ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಪೇಜಾವರ ಶ್ರೀ ಪಾದಸ್ಪರ್ಶದಿಂದ ಹರಿಯುತ್ತಿದೆ ಬಾಂಧವ್ಯದ ಹೊಳೆ

Last Updated 25 ಡಿಸೆಂಬರ್ 2020, 7:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಸೂರನಹಳ್ಳಿ ಆಂಧ್ರಪ್ರದೇಶ ಗಡಿ ಸಮೀಪದ ಗ್ರಾಮ. ಹಲವು ಸಮುದಾಯ ನೆಲೆಸಿರುವ ಹಳ್ಳಿ ಪುಟ್ಟ ಭಾರತವನ್ನು ಒಡಲೊಳೆಗೆ ಇಟ್ಟುಕೊಂಡಿದೆ. ಸಮೃದ್ಧ ಮಳೆ ಸುರಿದಾಗ ಪಕ್ಕದ ವೇದಾವತಿ ನದಿಯಲ್ಲಿ ನೀರು ಹರಿಯುತ್ತದೆ. ಸಾಮರಸ್ಯದ ಹೊಳೆ ಮಾತ್ರ ದಶಕದಿಂದ ನಿತ್ಯವೂ ಊರಿನೊಳಗೇ ಹರಿಯುತ್ತಿದೆ.

ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯ ಪಾದಸ್ಪರ್ಶ ಗ್ರಾಮದಲ್ಲಿದ್ದ ಜಾತಿ ತಾರತಮ್ಯಕ್ಕೆ ಇತಿಶ್ರೀ ಹಾಡಿದೆ. ಶತಮಾನಗಳಿಂದ ಸೃಷ್ಟಿಯಾಗಿದ್ದ ಜಾತಿ ಕಂದಕ ಅಳಿಸಿ ಹೋಗಿದೆ. ಸ್ಪೃಶ್ಯ, ಅಸ್ಪೃಶ್ಯ ಭಾವನೆ ಸಾಮರಸ್ಯದ ಹೊಳೆಯಲ್ಲಿ ತೊಳೆದು ಹೋಗಿದೆ. ವರ್ಷಕ್ಕೊಮ್ಮೆ ನಡೆಯುವ ಕಾರ್ತಿಕೋತ್ಸವ ಊರ ಹಬ್ಬವಾಗಿದೆ. ಪ್ರತಿಯೊಬ್ಬರ ಎದೆಯಲ್ಲಿ ಮಾನವೀಯತೆ ಹಣತೆ ಹಚ್ಚಿದ ಪೇಜಾವರ ಶ್ರೀಗಳಿಗೆ ದೈವದ ಸ್ಥಾನ ಸಿಕ್ಕಿದೆ.

ಹಳ್ಳಿಯಲ್ಲಿ ಹಾಸುಹೊಕ್ಕಾಗಿರುವ ಜಾತಿ ಅಸಮಾನತೆಗೆ ಸೂರನಹಳ್ಳಿ ಹೊರತಾಗಿರಲಿಲ್ಲ. ದಶಕದ ಹಿಂದೆ ನಡೆದ ಸಣ್ಣ ಪ್ರಯತ್ನ ಸಮಾಜಕ್ಕೆ ಮಾದರಿಯಾಗಿದೆ. ಸವರ್ಣೀಯರಷ್ಟೇ ಪ್ರವೇಶ ಪಡೆಯುತ್ತಿದ್ದ ದೇಗುಲಕ್ಕೆ ದಲಿತ ಸಮುದಾಯದ ವ್ಯಕ್ತಿ ಮುಖ್ಯಸ್ಥರಾಗಿದ್ದಾರೆ. ಆರಾಧ್ಯ ದೈವಗಳ ಕಟ್ಟುಪಾಡುಗಳಿಗೆ ಸಿಲುಕಿರುವ ಬುಡಕಟ್ಟು ಸಮುದಾಯದಲ್ಲಿ ಅಸ್ಪೃಶ್ಯರಿಗೂ ಪ್ರವೇಶ ಸಿಕ್ಕಿದೆ. ಕ್ಯಾತಪ್ಪ ದೇವರ ಜಾತ್ರೆಗೆ ದಲಿತರ ಮೀಸಲು ಸ್ವೀಕರಿಸುವಷ್ಟು ಸುಧಾರಣೆ ಕಂಡಿದೆ.

ಪೇಜಾವರ ಮಠ ತಲುಪಿದ ಅಂಚೆ ಪತ್ರ ಇಂತಹದೊಂದು ಬದಲಾವಣೆಗೆ ಕಾರಣವಾಗಿದೆ. ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಸೂರನಹಳ್ಳಿಯ ಶ್ರೀನಿವಾಸ್‌ ಎಂಬುವರು ಪತ್ರದಲ್ಲಿ ವಿವರಿಸಿದ ರೀತಿ ವಿಶ್ವೇಶ್ವತೀರ್ಥರ ಮನಮುಟ್ಟಿತ್ತು. 2009ರ ಫೆ.12ರ ಮಧ್ಯಾಹ್ನ ಸ್ವಾಮೀಜಿ ಗ್ರಾಮ ಪ್ರವೇಶಿಸಿದರು. ಜಾತೀಯತೆ ಆಚರಿಸದಂತೆ ತಿಳಿಹೇಳಿದ ರೀತಿಗೆ ಮೇಲ್ಜಾತಿ ಮನಸುಗಳು ಕರಗಿದವು. ಕೇರಿಗಳಲ್ಲಿದ್ದ ಜಾತಿಯ ಗಡಿ ನಿಧಾನವಾಗಿ ಕಣ್ಮರೆಯಾದವು. ಪೇಜಾವರ ಶ್ರೀ ಗ್ರಾಮದ ಮನೆ–ಮನಗಳಲ್ಲಿ ನೆಲೆನಿಂತರು.

ಸೂರನಹಳ್ಳಿಯಲ್ಲಿ ಪೇಜಾವರ ಶ್ರೀಗಳ ಹೆಸರಿನಲ್ಲಿ ವೇದಾವತಿ ನದಿ ದಡದಲ್ಲಿ ಉದ್ಯಾನ ಕಂಗೊಳಿಸುತ್ತಿದೆ. ತೆಂಗು, ಮಾವು, ತೇಗ, ಶ್ರೀಗಂದ ಮರಗಳೊಂದಿಗೆ ತರಹೇವಾರಿ ಪುಷ್ಪಗಳು ಅರಳುತ್ತಿವೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಗ್ರಾಮಸ್ಥರು ವಾಯುವಿಹಾರಕ್ಕೆ ಉದ್ಯಾನಕ್ಕೆ ಬರುತ್ತಾರೆ. ಯೋಗಾಸನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮಸ್ಥರ ದೇಣಿಗೆಯಲ್ಲಿ ಇದೆಲ್ಲ ಸಾಧ್ಯವಾಗಿದೆ. ಪೇಜಾವರ ಸ್ವಾಮೀಜಿ ಇಲ್ಲಿ ಅಜರಾಮರರಾಗಿದ್ದಾರೆ.

ಅಕ್ಷರ ಜ್ಞಾನದ ದಿವಿಗೆ ಹಚ್ಚಲು ಉದ್ಯಾನದ ಪಕ್ಕದಲ್ಲೇ ಗ್ರಂಥಾಲಯ ನಿರ್ಮಾಣವಾಗಿದೆ. ಗ್ರಂಥಾಲಯಕ್ಕೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯ ನಾಮಕರಣ ಮಾಡಲಾಗಿದೆ. ಕಥೆ, ಕಾದಂಬರಿ, ಇತಿಹಾಸ, ಅಧ್ಯಾತ್ಮಕ್ಕೆ ಸಂಬಂಧಿಸಿದ ಸಾವಿರಾರು ಕೃತಿಗಳು ಗ್ರಂಥಾಲಯದಲ್ಲಿವೆ. ನಿತ್ಯ ನಸುಕಿನಲ್ಲಿ ತೆರೆಯುವ ಗ್ರಂಥಾಲಯದ ಬಾಗಿಲು ರಾತ್ರಿ ಮುಚ್ಚುತ್ತದೆ. ವಿದ್ಯಾವಂತ ಯುವ ಸಮುದಾಯ ಗ್ರಂಥಾಲಯ ನಿರ್ವಹಣೆ ಮಾಡುತ್ತಿದೆ. ಚಹಾದಂಗಡಿಯ ಕಟ್ಟೆಯಲ್ಲಿ ಹರಟೆ ಹೊಡೆಯುತ್ತಿದ್ದ ಜನರು ಗ್ರಂಥಾಲಯದಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಸಾಹಿತ್ಯದ ಬಗ್ಗೆ ಕೇರಿಗಳಲ್ಲಿ ಚರ್ಚೆ ನಡೆಯುತ್ತದೆ.

ಓಣಿಯಲ್ಲಿ ನಿಂತು ಆಂಜನೇಯಸ್ವಾಮಿಗೆ ಕೈಮುಗಿಯುತ್ತಿದ್ದ ದಲಿತರು ದೇಗುಲ ಪ್ರವೇಶಿಸುತ್ತಿದ್ದಾರೆ. ಘಂಟೆ ಬಾರಿಸಿ, ಪೂಜೆ ಸಲ್ಲಿಸಿ ಧ್ಯಾನ ಸ್ಥಿತಿಯಲ್ಲಿ ಕುಳಿತುಕೊಳ್ಳಲು ಇದ್ದ ಅಡ್ಡಿ–ಆತಂಕಗಳು ಮರೆಯಾಗಿವೆ. ದೇಗುಲ ಸಮೀಪದ ಬಾವಿ ನೀರು ಮುಟ್ಟುವಷ್ಟು ಸ್ವಾತಂತ್ರ್ಯ ಸಿಕ್ಕಿದೆ. ಹಬ್ಬ, ಉತ್ಸವ, ಜಾತ್ರೆಗಳಲ್ಲಿ ಎಲ್ಲರೂ ಹರ್ಷದಿಂದ ಪಾಲ್ಗೊಳ್ಳುತ್ತಿದ್ದಾರೆ.

ಪರಿಶಿಷ್ಟ ಜಾತಿಯ ಜನರು ಕ್ಷೌರಕ್ಕೆ ಹತ್ತಾರು ಕಿ.ಮೀ ದೂರದ ಪಟ್ಟಣಕ್ಕೆ ತೆರಳುವ ಸ್ಥಿತಿ ಈಗಿಲ್ಲ. ಕ್ಷೌರದ ಅಂಗಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಸಿಕ್ಕಿದೆ. ಸಹೋದರ ಭಾವ ಜನರನ್ನು ಸಾಮಿಪ್ಯಕ್ಕೆ ತಂದಿದೆ. ವಿಶ್ವೇಶತೀರ್ಥರು ವೇದಾವತಿ ನದಿ ದಡದಲ್ಲಿ ಹಾಕಿದ್ದ ಎರಡು ಆಲದ ಸಸಿಗಳು ಹೆಮ್ಮರವಾಗಿ ಬೆಳೆಯುತ್ತಿವೆ. ಮರದ ಬೇರುಗಳು ಆಳಕ್ಕೆ ಇಳಿಯುತ್ತಿವೆ. ಗ್ರಾಮದಲ್ಲಿದ್ದ ಜಾತಿಯ ಬೇರುಗಳು ಸಡಿಲಗೊಳ್ಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT