ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತ್ವದ ಮೇಲೆ ಏಕಸಂಸ್ಕೃತಿ ಸವಾರಿ: ಚಿಂತಕ ಡಾ.ರಹಮತ್‌ ತರೀಕೆರೆ ಕಳವಳ

Last Updated 3 ಜನವರಿ 2019, 17:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಲವು ಭಾಷೆ, ಆಹಾರ, ಜೀವನ ಕ್ರಮಗಳು ದೇಶದ ಸಂಸ್ಕೃತಿಯಲ್ಲಿ ಸಂಕರವಾಗಿವೆ. ಇಂತಹ ಬಹುತ್ವದ ಮೇಲೆ ಏಕಸಂಸ್ಕೃತಿಯನ್ನು ಹೇರುವ ಸಾಂಸ್ಕೃತಿಕ ರಾಜಕಾರಣ ಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ ಎಂದು ಚಿಂತಕ ಡಾ.ರಹಮತ್‌ ತರೀಕೆರೆ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಆಯೋಜಿಸಿದ ‘ವಿಮರ್ಶಾ ಕಮ್ಮಟ’ದಲ್ಲಿ ‘ಸಂಸ್ಕೃತಿ ಅಧ್ಯಯನದ ಆಯಾಮ’ಗಳ ಕುರಿತು ಗುರುವಾರ ಉಪನ್ಯಾಸ ನೀಡಿದರು.

‘ಧರ್ಮ, ಆಹಾರದ ಹೆಸರಿನಲ್ಲಿ ಸಂಸ್ಕೃತೀಕರಣ ಆಕ್ರಮಣಕಾರಿ ಸ್ವರೂಪ ಪಡೆದುಕೊಂಡಿದೆ. ಆಹಾರ ಸಂಸ್ಕೃತಿ ಸೂಕ್ಷ್ಮವಾಗುತ್ತಿದೆ. ಮಾಂಸಾಹಾರ ಸೇವಿಸುವವರ ಮೇಲೆ ದಾಳಿಗಳು ನಡೆಯುತ್ತಿವೆ. ಸಸ್ಯಾಹಾರ ಫ್ಯಾಸಿಸಂ ಭಾಗವಾಗುತ್ತಿದೆ. ಮಾಂಸ ಸೇವಿಸಿ ದೇಗುಲ ಪ್ರವೇಶ ಮಾಡದಂತೆ ಅಲಿಖಿತ ನೀತಿ ರೂಪಿಸಲಾಗಿದೆ. ದೇಗುಲಕ್ಕೆ ಹೋಗುವವರ ಹೊಟ್ಟೆಯಲ್ಲಿ ಮಲ– ಮೂತ್ರ ಇರುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಪ್ರತಿ 20 ಕಿ.ಮೀ.ಗೆ ಭಾಷೆಯ ಸೊಗಡು ಬದಲಾಗುತ್ತದೆ. ಕರ್ನಾಟಕದಲ್ಲಿ ಹಲವು ಬಗೆಯ ಕನ್ನಡ ಹಾಸುಹೊಕ್ಕಾಗಿದೆ. ಇಂತಹ ನೆಲದಲ್ಲಿ ಊರುಗಳ ಹೆಸರುಗಳನ್ನು ಬದಲಾಯಿಸುವ, ಧಾರ್ಮಿಕ ಸಂಕೇತಗಳನ್ನು ಅಳಿಸಿಹಾಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಧಿಕಾರಸ್ಥರು ಮೇಲ್ಜಾತಿಯ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ದಮನಿತರ ಮೇಲೆ ಅಧಿಕಾರ ಚಲಾಯಿಸುವ ಸಾಧನವಾಗಿಯೂ ಸಂಸ್ಕೃತಿ ಬಳಕೆಯಾಗುತ್ತಿದೆ’ ಎಂದು ವಿಶ್ಲೇಷಣೆ ಮಾಡಿದರು.

‘ಪಶ್ಚಿಮದ ಜೀವನಕ್ರಮಕ್ಕೆ ಮುಖಾಮುಖಿಯಾಗಲು ಸಂಸ್ಕೃತಿ ಎಂಬ ಪರಿಭಾಷೆಯನ್ನು ಹುಟ್ಟುಹಾಕಲಾಯಿತು. ಇದು ಗತಕಾಲ ಕೇಂದ್ರಿತವಲ್ಲ. ನಿರಂತರವಾಗಿ ಬದಲಾಗುವ ಪ್ರಕ್ರಿಯೆ. ಸಭ್ಯತೆ, ನಾಗರಿಕತೆ, ನೈತಿಕತೆ, ಜೀವನ ವಿಧಾನ ಹಾಗೂ ಕಲಾ ಕೇಂದ್ರಿತವಾಗಿ ಇದನ್ನು ವ್ಯಾಖ್ಯಾನಿಸಲಾಗಿದೆ. ಇಂಥ ಸಂಸ್ಕೃತಿ ರಾಜಕೀಯ ಆಯಾಮವನ್ನು ಪಡೆದುಕೊಂಡಿದೆ’ ಎಂದು ವಿವರಿಸಿದರು.

‘ಸಂಸ್ಕೃತಿ ಅಧ್ಯಯನ, ವ್ಯಾಖ್ಯಾನ ಹಾಗೂ ಮೌಲ್ಯಮಾಪನದಲ್ಲಿ ತಾರತಮ್ಯ ಕಾಣುತ್ತಿದೆ. ನೇಕಾರರು, ಚಮ್ಮಾರರು, ಕಮ್ಮಾರರು ಸೇರಿ ದುಡಿಯುವ ವರ್ಗದ ಕ್ರಿಯಾಶೀಲತೆಗೆ ಮಾನ್ಯತೆ ಸಿಕ್ಕಿಲ್ಲ. ಏಕಮುಖ ಆಲೋಚನಾ ಕ್ರಮದಿಂದ ಇಂತಹ ತಪ್ಪುಗಳು ಉಂಟಾಗಿವೆ. ಒಂದು ಜ್ಞಾನ ಶಿಸ್ತಿನಿಂದ ಸಂಸ್ಕೃತಿ ಅಧ್ಯಯನ ಪ್ರವೇಶ ಮಾಡುವುದು ತಪ್ಪು’ ಎಂದು ಅಭಿಪ್ರಾಯಪಟ್ಟರು.

‘ಪ್ರತಿ ಜಾತಿಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ನಾಯಕನನ್ನು ಸೃಷ್ಟಿ ಮಾಡಿಕೊಳ್ಳುತ್ತಿವೆ. ಇದನ್ನು ಆಧರಿಸಿ ರಾಜಕೀಯ ಆಶೋತ್ತರ ಈಡೇರಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಅನೇಕರು ಈ ಬದಲಾವಣೆಯ ಮೇಲೆ ಸಂಶೋಧನೆ ನಡೆಸಿದ್ದಾರೆ. ಜಾತಿ ಪ್ರಜ್ಞೆ ಜಾಗೃತವಾಗಿದ್ದು, ಬಹಿರಂಗವಾಗಿ ಪ್ರಕಟಿಸುವುದು ಹೆಮ್ಮೆಯ ಸಂಗತಿಯಾಗಿದೆ. ಜಾತಿ ಕೇಂದ್ರಿತವಾಗಿ ಒಗ್ಗೂಡುವುದು ಹೆಚ್ಚಾಗುತ್ತಿದೆ’ ಎಂದು ಹೇಳಿದರು.

‘ಶಿಕ್ಷಣ, ವಿಚಾರಧಾರೆಯ ರೂಪದಲ್ಲಿ ಆಧುನಿಕತೆ ಭಾರತವನ್ನು ಪ್ರವೇಶಿಸಿದೆ. ಅದರ ವಿಕಾರ ಸ್ವರೂಪವನ್ನು ತಡೆಯುವುದು ಕಷ್ಟ. ಸಣ್ಣ ಸಮುದಾಯದ ಸಂಸ್ಕೃತಿಯನ್ನು ಗುರುತಿಸುವ ಕೆಲಸವನ್ನು ಶಂಭಾ ಜೋಷಿ ಹಾಗೂ ಬರಗೂರು ರಾಮಚಂದ್ರಪ್ಪ ಮಾಡಿದ್ದಾರೆ. ಅವರ ಅಧ್ಯಯನವನ್ನು ವಿಮರ್ಶಾತ್ಮಕವಾಗಿ ನೋಡಬೇಕೆ ಹೊರತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು’ ಎಂದು ಸಲಹೆ ನೀಡಿದರು.

ಪುರುಷ ಕೇಂದ್ರಿತ ಅಧಿಕಾರ: ‘ಶಬರಿಮಲೆಯಲ್ಲಿ ನಡೆಯುತ್ತಿರುವ ವಿವಾದ ಧಾರ್ಮಿಕ ಆಚರಣೆಗೆ ಸೀಮಿತವಾಗಿಲ್ಲ. ಅದರಲ್ಲಿ ರಾಜಕೀಯ ಹಿತಾಸಕ್ತಿ ಇದೆ’ ಎಂದು ರಹಮತ್‌ ತರೀಕೆರೆ ತಿಳಿಸಿದರು.

‘ದರ್ಗಾ ಪ್ರವೇಶಕ್ಕೆ ಮಹಿಳೆಯರಿಗೆ ನಿರ್ಬಂಧ ವಿಧಿಸಿರುವುದನ್ನು ಸಂಸ್ಕೃತಿಯ ಚೌಕಟ್ಟಿನಲ್ಲಿ ಸಮರ್ಥಿಸಲಾಗುತ್ತಿದೆ. ಮಹಿಳೆಯರ ಮೇಲೆ ಅಧಿಕಾರ ಚಲಾಯಿಸಲು ಪುರುಷರು ರೂಪಿಸಿಕೊಂಡ ವಿಧಾನ ಇದು’ ಎಂದರು.

ತಾತ್ವಿಕ ಪರಿಭಾಷೆಯ ಸವಾಲು
ಸ್ತ್ರೀವಾದಿ ವಿಮರ್ಶೆಯ ಸ್ವರೂಪ ರಾಜಕೀಯ ಅಸ್ಮಿತೆ, ಅನನ್ಯತೆ, ಚಾರಿತ್ರಿಕ ನೆಲೆಗಟ್ಟಿನಲ್ಲಿ ರೂಪುಗೊಂಡಿದ್ದು, ಗಡಿ ಹಾಗೂ ತಾತ್ವಿಕ ಪರಿಭಾಷೆಯ ಸವಾಲುಗಳನ್ನು ಎದುರಿಸುತ್ತಿದೆ ಎಂದು ವಿಮರ್ಶಕಿ ಡಾ.ಆರ್.ತಾರಿಣಿ ಶುಭದಾಯಿನಿ ಹೇಳಿದರು.

‘ಸ್ತ್ರೀವಾದಿ ವಿಮರ್ಶೆ ಅಮೂರ್ತ ನೆಲೆಯಲ್ಲಿದೆ. ಕೃತಿ, ಕೃತಿಕಾರ ಹಾಗೂ ಸಮಾಜ ಕೇಂದ್ರಿತವಾಗಿ ವಿಮರ್ಶೆ ಮಾಡಲಾಗುತ್ತದೆ. ಈಚೆಗೆ ಸಮಾಜ ಕೇಂದ್ರಿತ ವಿಮರ್ಶೆ ಹೆಚ್ಚಾಗಿದೆ. ಇಲ್ಲಿ ಜ್ಞಾನ ಶಿಸ್ತುಗಳನ್ನು ಅಳವಡಿಸುವಾಗ ಸಮಸ್ಯೆಗಳು ಎದುರಾಗುತ್ತಿವೆ’ ಎಂದು ತಿಳಿಸಿದರು.

‘ರಾಜಕೀಯ ಅಂಶಗಳಿಂದ ಪ್ರೇರೇಪಿತಗೊಂಡು ಸ್ತ್ರೀವಾದ ಹಾಗೂ ವಿಮರ್ಶೆ ಚರ್ಚಿತಗೊಳ್ಳುತ್ತಿದೆ. ಲೇಖಕಿಯ ಪೂರ್ವಪರ ತಿಳಿದು ಕೃತಿಯನ್ನು ವಿಮರ್ಶೆಗೆ ಒಳಪಡಿಸಲಾಗುತ್ತಿದೆ. ಸಾಹಿತ್ಯ ರಚನೆಗೆ ಸಿಕ್ಕ ಪ್ರೇರಣೆಯನ್ನು ಸಹ ಗಣನೆಗೆ ತೆಗದುಕೊಂಡು ಚರ್ಚಿಸಲಾಗುತ್ತಿದೆ’ ಎಂದರು.

*
ವಿಜ್ಞಾನದ ಪ್ರಭಾವದಿಂದ ಮಾನವನ ಬದುಕು ಅಸ್ತವ್ಯಸ್ತವಾಗಿದೆ. ನಿಸರ್ಗವನ್ನು ಉಳಿಸಿಕೊಳ್ಳಲು ಕಾವ್ಯಕ್ಕೆ ಇದು ವಸ್ತುವಾಗಬೇಕಿದೆ. ನಿಸರ್ಗದ ಕೊರತೆಯನ್ನು ಕಾವ್ಯ ತುಂಬಲಿದೆ.
-ಎಚ್‌.ದಂಡಪ್ಪ, ಸದಸ್ಯ ಸಂಚಾಲಕರು,ಕರ್ನಾಟಕ ಸಾಹಿತ್ಯ ಅಕಾಡೆಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT