ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಹಾರ: ಶೀಘ್ರ ಪಾವತಿಗೆ ಒತ್ತಾಯ

ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ, ವಿಳಂಬ ನೀತಿಗೆ ಆಕ್ರೋಶ
Last Updated 11 ಜೂನ್ 2021, 11:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನೋಂದಾಯಿತ ಕಾರ್ಮಿಕರಿಗೆ ಲಾಕ್‌ಡೌನ್‌ ಪರಿಹಾರತ್ವರಿತವಾಗಿ ನೀಡಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್‌ ಇಂಡಿಯನ್ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು), ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಲ್ಲಿಯ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಾಲಕೃಷ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.

ಸರ್ಕಾರ ಕಾರ್ಮಿಕರಿಗೆ ₹ 3 ಸಾವಿರ ಪರಿಹಾರ ಘೋಷಿಸಿದೆ. ಬೆಲೆ ಏರಿಕೆ ನಡುವೆ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಕನಿಷ್ಠ ₹ 10 ಸಾವಿರ ಪರಿಹಾರವನ್ನು ಮುಂದಿನ ಮೂರು ತಿಂಗಳವರೆಗೂ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಸಂಚಾಲಕ ಸಿ.ಕೆ.ಗೌಸ್‌ಪೀರ್, ‘ಹಸಿದಾಗ ಅನ್ನ ನೀಡುವುದೇ ನಿಜವಾದ ಕಾಳಜಿ. ಕೋವಿಡ್‌ನಿಂದಾಗಿ ತೊಂದರೆಗೆ ಒಳಗಾಗಿರುವ ನೋಂದಾಯಿತ ಕಾರ್ಮಿಕರಿಗೆ ಕಷ್ಟದ ಸಮಯದಲ್ಲಿ ಪರಿಹಾರ ನೀಡಬೇಕು. ವಿಳಂಬವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಕಾರ್ಮಿಕರಿಗೆ ಕೊರೊನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ನೀಡಬೇಕು. ಉಚಿತ ಲಸಿಕೆ ನೀಡುವ ಮೂಲಕ ಕಾರ್ಮಿಕರ ಹಿತ ಕಾಪಾಡಬೇಕು. ಕಟ್ಟಡ ಕಾರ್ಮಿಕರಲ್ಲದವರ ನೋಂದಣಿಯನ್ನು ಕೂಡಲೇ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕೇಂದ್ರ ಕಾರ್ಮಿಕ ಸಂಘಟನೆಗಳ ಜತೆ ಸಂಯೋಜನೆಗೊಂಡಿರುವ ಕಟ್ಟಡ ಕಾರ್ಮಿಕರ ಸಂಘಗಳ ಜೊತೆಗೂಡಿ ಸರ್ಕಾರದ ಸಹಾಯಧನ ಕೊಡಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ನೋಂದಾಯಿತ ಅರ್ಹರಿಗೆ ಮಾತ್ರ ಸೌಲಭ್ಯ ಸಿಗಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಕೋರಿದರು.

ಸಂಘಟನೆಯ ಮುಖಂಡರಾದ ಬಿ.ಸಿ.ನಾಗರಾಜಚಾರಿ, ಎನ್.ಕುಮಾರ್, ಟಿ.ರಾಘವೇಂದ್ರ, ಭಾಸ್ಕರಾಚಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT