ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ಸುಧಾರಣೆಗೆ ತಜ್ಞರ ತಂಡ

ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲೇ ಕೊನೆಯ ಸ್ಥಾನಕ್ಕೆ ಕುಸಿದ ಜಿಲ್ಲೆ
Last Updated 24 ಜೂನ್ 2022, 3:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಪದವಿ ಪೂರ್ವ ಪರೀಕ್ಷಾ ಫಲಿತಾಂಶ ಸುಧಾರಣೆಗೆ ತಜ್ಞರ ತಂಡವೊಂದನ್ನು ರಚಿಸಲಾಗುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಪರಿಶೀಲಿಸಲಾಗುವುದು ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ತಿಳಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪಿಯು ಕಾಲೇಜು ಪ್ರಾಂಶುಪಾಲರ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಪಿಯು ಫಲಿತಾಂಶ ಸುಧಾರಣೆಯ ಮಾರ್ಗೋಪಾಯಗಳ ಕುರಿತು ಚರ್ಚೆ ನಡೆಸಲಾಯಿತು. ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳು ಸಮನ್ವಯ ಕಾಯ್ದುಕೊಂಡು ಕಾರ್ಯನಿರ್ವಹಿಸಲು ತೀರ್ಮಾನಿಸಲಾಯಿತು.

‘ಜಿಲ್ಲೆಯ ಪಿಯು ಫಲಿತಾಂಶ ಆಘಾತ ತಂದಿದೆ. ಮಕ್ಕಳ ಶೈಕ್ಷಣಿಕ ಸಾಧನೆ ಕಳಪೆಯಾಗಿರುವುದಕ್ಕೆ ಬೋಧಕರಷ್ಟೇ ಪಾಲಕರೂ ಹೊಣೆ ಹೊರಬೇಕಿದೆ. ಸರ್ಕಾರಿ ಕಾಲೇಜುಗಳ ಫಲಿತಾಂಶ ಕಡಿಮೆಯಾದರೆ ಖಾಸಗಿ ಕಾಲೇಜುಗಳು ಲಾಭ ಪಡೆದುಕೊಳ್ಳುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಠಿಣ ವಿಷಯಗಳಿಗೆ ಸಂಬಂಧಿಸಿ ಆನ್‌ಲೈನ್‌ ಮೂಲಕ ಪೂರಕ ಬೋಧನೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಶ್ರೇಷ್ಠ ಆನ್‌ಲೈನ್ ಬೋಧನಾ ಸಂಸ್ಥೆ ಆಂಥಾಲಜಿ ಸೇರಿ ಇತರ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಅಗತ್ಯವಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಣೆ ಆಗಬೇಕಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕಿನ ಆತಂಕ ಇಲ್ಲದಿರುವುದರಿಂದ ತರಗತಿಗಳಲ್ಲಿ ಪಾಠ ಬೋಧನೆ ನಡೆಯಬೇಕು. ಮಕ್ಕಳು ಹಾಗೂ ಪೋಷಕರಿಗೆ ಆತ್ಮಸ್ಥೈರ್ಯ ತುಂಬಬೇಕು. ಪಿಯು ವ್ಯಾಸಂಗಕ್ಕೆ ಪ್ರತಿಭಾವಂತರು ಹಾಗೂ ಸ್ಥಿತಿವಂತ ಕುಟುಂಬದ ಮಕ್ಕಳು ಹೊರಜಿಲ್ಲೆಗೆ ವಲಸೆ ಹೋಗುವುದನ್ನು ತಪ್ಪಿಸಬೇಕು. ಖಾಸಗಿ ಕಾಲೇಜುಗಳು ಶಿಕ್ಷಣವನ್ನು ವ್ಯವಹಾರದ ಉದ್ದೇಶಕ್ಕೆ ಸೀಮಿತಗೊಳಿಸಬಾರದು. ಸರ್ಕಾರಿ ಕಾಲೇಜು ಉಪನ್ಯಾಸಕರು ವಿದ್ಯಾರ್ಥಿಗಳ ಬಗೆಗೆ ಹೊಂದಿರುವ ನಿರ್ಲಕ್ಷ್ಯದ ಮನೋಭಾವನೆ ಬದಲಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

‘ಸರ್ಕಾರಿ ಶಾಲೆ, ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿಗೆ ದತ್ತು ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಶಿಕ್ಷಣ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿಯೂ ದತ್ತು ಪ್ರಕ್ರಿಯೆಗೆ ಪ್ರೋತ್ಸಾಹ ನೀಡಬೇಕು. ಕೊಠಡಿ, ಪ್ರಯೋಗಾಲಯ, ಶೌಚಾಲಯ ಸೇರಿ ಇತರ ಮೂಲಸೌಲಭ್ಯ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿಯಲ್ಲಿ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ರಾಜು ಇದ್ದರು.

...........

ಗ್ರಾಮೀಣ ಶಾಲೆ, ಕಾಲೇಜುಗಳಿಗೆ ಮೂಲಸೌಲಭ್ಯ ಒದಗಿಸಲು ನರೇಗಾದಲ್ಲಿ ಅವಕಾಶವಿದೆ. ಪ್ರಾಂಶುಪಾಲರು ಕ್ರಿಯಾ ಯೋಜನೆ ಸಲ್ಲಿಸಿದರೆ ಮಂಜೂರಾತಿ ನೀಡಲಾಗುವುದು.

- ಡಾ.ಕೆ. ನಂದಿನಿದೇವಿ, ಸಿಇಒ, ಜಿಲ್ಲಾ ಪಂಚಾಯಿತಿ

.............

ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೊಠಡಿ, ಪ್ರಯೋಗಾಲಯ, ಶೌಚಾಲಯಗಳ ಕೊರತೆಯಿದೆ. ಪ್ರತಿ ವಿಭಾಗದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

- ನಾಗರಾಜಪ್ಪ, ಪ್ರಾಂಶುಪಾಲ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT