ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಅನರ್ಹತೆ ವಿರೋಧಿಸಿ ಪ್ರತಿಭಟನೆ

ಕೇಂದ್ರ ಸರ್ಕಾರದ ನಡೆಯ ವಿರುದ್ಧ ಕಾಂಗ್ರೆಸ್‌ ಆಕ್ರೋಶ
Last Updated 30 ಮಾರ್ಚ್ 2023, 4:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಕಚೇರಿ ಎದುರು ಜಾಮಾಯಿಸಿದ ಪ್ರತಿಭಟನಕಾರರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದು ಮನವಿ ಸಲ್ಲಿಸಿದರು. ಅನರ್ಹತೆಯ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ರಾಜನೀತಿಗೆ ಅನುಗುಣವಾಗಿ ರಾಜಕೀಯ ಮಾಡಬೇಕು ಎಂದು ಒತ್ತಾಯಿಸಿದರು.

‘ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವೇ ಕಾಲಾವಕಾಶ ನೀಡಿದೆ. ಆದರೂ ಸಂಸದ ರಾಹುಲ್ ಗಾಂಧಿ ಅವರ ಲೋಕಸಭೆಯ ಸ್ಥಾನವನ್ನು ಅನರ್ಹಗೊಳಿಸಿದ್ದು ಖಂಡನೀಯ. ಈ ಮೂಲಕ ಬಿಜೆಪಿ ಸೇಡಿನ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ’ ಎಂದು ಮಾಜಿ ಸಚಿವ ಎಚ್.ಅಂಜನೇಯ ಆಕ್ರೋಶ ವ್ಯಕ್ತಪಡಿಸಿದರು.

‘ರಾಹುಲ್ ಗಾಂಧಿ ಅವರು ಭಾಷಣದ ಮೂಲಕ ಸತ್ಯವನ್ನು ಹೇಳಿದ್ದಾರೆ. ಇದನ್ನು ಸಹಿಸಲಾಗದ ಬಿಜೆಪಿ ನಾಯಕರು ಮೊಕದ್ದಮೆ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಆತುರದ ನಿರ್ಧಾರದ ಹಿಂದೆ ಬಿಜೆಪಿ ನಾಯಕರ ಕುಮ್ಮಕ್ಕು ಇರುವುದು ಗುಟ್ಟಾಗಿ ಉಳಿದಿಲ್ಲ’ ಎಂದು ಕಿಡಿಕಾರಿದರು.

‘ಉತ್ತಮ ಸಂಸದೀಯಪಟು ಆಗಿರುವ ರಾಹುಲ್‌ ಗಾಂಧಿ ಅವರು ಅಧಿವೇಶನದಲ್ಲಿ ಅದ್ಭುತವಾಗಿ ಮಾತನಾಡಿದ್ದಾರೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಆಡಳಿತ ಪಕ್ಷದ ಚಳಿ ಬಿಡಿಸಿದ್ದಾರೆ. ಲೋಕಸಭೆಯಲ್ಲಿ ಅವರು ಆಡಿದ ಮಾತುಗಳಿಂದ ಗಲಿಬಿಲಿಗೊಂಡ ಬಿಜೆಪಿ ನಾಯಕರು ಅಸಾಂವಿಧಾನಿಕ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ನೆಹರೂ–ಗಾಂಧಿ ಕುಟುಂಬ ಇಡೀ ದೇಶಕ್ಕೆ ಸರ್ವಸ್ವವನ್ನು ತ್ಯಾಗ ಮಾಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ದೇಶವನ್ನು ಮುನ್ನೆಡೆಸಿದೆ. ಭಾರತ್‌ ಜೋಡೊ ಯಾತ್ರೆಯ ಮೂಲಕ ರಾಹುಲ್‌ ಗಾಂಧಿ ಅವರು ದೇಶದ ಜನರ ಕಣ್ಮಣಿಯಾಗಿ ಹೊರಹೊಮ್ಮಿದರು. ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಿದರು. ಇದು ಬಿಜೆಪಿಗೆ ಸಹಿಸಲು ಸಾಧ್ಯವಾಗಲಿಲ್ಲ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಆರ್‌.ಕೃಷ್ಣಮೂರ್ತಿ, ಮುಖಂಡರಾದ ಎಸ್‌.ಜಯಣ್ಣ, ಎಚ್‌.ಅಂಜಿನಪ್ಪ, ಎನ್.ಡಿ.ಕುಮಾರ್, ಅಬ್ದುಲ್ಲಾ, ಗೀತಾ ನಂದಿನಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT