ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಸ್ಮಶಾನದಲ್ಲೇ ಬದುಕು ಕಳೆದ ಮುಕ್ತಿಧಾಮದ ಹರಿಕಾರ ಪುಟ್ಟಸ್ವಾಮಿ

Last Updated 2 ಡಿಸೆಂಬರ್ 2019, 16:11 IST
ಅಕ್ಷರ ಗಾತ್ರ

ಚಿತ್ರದುರ್ಗದ ‘ಮುಕ್ತಿಧಾಮ’ದ ಕಾವಲುಗಾರ ಕೆ.ಎಸ್‌.ಪುಟ್ಟಸ್ವಾಮಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಮೂರು ದಶಕಗಳ ಹಿಂದೆ ಚಿತ್ರದುರ್ಗಕ್ಕೆ ಬಂದ ಅವರು ಕೋಟೆನಾಡಿನವರೇ ಆಗಿದ್ದಾರೆ. ಅಗಳೇರಿಯ ‘ಮುಕ್ತಿಧಾಮ’ದ ಕಾವಲುಗಾರರಾಗಿ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಎರಡೂವರೆ ದಶಕದಲ್ಲಿ ಐದು ಸಾವಿರಕ್ಕೂ ಹೆಚ್ಚು ಶವಸಂಸ್ಕಾರ ನಡೆಸಿದ್ದಾರೆ. ಪುಟ್ಟಸ್ವಾಮಿ ಅವರು ಸ್ಮಶಾನದಲ್ಲಿದ್ದರೆ ಅಂತ್ಯಕ್ರಿಯೆಗಳು ಶಾಸ್ತ್ರೋಕ್ತವಾಗಿ ನೆರವೇರುತ್ತವೆ ಎಂಬ ಭಾವನೆ ಜನರಲ್ಲಿ ಪಡಿಮೂಡಿದೆ.

* ಸ್ಮಶಾನದಲ್ಲಿ ಕೆಲಸ ಮಾಡುವ ವೃತ್ತಿ ನಿಮ್ಮ ಆಯ್ಕೆಯೇ?

ಇದು ಆಯ್ಕೆಯಲ್ಲ, ಅನಿವಾರ್ಯ. ಚಿತ್ರದುರ್ಗಕ್ಕೆ ಬಂದ ಆರಂಭದಲ್ಲಿ ನಗರಸಭೆ ಕಚೇರಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಸ್ಮಶಾನದ ಉಸ್ತುವಾರಿಯ ಜವಾಬ್ದಾರಿಯೂ ಸಿಕ್ಕಿತು. ಸ್ಮಶಾನ ನಿರ್ವಹಣೆಗೆ ನಗರಸಭೆ ಅಧಿಕೃತವಾಗಿ ನಿಯೋಜಿಸಿತು. ಅದು ದೇವರ ಕೆಲಸ ಎಂದೇ ಭಾವಿಸಿ ತುಂಬು ಮನಸ್ಸಿನಿಂದ ಸ್ವೀಕರಿಸಿದೆ. ಈ ಕೆಲಸಕ್ಕೆ ಆರಂಭದಲ್ಲಿ ಸಿಗುತ್ತಿದ್ದ ವೇತನ ₹ 400 ಮಾತ್ರ.

* ಸ್ಮಶಾನದಲ್ಲಿ ವಾಸ ಮಾಡುವುದು ಕಷ್ಟವಲ್ಲವೆ?

ಇಪ್ಪತ್ತು ವರ್ಷಗಳ ಹಿಂದೆ ‘ಮುಕ್ತಿಧಾಮ’ ಈ ಸ್ಥಿತಿಯಲ್ಲಿ ಇರಲಿಲ್ಲ. ಅಂತ್ಯಕ್ರಿಯೆ ನಡೆಯುವ ಸ್ಥಳದ ಸುತ್ತ ಬೇಲಿ ಕೂಡ ಇರಲಿಲ್ಲ. ಜಾಲಿ ಗಿಡ, ಕಳೆ ಸಸ್ಯಗಳು ಬೆಳೆದುಕೊಂಡಿದ್ದವು. ಅಲ್ಲದೇ, ಇದು ಅನೈತಿಕ ಚಟುವಟಿಕೆಯ ತಾಣವೂ ಆಗಿತ್ತು. ‘ಮುಕ್ತಿಧಾಮ’ದ ಅಭಿವೃದ್ಧಿಗೆ ಅಲ್ಲಿಯೇ ವಾಸ್ತವ್ಯ ಹೂಡಲು ನಿರ್ಧರಿಸಿದೆ. ಆರಂಭದ ದಿನಗಳಲ್ಲಿ ಕಷ್ಟವಾಯಿತು. ಕುಡಿಯುವ ನೀರು, ವಿದ್ಯುತ್ ದೀಪದ ವ್ಯವಸ್ಥೆ ಇರಲಿಲ್ಲ. ದಾನಿಯೊಬ್ಬರು ಒದಗಿಸಿದ್ದ ದೂರವಾಣಿ ಸಂಪರ್ಕವನ್ನು ಕಿಡಿಗೇಡಿಗಳು ಕಿತ್ತು ಹಾಕುತ್ತಿದ್ದರು. ಎಲ್ಲವನ್ನು ಧೈರ್ಯದಿಂದಲೇ ಎದುರಿಸಿದೆ.

* ‘ಮುಕ್ತಿಧಾಮ’ ಸುಂದರವಾಗಿ ಕಂಗೊಳಿಸುವಂತೆ ಮಾಡಿದ್ದು ಹೇಗೆ?

ಸ್ಮಶಾನದ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸಿದ್ದೇನೆ. ಕಳೆ ಸಸ್ಯಗಳನ್ನು ಶುಚಿಗೊಳಿಸಿ ಸ್ವಚ್ಛತೆ ಕಾಪಾಡಿದೆ. ಅಂತ್ಯಕ್ರಿಯೆಗೆ ಬರುವವರು ಕೊಂಚ ವಿಶ್ರಾಂತಿ ಪಡೆಯುಲು ಅನುಕೂಲವಾಗುವ ವಾತಾವರಣ ನಿರ್ಮಿಸಿದೆ. ಸಸಿಗಳನ್ನು ನೆಟ್ಟು ಪೋಷಣೆ ಮಾಡಿದೆ. ಮುಕ್ತಿಧಾಮದ ಆವರಣದಲ್ಲಿ ಪಾರ್ಕ್‌ ನಿರ್ಮಿಸಿದೆ. ಇಲ್ಲಿಗೆ ಬರುವ ಅನೇಕರಿಗೆ ಇದೊಂದು ಉದ್ಯಾನದ ಮಾದರಿಯಲ್ಲಿ ಕಾಣುತ್ತದೆ.

* ಈವರೆಗೆ ಎಷ್ಟು ಶವ ಸಂಸ್ಕಾರ ನಡೆಸಿದ್ದೀರಿ? ಅಂತ್ಯಕ್ರಿಯೆಗೆ ಬರುವವರಿಗೆ ನೀವು ಹೇಗೆ ನೆರವಾಗುತ್ತೀರಿ?

ಸುಡುವ ಸಂಪ್ರದಾಯ ಹೊಂದಿದ ಜನಾಂಗಗಳಿಗೆ ಮಾತ್ರ ಇದು ಮೀಸಲಾಗಿದೆ. ಅಂತ್ಯಕ್ರಿಯೆ ನೆರವೇರಿಸಿದ್ದಕ್ಕೆ ಸಂಬಂಧಿಸಿದಂತೆ ದಾಖಲೆಗಳಿವೆ. 27 ವರ್ಷದಲ್ಲಿ ಐದು ಸಾವಿರಕ್ಕೂ ಅಧಿಕ ಮೃತದೇಹಗಳ ಅಂತ್ಯಕ್ರಿಯೆ ನೆರವೇರಿಸಿದ್ದೇನೆ. ಅನೇಕರು ಶವವನ್ನು ಮುಟ್ಟಲು ಹೆದರುತ್ತಾರೆ. ಅಂತ್ಯಕ್ರಿಯೆಗೂ ಮುನ್ನ ಬಟ್ಟೆಯನ್ನು ತೆಗೆದು ಸಿದ್ಧತೆ ಮಾಡುವ ಕಾರ್ಯದಲ್ಲಿ ನೆರವಾಗುತ್ತೇನೆ. ವಿಧಿವಿಧಾನವನ್ನು ಹೇಳಿಕೊಡುತ್ತೇನೆ. ಅಪಘಾತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸುವಾಗ ಸ್ಮಶಾನ ವೈರಾಗ್ಯ ಮೂಡುತ್ತದೆ.

* ಸ್ಮಶಾನದ ಕೆಲಸ ಮಾಡುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೆ?

ಸ್ಮಶಾನದಲ್ಲಿ ಕೆಲಸ ಮಾಡುವ ಕಾರಣಕ್ಕೆ ಅನೇಕರು ಗೌರವದಿಂದ ನೋಡುತ್ತಾರೆ. ಸಮಾಜದ ಗಣ್ಯರು ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ಸಹಾಯ ಮಾಡಿದ್ದಾರೆ. ಆದರೆ, ಸಮಾಜದೊಂದಿಗೆ ಮುಕ್ತವಾಗಿ ಬೆರೆಯಲು ಕುಟುಂಬಕ್ಕೆ ಸಾಧ್ಯವಾಗಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ ಕಾರಣಕ್ಕೆ ಅನೇಕರು ಮಕ್ಕಳನ್ನು ಮನೆಗೆ ಸೇರಿಸಲು ಹಿಂದೇಟು ಹಾಕಿದ ನಿದರ್ಶನಗಳಿವೆ. ಇಂತಹ ಘಟನೆಗಳು ಮನಸಿಗೆ ನೋವುಂಟು ಮಾಡಿವೆ.

* ಇದೇ ವೃತ್ತಿಯನ್ನು ಮುಂದುವರಿಸುವ ಇಚ್ಛೆ ಇದೆಯೇ?

ಬದುಕಿನ ಬಹುತೇಕ ಸಮಯವನ್ನು ಸ್ಮಶಾನದಲ್ಲೇ ಕಳೆದಿದ್ದೇನೆ. ಈ ಕೆಲಸ ಬಿಟ್ಟು ಬೇರೇನೂ ಗೊತ್ತಿಲ್ಲ. ಈ ಅಸಹಾಯಕತೆಯೇ ಬದುಕಿಗೆ ಉರುಳಾಗಿದೆ. ಎರಡೂವರೆ ವರ್ಷದಿಂದ ನಗರಸಭೆ ವೇತನ ನೀಡಿಲ್ಲ. ಕಾವಲುಗಾರ ಹುದ್ದೆಗೆ ವೇತನ ನೀಡಲು ಅವಕಾಶವಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದರಿಂದ ಬದುಕು ಕಷ್ಟವಾಗುತ್ತಿದೆ.

25 ವರ್ಷ ವೇತನ ನೀಡಿದ ನಗರಸಭೆಯಲ್ಲಿ ಏಕಾಏಕಿ ನೀತಿಗಳು ಬದಲಾಗಿದ್ದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ. ವೇತನ ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೂ ಅಲೆದಿದ್ದೇನೆ. ಅಧಿಕಾರಿಗಳು ತೋರುವ ಕರುಣೆಯಿಂದ ಬದುಕು ನಡೆಸಲು ಸಾಧ್ಯವಿಲ್ಲ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT