ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರು ತಂಡದ ಸವಾಲು ಮೀರುವುದೇ ಡೆನ್ಮಾರ್ಕ್‌?

ಸಿ ಗುಂಪಿನ ಪಂದ್ಯ: ಕ್ರಿಸ್ಟಿಯನ್‌ ಎರಿಕ್ಸನ್‌ ಮೇಲೆ ನಿರೀಕ್ಷೆ
Last Updated 15 ಜೂನ್ 2018, 19:30 IST
ಅಕ್ಷರ ಗಾತ್ರ

ಸರಾನ್ಸ್ಕ್‌ (ಎಎಫ್‌ಪಿ): ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿರುವ ಪೆರು ಹಾಗೂ ಡೆನ್ಮಾರ್ಕ್‌ ತಂಡಗಳು ಶನಿವಾರ ಮುಖಾಮುಖಿಯಾಗಲಿವೆ.

ಇಲ್ಲಿನ ಮೊರ್ದೊವಿಯಾ ಕ್ರೀಡಾಂಗಣದಲ್ಲಿ ಶನಿವಾರ ನಡೆಯುಲಿರುವ ‘ಸಿ’ ಗುಂಪಿನ ಎರಡನೇ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಲಿವೆ. ಈ ತಂಡಗಳು ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.

ಫಿಫಾ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಪೆರು ತಂಡವು 1982ರ ನಂತರ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಗಳಿಸಿದೆ. 1970 ಹಾಗೂ 1978ರ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದೇ ಈ ತಂಡದ ಉತ್ತಮ ಸಾಧನೆ.

ಇತ್ತೀಚಿನ ವರ್ಷಗಳಲ್ಲಿ ನಡೆದ ಪ್ರಮುಖ ಟೂರ್ನಿಗಳಲ್ಲಿ ತಂಡವು ಉತ್ತಮ ಸಾಧನೆ ತೋರಿದೆ. ಇತ್ತೀಚೆಗೆ ಆಡಿದ 15 ಪಂದ್ಯಗಳಲ್ಲೂ ಜಯ ದಾಖಲಿಸಿರುವುದೇ ಇದಕ್ಕೆ ಸಾಕ್ಷಿ.

ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದರಿಂದಾಗಿ ತಂಡದ ಪ್ರಮುಖ ಆಟಗಾರ ಪೌಲೊ ಗ್ಯುರೆರೋ ಅವರನ್ನು ವಿಶ್ವಕಪ್‌ ಟೂರ್ನಿಯಿಂದ ಹೊರಹಾಕಲಾಗಿತ್ತು. ಆದರೆ, ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕೇಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿದ ಕಾರಣ ಅವರು ತಂಡಕ್ಕೆ ಮರಳಿದ್ದಾರೆ.

ತರಬೇತುದಾರ ರಿಕಾರ್ಡೊ ಗರೆಕಾ ಅವರ ಗರಡಿಯಲ್ಲಿ ಪಳಗಿರುವ ತಂಡದ ಶಕ್ತಿ ಫಾರ್ವರ್ಡ್‌ ಹಾಗೂ ಮಿಡ್‌ಫೀಲ್ಡಿಂಗ್‌ ವಿಭಾಗಗಳು. ಬಲಿಷ್ಠ ಫ್ರಾನ್ಸ್‌ ತಂಡದ ನಂತರ ಸಿ ಗುಂಪಿನ ಎರಡನೇ ನೆಚ್ಚಿನ ತಂಡ ಎಂದೇ ಪರಿಗಣಿತವಾಗಿರುವ ಪೆರು ತಂಡದ ಆ್ಯಂಡ್ರೆ ಕ್ಯಾರಿಲ್ಲೊ ಹಾಗೂ ಜೆಫರ್ಸನ್‌ ಫರ್ಫಾನ್‌ ಅವರು ಈ ಪಂದ್ಯದ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.

ಜಯದ ನಿರೀಕ್ಷೆಯಲ್ಲಿ ಡೆನ್ಮಾರ್ಕ್‌: 12ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ ತಂಡವು ತನ್ನ ಬಲಿಷ್ಠ ರಕ್ಷಣಾ ವಿಭಾಗದ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಈ ತಂಡವು ಕಳೆದ 15 ಪಂದ್ಯಗಳಲ್ಲಿ ಒಂದರಲ್ಲಿಯೂ ಸೋತಿಲ್ಲ. ಇದರಿಂದ ಪೆರುವಿನ ಸವಾಲು ಮೀರಿ ಜಯ ಗಳಿಸುವ ವಿಶ್ವಾಸದಲ್ಲಿದೆ.

ಕ್ರಿಸ್ಟಿಯನ್‌ ಎರಿಕ್ಸನ್‌ ಅವರು ತಂಡದ ಪ್ರಮುಖ ಮಿಡ್‌ಫೀಲ್ಡರ್‌. ತಂಡದ ಪರವಾಗಿ ಆಡಿದ 78 ಪಂದ್ಯಗಳಲ್ಲಿ 22 ಗೋಲುಗಳನ್ನು ಅವರು ಗಳಿಸಿದ್ದಾರೆ. ಐರ್‌ಲ್ಯಾಂಡ್‌ ವಿರುದ್ಧದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು ಹ್ಯಾಟ್ರಿಕ್‌ ಗೋಲು ದಾಖಲಿಸಿ ತಮ್ಮ ತಂಡ ವಿಶ್ವಕಪ್‌ನಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲು ನೆರವಾಗಿದ್ದರು.

ಸಿಮೊನ್‌ ಜೇರ್‌ ಹಾಗೂ ಆ್ಯಂಡ್ರಿಯಾಸ್‌ ಕ್ರಿಸ್ಟೆನ್ಸನ್‌ ಅವರ ಅನುಭವವು ನಿರ್ಣಾಯಕ ಹಂತದಲ್ಲಿ ತಂಡಕ್ಕೆ ವರವಾಗುವ ಸಾಧ್ಯತೆ ಹೆಚ್ಚು.

ಇನ್ನೂ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಆಟ ಆಡಿದ ಯುವ ಆಟಗಾರ ಯೂಸೂಫ್‌ ಪೌಲ್ಸೆನ್‌ ಹಾಗೂ ಕ್ಯಾಸ್ಪರ್‌ ದೊಲ್ಬರ್ಗ್‌ ಕೂಡ ಈ ಪಂದ್ಯದಲ್ಲಿ ಮಿಂಚುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT