ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಸುವವರ ಹುದ್ದೆ ಖಾಲಿ: ವಿದ್ಯಾರ್ಥಿಗಳು ಬಲಿ

ಅತಿಥಿ ಉಪನ್ಯಾಸಕರ ನೇಮಕ ವಿಳಂಬ; ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ
Last Updated 1 ಜುಲೈ 2022, 2:21 IST
ಅಕ್ಷರ ಗಾತ್ರ

ಚಿತ್ರದುರ್ಗ: ಪದವಿಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತಿದೆ. ಅತಿಥಿ ಉಪನ್ಯಾಸಕರ ನೇಮಕದ ವಿಷಯದಲ್ಲೂ ವಿಳಂಬ ಆಗುತ್ತಿರುವುದು ಪಠ್ಯ ಪೂರ್ಣಗೊಳಿಸಲು ಸಾಧ್ಯವಾಗದೇ ಫಲಿತಾಂಶ ಕುಗ್ಗುತ್ತಿದೆ.

ಜಿಲ್ಲೆಯಲ್ಲಿ 126 ಪದವಿಪೂರ್ವ ಕಾಲೇಜುಗಳಿವೆ. ಆ ಪೈಕಿ, 36 ಸರ್ಕಾರಿ, 47 ಅನುದಾನಿತ ಹಾಗೂ 43 ಅನುದಾನರಹಿತ ಕಾಲೇಜುಗಳಿವೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಸರ್ಕಾರಿ ಕಾಲೇಜುಗಳಲ್ಲಿ 130 ಹಾಗೂ ಅನುದಾನಿತ ಕಾಲೇಜುಗಳಲ್ಲಿ
150 ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ.

ನಗರ ವ್ಯಾಪ್ತಿಯ ಕಾಲೇಜುಗಳಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಗ್ರಾಮೀಣ ಪ್ರದೇಶದ ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿ ಹಾಗೂ ಉಪನ್ಯಾಸಕರ ಅನುಪಾತ ಎಲ್ಲ ಕಾಲೇಜುಗಳಲ್ಲಿ ಒಂದೇ ರೀತಿಯಾಗಿಲ್ಲ. ಪದವಿಪೂರ್ವ ಶಿಕ್ಷಣ ಇಲಾಖೆ ಇದನ್ನು ಪಾಲನೆ ಮಾಡುವ ಪ್ರಯತ್ನವನ್ನೂ ಇಷ್ಟು ವರ್ಷ ಮಾಡಿಲ್ಲ.

ಪ್ರತಿ ಉಪನ್ಯಾಸಕ ವಾರದಲ್ಲಿ ಸರಾಸರಿ 20 ಗಂಟೆ ಬೋಧನೆ ಮಾಡಬೇಕು ಎಂಬುದು ಸರ್ಕಾರ ರೂಪಿಸಿದ ನಿಯಮ. ಹಲವು ಕಾಲೇಜುಗಳಲ್ಲಿ ನಿಗದಿತ ಅವಧಿಗಿಂತ ಹೆಚ್ಚು ಬೋಧನೆ ಮಾಡಿದರೂ ಪಠ್ಯ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಉಪನ್ಯಾಸಕರ ಬೋಧನೆ ಅವಧಿ ಕಡಿಮೆ ಇದೆ. ಇದನ್ನು ಸರಿದೂಗಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಆ ಕಾಲೇಜುಗಳ ಹೆಚ್ಚುವರಿ ಉಪನ್ಯಾಸಕರನ್ನು ಖಾಲಿ ಇರುವ ಸ್ಥಳಗಳಿಗೆ ನಿಯೋಜಿಸಲು ಈಗಷ್ಟೇ ಮುಂದಾಗಿದೆ.

‘ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇರುವುದು ನಿಜ. ಇಂತಹ ಕಾಲೇಜು ಹಾಗೂ ವಿಷಯಗಳನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸಲಾಗಿದೆ. ಕಾಯಂ ಉಪನ್ಯಾಸಕರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಮತ್ತೊಂದು ಕಾಲೇಜಿಗೆ ನಿಯೋಜಿಸಲಾಗುತ್ತಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಆದರೆ, ಇದನ್ನು ಉಪನ್ಯಾಸಕರು ಅರೆ ಮನಸ್ಸಿನಿಂದ ಸ್ವೀಕರಿಸಿದ್ದಾರೆ. ಹೆಚ್ಚುವರಿ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅನಾರೋಗ್ಯ, ಕೌಟುಂಬಿಕ ಕಾರಣ ನೀಡಿ ನಿಯೋಜನೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ರಾಜಕಾರಣಿಗಳಿಂದ ಒತ್ತಡ ತರಲಾಗುತ್ತಿದೆ. ರಾಜಕಾರಣಿಗಳು ಹಾಗೂ ಉಪನ್ಯಾಸಕರ ನಡುವಿನ ನಿಕಟ ಸಂಪರ್ಕದಿಂದ ಇದು ಸಾಧ್ಯವಾಗುತ್ತಿದೆ. ಬಹುತೇಕ ಕಾಲೇಜುಗಳಲ್ಲಿ ಉಪನ್ಯಾಸಕರು ಬೋಧನೆ ಬದಲಿಗೆ ರಾಜಕಾರಣದಲ್ಲಿ ಸಕ್ರಿಯವಾಗಿರುವ ಆರೋಪವೂ ಇದೆ.

‘ನಮ್ಮ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ. ನಿಯೋಜನೆ ಮೇರೆಗೆ ಇತರ ಉಪನ್ಯಾಸಕರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಇಲಾಖೆ ಆದೇಶ ಹೊರಡಿಸಿದೆ. ಹೀಗೆ ನಿಯೋಜನೆಗೊಂಡ ಯಾವೊಬ್ಬ ಉಪನ್ಯಾಸಕರೂ ಈವರೆಗೆ ಕಾಲೇಜಿಗೆ ಹಾಜರಾಗಿಲ್ಲ’ ಎಂದು ಚಳ್ಳಕೆರೆ ತಾಲ್ಲೂಕಿನ ಗ್ರಾಮವೊಂದರ ವಿಜ್ಞಾನ ವಿಭಾಗದ ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2,000ಕ್ಕೂ ಅಧಿಕ ವಿದ್ಯಾರ್ಥಿನಿಯರಿದ್ದಾರೆ. ಪ್ರಥಮ ವರ್ಷದಲ್ಲಿ 1,119 ಹಾಗೂ ದ್ವಿತೀಯ ವರ್ಷದಲ್ಲಿ 900 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಕಾಲೇಜಿನ 60 ಮಂಜೂರಾತಿ ಉಪನ್ಯಾಸಕರ ಹುದ್ದೆಗಳಲ್ಲಿ 30 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ವಾಣಿಜ್ಯ ವಿಭಾಗದ ಲೆಕ್ಕಶಾಸ್ತ್ರಕ್ಕೆ (ಅಕೌಂಟೆನ್ಸಿ) ಈವರೆಗೆ ಒಬ್ಬರೇ ಉಪನ್ಯಾಸಕರಿದ್ದರು. ಗುರುವಾರವಷ್ಟೇ ಇಬ್ಬರು ಉಪನ್ಯಾಸಕರು ನಿಯೋಜನೆಗೊಂಡಿದ್ದಾರೆ. ಕಂಪ್ಯೂಟರ್‌ ಸೈನ್ಸ್‌ ವಿಷಯಕ್ಕೆ ಉಪನ್ಯಾಸಕರ ಕೊರತೆ ಇದೆ.

ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟದಲ್ಲಿ 2021ರಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರಾಗಿದೆ. 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಪ್ರಾಂಶುಪಾಲರ ಹೊರತಾಗಿ ಬೇರಾವ ಹುದ್ದೆಗೂ ಇಲ್ಲಿ ಮಂಜೂರಾತಿ ಸಿಕ್ಕಿಲ್ಲ. ಚಳ್ಳಕೆರೆ ತಾಲ್ಲೂಕಿನ ಅನುದಾನಿತ ಕಾಲೇಜೊಂದರಲ್ಲಿ 12 ಉಪನ್ಯಾಸಕ ಹುದ್ದೆಗಳಿವೆ. ಇದರಲ್ಲಿ 9 ಜನರು ನಿವೃತ್ತಿ ಹೊಂದಿದ್ದಾರೆ. 2012ರಿಂದ ಖಾಲಿ ಇರುವ ಈ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಈವರೆಗೆ ಅನುಮತಿ ನೀಡಿಲ್ಲ.

ತಿಂಗಳಾದರೂ ಆರಂಭವಾಗದ ನೇಮಕಾತಿ

ಪದವಿಪೂರ್ವ ಕಾಲೇಜುಗಳು ಜೂನ್‌ ಮೊದಲ ವಾರದಲ್ಲೇ ಪ್ರಾರಂಭವಾಗಿವೆ. ಆದರೆ, ಈವರೆಗೆ ಅತಿಥಿ ಉಪನ್ಯಾಸಕರ ನೇಮಕಾತಿ ನಡೆದಿಲ್ಲ.

ಪ್ರತಿ ವರ್ಷವೂ ಈ ಸಮಸ್ಯೆ ಮುಂದುವರಿಯುತ್ತಿದೆ. ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದ ಬಳಿಕ ಈ ಪ್ರಕ್ರಿಯೆ ಆರಂಭವಾಗುತ್ತದೆ. ಇದರಿಂದ ಬೋಧನೆಗೆ ತೊಡಕಾಗುತ್ತಿದ್ದು, ಪಠ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.

‘ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಡಿಡಿಪಿಯು ಎನ್‌.ರಾಜು ತಿಳಿಸಿದರು.

ವಿದ್ಯಾರ್ಥಿಗಳನ್ನು ಹೊರದಬ್ಬುವ ಕಾಲೇಜು

ಉತ್ತೀರ್ಣರಾಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷಕ್ಕೆ ಕಾಲೇಜಿನಿಂದ ಹೊರದಬ್ಬುವ ಪರಿಪಾಠ ಅನುದಾನರಹಿತ
ಶಿಕ್ಷಣ ಸಂಸ್ಥೆಗಳಲ್ಲಿದೆ. ಇಂತಹ ವಿದ್ಯಾರ್ಥಿಗಳು ಅನಿವಾರ್ಯವಾಗಿ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.

‘ಅನುದಾನ ರಹಿತ ಕಾಲೇಜುಗಳು ಉತ್ತೀರ್ಣರಾಗುವ ವಿದ್ಯಾರ್ಥಿಗಳನ್ನು ಮಾತ್ರ ದ್ವಿತೀಯ ಪಿಯುಸಿಯಲ್ಲಿ ಉಳಿಸಿಕೊಳ್ಳುತ್ತವೆ. ತೇರ್ಗಡೆ ಹೊಂದುವ ಸಾಮರ್ಥ್ಯ ಇರದ ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ ನೀಡಿ ಹೊರಕಳುಹಿಸುತ್ತಿವೆ. ಅಂಥ ಅನೇಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜು ಸೇರುತ್ತಿದ್ದಾರೆ. ಇದರಿಂದ ಸರ್ಕಾರಿ ಕಾಲೇಜುಗಳ ಸರಾಸರಿ ಫಲಿತಾಂಶ ಕುಸಿಯುತ್ತಿದೆ’ ಎಂದು ಪ್ರಾಂಶುಪಾಲರೊಬ್ಬರು ಬೇಸರ ವ್ಯಕ್ತಪಡಿಸಿದರು.

...........

ಕೆಲವು ಕಾಲೇಜುಗಳಲ್ಲಿ ಉಪನ್ಯಾಸಕರು ಬಡ್ತಿ ಹೊಂದಿದ್ದಾರೆ. ನಿವೃತ್ತಿಯ ಕಾರಣಕ್ಕೆ ಹಲವು ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳ ಭರ್ತಿಯಾದರೆ ಉಪನ್ಯಾಸಕರ ಕೊರತೆಯ ಸಮಸ್ಯೆ ನೀಗಲಿದೆ.

-ಬಿ.ಆರ್‌. ಮಲ್ಲೇಶ್‌, ಅಧ್ಯಕ್ಷರು, ಜಿಲ್ಲಾ ಪಿಯು ಕಾಲೇಜು ಉಪನ್ಯಾಸಕರ ಸಂಘ

.........

ಉಪನ್ಯಾಸಕರು ಸರಿಯಾಗಿ ತರಗತಿಗೆ ಬರುತ್ತಿರಲಿಲ್ಲ. ಪಠ್ಯವನ್ನು ಪೂರ್ಣಗೊಳಿಸುತ್ತಿರಲಿಲ್ಲ. ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಟ್ಯೂಷನ್‌ಗೆ ಹೋಗಬೇಕಾಯಿತು.

–ಮನೋಜ್‌, ವಿದ್ಯಾರ್ಥಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT