ಶನಿವಾರ, ನವೆಂಬರ್ 28, 2020
26 °C
ಜೋಗಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಮರಾಠ ಪ್ರಾಧಿಕಾರಕ್ಕೆ ವಿರೋಧ; ಜೋಗಿ ಅಭಿವೃದ್ಧಿ ನಿಗಮ ಸ್ಥಾಪನೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು

ಚಿತ್ರದುರ್ಗ: ರಾಜ್ಯ ಸರ್ಕಾರದ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್‌ಶೆಟ್ಟಿ ಬಣ) ಹಾಗೂ ಜೋಗಿ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಸರ್ಕಾರದ ಕ್ರಮದ ವಿರುದ್ಧ ಧಿಕ್ಕಾರ ಕೂಗಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಸಂಗಪ್ಪ ಅವರ ಮೂಲಕ ಮನವಿ ರವಾನಿಸಿದರು.

ಬೆಳಗಾವಿ ಗಡಿಭಾಗದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ಎಂಇಎಸ್ ಸಂಘಟನೆಯ ಮರಾಠಿಗರು ಗಡಿಭಾಗದ ಊರುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಕುತಂತ್ರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ₹ 50 ಕೋಟಿ ಮೀಸಲಿಟ್ಟಿರುವುದು ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯೋತ್ಸವ ದಿನದಂದು ಮಹಾರಾಷ್ಟ್ರ ಗಡಿಭಾಗದಲ್ಲಿ ಎಂಇಎಸ್‌ ಪುಂಡರು ಕಪ್ಪುಪಟ್ಟಿ ಧರಿಸಿ ಕರಾಳ ದಿನವನ್ನಾಗಿ ಆಚರಿಸಿ, ನಾಡಿಗೆ ದ್ರೋಹ ಎಸಗಿದ್ದಾರೆ. ಹೀಗಿರುವಾಗ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ.ಮಹಂತೇಶ್, ಪದಾಧಿಕಾರಿಗಳಾದ ರವಿಕುಮಾರ್ ಬ್ಯಾಟರಿ, ಡಿಶ್‌ ಬಸಣ್ಣ, ತಿಪ್ಪೇಸ್ವಾಮಿ, ಭೀಮರಾಜ್, ರವಿ, ಬಸವರಾಜಪ್ಪ ಇದ್ದರು.

ಜೋಗಿ ಸಮುದಾಯದ ಪ್ರತಿಭಟನೆ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಜೋಗಿ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಮುಖ್ಯವಾಹಿನಿಗೆ ತರುವ ಪ್ರಯತ್ನ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಬೇಕಿದೆ ಎಂದು ಜೋಗಿ ಸಮಾಜ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಜೋಗಿಗಳಲ್ಲಿನ ಒಳಪಂಗಡ ಸಮುದಾಯ ರಾಜ್ಯದ 24 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈವರೆಗೂ ರಾಜ್ಯ ಸರ್ಕಾರ ಯಾವ ರೀತಿಯ ಮೂಲಸೌಕರ್ಯ ನೀಡಿಲ್ಲ. ಸಮುದಾಯಕ್ಕೆ ಯಾವ ಜನಪ್ರತಿನಿಧಿಗಳು ಇಲ್ಲದ ಕಾರಣ ಸಮುದಾಯದವರ ಸಮಸ್ಯೆಗಳಿಗೆ ಧ್ವನಿ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಸಮುದಾಯದ ಕುಲಶಾಸ್ತ್ರ ಅಧ್ಯಯನ ಕೈಗೊಂಡ ಪ್ರೊ.ಡಿ.ಎನ್.ಶ್ರೀನಿವಾಸ್, ರಾಜ್ಯದಾದ್ಯಂತ ಪ್ರವಾಸ ಮಾಡಿ ವರದಿ ಸಲ್ಲಿಸಿದೆ. ಸಮುದಾಯದ ಒಳ ಪಂಗಡಗಳಾದ ಜೋಗಿ, ನಾಥಪಂಥ ಜೋಗಿ, ಬ್ರಹ್ಮಕಪಾಲಿ, ಜ್ಯೋಗೇರ್, ನಾಥ ಜ್ಯೋಗೇರಾ, ರಾವಳ ಜೋಗಿ, ಹಿಂದು ಜೋಗಿ, ಹಣತಿ ಜೋಗಿ ಹೀಗೆ ಅನೇಕ ಹೆಸರುಗಳಲ್ಲಿ ರಾಜ್ಯದಾದ್ಯಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಇನ್ನಾದರೂ ಸರ್ಕಾರ ಸಮುದಾಯಕ್ಕೆ ಜೋಗಿ ಅಭಿವೃದ್ಧಿ ನಿಗಮ ಸ್ಥಾಪಿಸಲಿ ಎಂದು ಕೋರಿದರು.

ಸಂಘದ ಅಧ್ಯಕ್ಷ ಡಾ.ಕೆ.ಜಗದೀಶ್, ಪ್ರತಾಪ್‌ಜೋಗಿ, ಸಿದ್ಧರಾಜು ಜೋಗಿ, ಬಸವರಾಜ್ ಜೋಗಿ, ಗಿರೀಶ್ ಜೋಗಿ, ಸಿದ್ಧಪ್ಪ ಜೋಗಿ, ಸಿದ್ಧಣ್ಣ ಜೋಗಿ, ಮಂಜುನಾಥ್ ಜೋಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು