ಬುಧವಾರ, ಜನವರಿ 20, 2021
22 °C
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪ

ರೈತರ ಮುಖವಾಡ ಧರಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆಗಳು ರೈತಪರವಾಗಿವೆ. ಪ್ರತಿಭಟನೆ ಮಾಡುತ್ತಿರುವವರು ರೈತರಲ್ಲ. ಅವರ ಹೆಸರಲ್ಲಿ ಮುಖವಾಡ ಧರಿಸಿ, ವಿರೋಧಿಗಳು ಈ ಕಾರ್ಯ ಮಾಡುತ್ತಿದ್ದಾರೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಆರೋಪಿಸಿದರು.

ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಸರ್ಕಾರ ಮತ್ತು ರೈತವಿರೋಧಿ ಧೋರಣೆಯುಳ್ಳ ವಿರೋಧಿಗಳೇ ಈ ಕುತಂತ್ರ ರೂಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವೆಡೆ ಮಾತ್ರ ಪ್ರತಿಭಟನೆ ಹೆಚ್ಚಾಗಿ ನಡೆಯುತ್ತಿವೆ. ಉಳಿದ ರಾಜ್ಯಗಳಲ್ಲಿ ನಡೆಯುತ್ತಿಲ್ಲ’ ಎಂದರು.

ಕಾಯ್ದೆಗಳ ಬಗ್ಗೆ ರೈತರಿಗೆ ಶೀಘ್ರವೇ ಸರ್ಕಾರ ಮನವರಿಕೆ ಮಾಡಿಕೊಡಲಿದೆ ಎಂದು ಅವರು, ‘ರಾಸಾಯನಿಕ, ಆರ್ಗ್ಯಾನಿಕ್, ನ್ಯಾನೋ ಈ ಮೂರು ರೀತಿಯ ಗೊಬ್ಬರವನ್ನು ಈಚೆಗೆ 13 ಸಾವಿರ ರೈತರಿಗೆ ನೀಡಲಾಗಿದೆ. ಯಾವ ಗೊಬ್ಬರದಿಂದ ಎಷ್ಟು ಇಳುವರಿ ಬರಲಿದೆ ಎಂಬುದನ್ನು ಸ್ವತಃ ರೈತರೇ ಪರೀಕ್ಷಿಸಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಪರೀಕ್ಷೆ ದೇಶದ 200 ವಿಶ್ವವಿದ್ಯಾಲಗಳಿಗೂ ಮಾದರಿ ಕಳುಹಿಸಲಾಗಿದೆ’ ಎಂದು ವಿವರಿಸಿದರು.

‘ಲೋಕಸಭಾ ಚುನಾವಣೆ ಬಳಿಕ ಜಮ್ಮುಕಾಶ್ಮೀರ, ಬಿಹಾರ, ಕೇರಳ, ಹೈದರಾಬಾದ್ ಸೇರಿ ಎಲ್ಲೆಲ್ಲಿ ಕೆಳಹಂತದ ಚುನಾವಣೆ ನಡೆದಿದೆಯೋ ಅಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದೆ. ಮೋದಿ ನೇತೃತ್ವದ ಸರ್ಕಾರದ ಜನಪರ, ದೇಶದ ಭದ್ರತೆಗೆ ಕೈಗೊಂಡ ಕ್ರಮಗಳಿಂದಾಗಿ ಬಿಜೆಪಿಯತ್ತ ಜನರ ಒಲವು ಹೆಚ್ಚುತ್ತಿದೆ. ಪಶ್ಚಿಮ ಬಂಗಾಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದರು.

‘ಏಕೋಪಾಧ್ಯಾಯರಂತೆ ದಿನ ಮಾತನಾಡುವ ಚಾಳಿ ಇರುವವರಿಗೆ ನಾಯಕತ್ವದ ಗುಣ ಇದ್ದಿದ್ದರೆ ಇಷ್ಟೋತ್ತಿಗೆ ಮುಖ್ಯಶಿಕ್ಷಕರಾಗುತ್ತಿದ್ದರು. ಸಂಕ್ರಾಂತಿ, ದೀಪಾವಳಿ ಪ್ರತಿ ವರ್ಷ ಬರುತ್ತವೆ. ಇದರಲ್ಲಿ ವಿಶೇಷವೇನಿಲ್ಲ. ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾತಿಗೂ ತೂಕವಿಲ್ಲ’ ಎಂದು ಬಸವನಗೌಡ ಪಾಟೀಲ ಯತ್ನಾಳ ಮಾತಿಗೆ ಅವರು ತಿರುಗೇಟು ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು