ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ಒತ್ತುವರಿ ಮಾಡಿದರೆ ಶಿಕ್ಷೆ: ರಘುಮೂರ್ತಿ

ಅಕ್ರಮ ಸಾಗುವಳಿದಾರರಿಂದ ಗೋಮಾಳ ತೆರವುಗೊಳಿಸಿದ ತಾಲ್ಲೂಕು ಆಡಳಿತ
Last Updated 24 ಜೂನ್ 2022, 3:03 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಹೋಬಳಿಯ ರೇಖಲಗೆರೆ ಗ್ರಾಮದ ಹೊರವಲಯದಲ್ಲಿ ತಹಶೀಲ್ದಾರ್‌ ಎನ್‌. ರಘುಮೂರ್ತಿ ನೇತೃತ್ವದಲ್ಲಿ ಗುರುವಾರ ಕಾರ್ಯಾಚರಣೆ ನಡೆಸಿದ ತಾಲ್ಲೂಕು ಆಡಳಿತದ ಸಿಬ್ಬಂದಿ, ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದ ಸಾಗುವಳಿದಾರರಿಂದ ಜಮೀನು ವಶಕ್ಕೆ ಪಡೆದರು. ಅಲ್ಲಿ ‘ಸರ್ಕಾರಿ ಜಾಗ’ ಎಂಬ ನಾಮಫಲಕವನ್ನು ಅಳವಡಿಸಿದರು.

ಗ್ರಾಮದ ಸರ್ವೆ ನಂ. 23ರಲ್ಲಿ 56 ಎಕರೆ, 14 ಗುಂಟೆ ಗೋಮಾಳ, ಸರ್ವೆ ನಂ. 24ರಲ್ಲಿ 39 ಎಕರೆ, 19 ಗುಂಟೆ ಗೋಮಾಳ ಜಮೀನು ಇದೆ. ಇದು ಸಂಪೂರ್ಣವಾಗಿ ಸರ್ಕಾರಕ್ಕೆ ಸೇರಿದ ಜಾಗವಾಗಿದೆ. ಇಲ್ಲಿ ಅಕ್ರಮವಾಗಿ ಕೆಲವು ಸಾಗುವಳಿದಾರರು ತಲಾ 4 ಎಕರೆಯಂತೆ ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ಕೈಗೊಂಡಿದ್ದಾರೆ ಎಂದು ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಬಂದ ತಾಲ್ಲೂಕು ಆಡಳಿತ ಸಿಬ್ಬಂದಿ, ಸರ್ಕಾರಿ ಜಮೀನನ್ನು ಗುರುತಿಸಿ, ‘ಸರ್ಕಾರಿ ಜಾಗ’ ಎಂಬ ಫಲಕವನ್ನು ಹಾಕಿದರು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡದಂತೆ ಒತ್ತುವರಿದಾರರಿಗೆ ಸೂಚಿಸಿದರು.

ಈ ವೇಳೆ ಮಾತನಾಡಿದ ತಹಶೀಲ್ದಾರ್‌ ರಘುಮೂರ್ತಿ, ‘ಗ್ರಾಮೀಣ ಪ್ರದೇಶದ ಪ್ರತಿಯೊಂದು ಗ್ರಾಮಗಳ ಹೊರವಲಯಗಳಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಗೋಮಾಳಗಳನ್ನು ಕಾಯ್ದಿರಿಸಿದೆ. ಅಂತಹ ಸರ್ಕಾರಿ ಗೋಮಾಳಗಳನ್ನು ಸಾಗುವಳಿದಾರರು ಒತ್ತುವರಿ ಮಾಡಿಕೊಂಡರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ
ನೀಡಿದರು.

‘ಈಚಿನ ವರ್ಷಗಳಲ್ಲಿ ಪ್ರತಿ ಹಳ್ಳಿಯಲ್ಲೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತಿದೆ. ಮೇವಿಗಾಗಿ ರೈತರು ಗೋಶಾಲೆಗಳ ಮೊರೆ ಹೋಗುತ್ತಿದ್ದಾರೆ. ಕಾರಣ ಪ್ರತಿಯೊಂದು ಹಳ್ಳಿಗಳಲ್ಲಿದ್ದ ಗೋಮಾಳವನ್ನು ಅಕ್ರಮವಾಗಿ ಸಾಗುವಳಿ ಮಾಡುವ ಮೂಲಕ ಹುಲ್ಲಗಾವಲು ಪ್ರದೇಶ ಇಲ್ಲದಂತೆ ಮಾಡಲಾಗಿದೆ. ಇದರಿಂದ ಹಸು, ಕರು, ಕುರಿ ಮೇಕೆಗಳು ಸೇರಿದಂತೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿ ಅವುಗಳ ಸಂತತಿ ಅವನತಿಯತ್ತ ಸಾಗುತ್ತದೆ. ಜತೆಗೆ ಸರ್ಕಾರಿ ಜಮೀನು ಒತ್ತುವರಿಯಾದರೆ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಲು ಜಾಗದ ಸಮಸ್ಯೆ ಉಂಟಾಗುತ್ತದೆ’ ಎಂದು
ಹೇಳಿದರು.

ಕಂದಾಯ ನಿರೀಕ್ಷಕ ಚೇತನ್‌
ಕುಮಾರ್, ಭೂಮಾಪನಾ ಅಧಿಕಾರಿ ಪ್ರಸನ್ನಕುಮಾರ್ ಹಾಗೂ ಪಿಎಸ್‌ಐ ಬಸವರಾಜ್, ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿ ಮಂಜುನಾಥ, ಮಂಜುನಾಥ ರೆಡ್ಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ. ಕಾಟಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು, ಬೊಮ್ಮಯ್ಯ, ವೀರೇಶ್, ಗ್ರಾಮಸ್ಥರಾದ ಚಿನ್ನಯ್ಯ, ಜಿ.ಎಂ. ತಿಪ್ಪೇಸ್ವಾಮಿ, ಲೋಕೇಶ್, ರಾಮಚಂದ್ರ ನಾಯ್ಕ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT