇಶದಲ್ಲಿ ಹೋರಾಟ ಚುರುಕು ಪಡೆಯಿತು. ಕಾನೂನು ಹೋರಾಟವೂ ಹಲವು ಏಳು–ಬೀಳು ಕಂಡಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಗಳಲ್ಲಿ ಒಳಮೀಸಲಾತಿ ಕಲ್ಪಿಸಿ ಕಾನೂನು ರಚಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. 2005ರಲ್ಲಿ ರಚನೆಯಾದ ನ್ಯಾಯಪೀಠ ಇದನ್ನು ಅನುರ್ಜಿತಗೊಳಿಸಿತು ಎಂದು ಹೇಳಿದರು.

ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 51 ಜಾತಿಗಳು ರಾಜ್ಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಏಳು ದಶಕ ಕಳೆದರೂ ಕೆಲ ಜಾತಿಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಮೀಸಲಾತಿ ಸೌಲಭ್ಯ ಇನ್ನೂ ಹಲವು ಕುಟುಂಬಗಳನ್ನು ತಲುಪಿಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಕೆಲ ಜಾತಿಗಳು ಸಹಾನುಭೂತಿ ತೋರುವ ಅಗತ್ಯವಿದೆ. ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸೌಲಭ್ಯ ನಿಗದಿಪಡಿಸಬೇಕಿದೆ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಸಂಘಟನಾ ಸಂಚಾಲಕ ಯಶವಂತರಾಜ್‌, ಟಿ.ಮಲ್ಲೇಶ್‌, ಎಂ.ಜಯಣ್ಣ, ಕೆ.ರಾಜಣ್ಣ, ಮಲ್ಲಿಕಾರ್ಜುನ, ಜಗದೀಶ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು