ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ

22 ಪರೀಕ್ಷಾ ಕೇಂದ್ರಗಳಲ್ಲಿ ಸಕಲ ಸಿದ್ಧತೆ
Last Updated 22 ಏಪ್ರಿಲ್ 2022, 5:18 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿನ ನಾಲ್ಕನೇ ಅಲೆಯ ಮುನ್ಸೂಚನೆ ನಡುವೆಯೇ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಏ. 22ರಿಂದ ಮೇ 18ರವರೆಗೆ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಪಿಯು ಮಂಡಳಿ ನಿಗದಿಪಡಿಸಿದ ಮಾರ್ಗಸೂಚಿಗಳ ಅನುಸಾರ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ ಸ್ನೇಹಿ ವಾತಾವರಣ ಸೃಷ್ಟಿಸಲಾಗಿದೆ. ಪ್ರತಿ ಕ್ಷೇಂದ್ರದಲ್ಲೂ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪರೀಕ್ಷಾ ಕರ್ತವ್ಯದ ಸಿಬ್ಬಂದಿಗೆ ಇಲಾಖೆ ಮಾರ್ಗದರ್ಶನ ನೀಡಿದೆ.

ಪಿಯು ಮಂಡಳಿ ನಿರ್ದೇಶನದಂತೆ ಹಿರಿಯೂರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿಯ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಇದರಿಂದ ಕೇಂದ್ರಗಳ ಸಂಖ್ಯೆ 22ಕ್ಕೆ ಏರಿಕೆ ಕಂಡಿದೆ.

ಪರೀಕ್ಷಾ ದಿನದಂದು ಬೆಳಿಗ್ಗೆ 7ಕ್ಕೆ ಸರಿಯಾಗಿ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಎಲ್ಲ ಪರೀಕ್ಷಾ ಕೇಂದ್ರಗಳಿಗೂ ರವಾನಿಸಲಾಗುತ್ತದೆ. ಇದಕ್ಕಾಗಿ ಭದ್ರತಾ ವ್ಯವಸ್ಥೆ, ನಿಗದಿತ ಮಾರ್ಗಗಳನ್ನು ಅಂತಿಮಗೊಳಿಸಲಾಗಿದ್ದು, ಅಧಿಕಾರಿಗಳ ತಂಡ ಬೆಳಿಗ್ಗೆ 10ರೊಳಗೆ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲಿದ್ದಾರೆ.

ಪ್ರತಿಯೊಬ್ಬರ ಆರೋಗ್ಯ ತಪಾಸಣೆ

ಕೊಠಡಿ ಪ್ರವೇಶಕ್ಕೂ ಮುನ್ನ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಯನ್ನು ನೇಮಿಸಿದೆ. ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ನೀಡಲಾಗಿದೆ. ಮನೆಯಿಂದ ಮಾಸ್ಕ್‌ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಬರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದ್ದು, ಮಾಸ್ಕ್‌ ಧರಿಸದೇ ಬರುವವರಿಗೆ ಉಚಿತವಾಗಿ ಮಾಸ್ಕ್‌ ನೀಡಲಾಗುತ್ತದೆ. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆಗೆ ಸಮಯ ನಿಗದಿಪಡಿಸಲಾಗಿದೆ ಎಂದು ಶೋಭಾ ವಿವರಿಸಿದರು.

ಈ ಬಾರಿ ಜಿಲ್ಲೆಯಲ್ಲಿ ಒಟ್ಟು 16,614 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗುವರು. ಇದರಲ್ಲಿ 14,489 ನೂತನ ವಿದ್ಯಾರ್ಥಿಗಳು, 1,774 ಪುನರಾವರ್ತಿತ ಹಾಗೂ 351 ಖಾಸಗಿ ವಿದ್ಯಾರ್ಥಿಗಳು ಇದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪರಿವೀಕ್ಷಕರು ಹಾಗೂ ವಿದ್ಯಾರ್ಥಿಗಳ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ. ಮುಖ್ಯ ಅಧೀಕ್ಷಕರಿಗೆ ಸಾಮಾನ್ಯ ಫೋನ್‌ ತರಲು ಮಾತ್ರ ಅವಕಾಶ‌ವಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪ್ರಾಥಮಿಕ ಚಿಕಿತ್ಸೆ ಹಾಗೂ ವೈದ್ಯೋಪಚಾರಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ.

ಪರೀಕ್ಷಾ ಕೊಠಡಿಯನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಅಂತರ ಕಾಪಾಡುವುದು, ಆರೋಗ್ಯ ತಪಾಸಣೆ, ಸೋಂಕು ತಡೆಯುವ ಪರಿಕರ ವಿತರಣೆ ಸೇರಿ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಪರೀಕ್ಷಾ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ ಬಸ್‌ ತೊಂದರೆ ಆಗದಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ರೋಗ ಲಕ್ಷಣ ಕಂಡು ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್‌ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ. ಈ ಅಂತರದಲ್ಲಿ ಜೆರಾಕ್ಸ್ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

* ಸುರಕ್ಷತೆಯಿಂದ ಪರೀಕ್ಷೆ ನಡೆಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಿಲ್ಲ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದೆ.

-ಎಂ.ಸಿ. ಶೋಭಾ, ಉಪ ನಿರ್ದೇಶಕಿ, ಪಿ.ಯು. ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT