ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ವಿವಿಧೆಡೆ ಸುರಿದ ಮಳೆ, ರೈತರ ಮೊಗದಲ್ಲಿ ಕಳೆ

Last Updated 23 ಜೂನ್ 2019, 16:40 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಇಲ್ಲಿ ಭಾನುವಾರ ಸುಮಾರು ಮುಕ್ಕಾಲು ಗಂಟೆ ಜಿಗುಟು ಜಿಗುಟಾಗಿ ಬಿದ್ದ ಮಳೆ, ಈಗಾಗಲೇ ಬಿತ್ತಿದ ಮೆಕ್ಕೆಜೋಳ ಹಾಗೂ ಹತ್ತಿ ಬೆಳೆಗೆ ಮರು ಜೀವ ನೀಡಿದಂತಾಗಿದೆ.

ಭಾನುವಾರ ಬೆಳಿಗ್ಗೆ ಬಿಟ್ಟು ಬಿಟ್ಟು ಬಂದ ಮಳೆ ಇಳೆಗೆ ಸ್ವಲ್ಪ ತಂಪನ್ನು ತಂದಿದೆ. ಕಳೆದ 20 ದಿನಗಳಿಂದ ಮಳೆಯನ್ನೇ ಕಾಣದೆ ಕಂಗಾಲಾಗಿದ್ದ ರೈತರಲ್ಲಿ ಮೊಗದಲ್ಲಿ ಸ್ವಲ್ಪ ನಗು ಮೂಡಿದೆ.

ಬಿತ್ತನೆ ವಿಳಂಬ: ಬಿ. ದುರ್ಗ ಹೋಬಳಿಯ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆಯಾಗದೆ, ಬಿತ್ತನೆ ಕಾರ್ಯವನ್ನೇ ಆರಂಭ ಮಾಡಿಲ್ಲ. ಕೋಟೆಹಾಳ್‌, ಕೊಡಗವಳ್ಳಿ, ಮುತ್ತುಗದೂರು, ಗ್ಯಾರೇಹಳ್ಳಿ ಮೊದಲಾದ ಕಡೆಗಳಲ್ಲಿ ತಿಂಗಳಾದರೂ ಮಳೆ ಬಂದಿಲ್ಲ. ಮಳೆಗಾಗಿ ಪ್ರಾರ್ಥಿಸಿ ಗ್ಯಾರೆಹಳ್ಳಿ ಗ್ರಾಮಸ್ಥರು ಜೂನ್‌ 4ರಂದು ಮಿಂಚೇರಿ ಬೆಟ್ಟದಲ್ಲಿ ವಿಶೇಷ ಗಂಗಾ ಪೂಜೆಯನ್ನೂ ಮಾಡಿದ್ದರು. ಆದರೂ, ಮಳೆ ಬಾರದೆ ಈ ಭಾಗದ ರೈತರು ಕಂಗಾಲಾಗಿದ್ದಾರೆ. ಮಳೆ ಹೀಗೆ ಕೈಕೊಟ್ಟರೆ ಈ ವರ್ಷ ಊಟಕ್ಕೂ ರಾಗಿ ಜೋಳ ಸಿಗದ ಸ್ಥಿತಿ ನಿರ್ಮಾಣವಾಗುವುದು ಎಂಬುದು ಹೋಬಳಿಯ ರೈತರ ಆತಂಕ.

ಸಿರಿಗೆರೆಯಲ್ಲೂ ಮಳೆ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಂಜೆ ಸುಮಾರಿಗೆ ಹತ್ತು ನಿಮಿಷಗಳ ಕಾಲ ಸ್ವಲ್ಪಮಟ್ಟಿನ ಮಳೆಯಾಯಿತು.

ಜೂನ್ ತಿಂಗಳು ಕಳೆಯುತ್ತ ಬಂದರೂ ಮುಂಗಾರು ಮಳೆಯ ಭರವಸೆಯೇ ಇಲ್ಲವಾದಂತೆ ಕಾಯುತ್ತಿದ್ದ ರೈತರಿಗೆ ಒಂದಿಷ್ಟು ಮಳೆಯಾಗಿರುವುದು ಸಂತೋಷ ತಂದಿದೆ.

ಭೂಮಿ ಹದ ಮಾಡಿಕೊಂಡು ಮುಂಗಾರು ಮಳೆಗಾಗಿ ಕಾದಿದ್ದಕ್ಕೆ ಸ್ವಲ್ಪವಾದರೂ ನಿಟ್ಟುಸಿರು ಬಿಡುವಂತಾಗಿದೆ ಎಂದು ಗ್ರಾಮಗಳ ರೈತರು ತಿಳಿಸಿದರು.

ಸಿರಿಗೆರೆ, ಕೋಣನೂರು, ಓಬವ್ವನಾಗತಿಹಳ್ಳಿ, ಸಿರಿಗೆರೆ ಸರ್ಕಲ್‌, ದೊಡ್ಡಾಲಗಟ್ಟ, ಚಿಕ್ಕಾಲಗಟ್ಟ, ಚಿಕ್ಕೇನಹಳ್ಳಿ, ಜಮ್ಮೇನಹಳ್ಳಿ, ಸಿದ್ದಾಪುರ, ಡಿ.ಮೆದಕೇರಿಪುರ ಗ್ರಾಮಗಳಲ್ಲಿ ಸ್ವಲ್ಪಮಟ್ಟಿನ ಮಳೆಯಾಗಿದೆ.

ಪರಶುರಾಂಪುರದಲ್ಲಿ ತುಂಬಿ ಹರಿದ ಕಾಲುವೆ: ಪರಶುರಾಂಪುರದಲ್ಲಿ ಸಂಜೆ ಅರ್ಧ ಗಂಟೆವರೆಗೆ ಹದ ಮಳೆ ಆಗಿದ್ದು, ಹೊಸಕೆರೆ ಹೋಗುವ ಕಾಲುವೆ ತುಂಬಿ ಹರಿದಿದೆ

ಮಳೆಗಾಗಿ ಕಾಯುತ್ತಿದ್ದ ರೈತರ ಮೂಗದಲ್ಲಿ ಸ್ವಲ್ಪ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಪ್ರಾರಂಭವಾಗಲಿವೆ.

ಹೊಸದುರ್ಗದಲ್ಲಿ ಹದ ಮಳೆ
ತಾಲ್ಲೂಕಿನ ವಿವಿಧೆಡೆ ಭಾನುವಾರ ಸಂಜೆ ಹದ ಮಳೆಯಾಗಿದೆ.

ಮಾವಿನಕಟ್ಟೆ, ಮಲ್ಲಾಪುರ, ದೊಡ್ಡಘಟ್ಟ, ಕಂಠಾಪುರ, ದೇವಪುರ, ಕೋಡಿಹಳ್ಳಿ, ಜಾನಕಲ್ಲು, ಗುಡ್ಡದನೇರಲಕೆರೆ, ಅರೇಹಳ್ಳಿ, ಇಟ್ಟಿಗೆಹಳ್ಳಿ, ಗುಡ್ಡದನೇರಲಕೆರೆ, ಇಂಡೇದೇವರಹಟ್ಟಿ, ಚಳ್ಳಕೆರೆ, ತಿಪ್ಪೇನಹಳ್ಳಿ, ಮಸಣೇಹಳ್ಳಿ, ಮಾಡದಕೆರೆ ಸುತ್ತಮುತ್ತ ಹದ ಮಳೆಯಾಗಿದೆ.

ಎಂ.ಜಿ.ದಿಬ್ಬ, ಕ್ಯಾದಿಗೆರೆ, ಮೆಟ್ಟಿನಹೊಳೆ, ಮಾಚೇನಹಳ್ಳಿ, ಮತ್ತೋಡು, ಕಂಚೀಪುರ, ಕಿಟ್ಟದಾಳ್‌, ನಾಗನಾಯ್ಕನಕಟ್ಟೆ, ಬಲ್ಲಾಳಸಮುದ್ರ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಸೋನೆ ಮಳೆ ಬಂದಿದೆ.

ಮಳೆ ಬಂದಿರುವುದರಿಂದ ತಾಲ್ಲೂಕಿನ ಹಲವೆಡೆ ಒಣಗುವ ಸ್ಥಿತಿಯಲ್ಲಿದ್ದ ಪೂರ್ವ ಮುಂಗಾರಿನ ಬೆಳೆಗಳು ಕೊಂಚ ಚೇತರಿಸಿಕೊಳ್ಳಲು ನೆರವಾಗಿದೆ.

ಹದ ಮಳೆಗೆ ತಂಪಾದ ಇಳೆ
ನಾಯಕನಹಟ್ಟಿ: ಬಹುದಿನಗಳಿಂದ ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾನುವಾರ ಸುರಿದ ಹದ ಮಳೆಯು ಸಮಾಧಾನವನ್ನು ತಂದಿದೆ.

ಹೋಬಳಿಯ ಉಪ್ಪಾರಹಟ್ಟಿ, ಗಂಗಯ್ಯನಹಟ್ಟಿ, ಅಬ್ಬೇನಹಳ್ಳಿ, ಗಜ್ಜುಗಾನಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ರಾಮಸಾಗರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಬೆಳಿಗ್ಗೆಯಿಂದಲೇ ತುಂತುರು ಮಳೆ ಸುರಿದಿದೆ. ಮಧ್ಯಾಹ್ನದ ನಂತರ ಅಲ್ಲಲ್ಲಿ ಬಿರುಸು ಮಳೆಯಾಗಿದ್ದರಿಂದ ಮಲ್ಲೂರಹಳ್ಳಿಯ ಚೆಕ್‌ಡ್ಯಾಂಕ್ ಸೇರಿದಂತೆ ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹವಾಗಿದೆ.

ಮಲ್ಲೂರಹಳ್ಳಿ ರೈತ ಕಾಟಯ್ಯ, ‘ಮಳೆಯಿಲ್ಲದೆ ತತ್ತರಿಸಿ ಹೋಗಿದ್ದ ರೈತರಿಗೆ ಈ ಮಳೆ ಸ್ವಲ್ಪ ನೆಮ್ಮದಿ ತಂದಿದೆ. ಮುಂದಿನ ದಿನಗಳಲ್ಲಿ ಉತ್ತಮವಾಗಿ ಮಳೆಯಾಗುತ್ತದೆ ಎನ್ನುವ ನೀರಿಕ್ಷೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ’ ಎಂದರು.

ಮಳೆಗಾಗಿ ಮಳೆ ಮಲ್ಲಪ್ಪ ಪೂಜೆ
ಭರಮಸಾಗರ: ಈ ವರ್ಷದ ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿರುವ ಹಿನ್ನಲೆಯಲ್ಲಿ ಹೋಬಳಿಯಾದ್ಯಂತ ರೈತರು ಮಳೆಗಾಗಿ ವಿವಿಧ ದೇವರ ಪೂಜೆಗಳಲ್ಲಿ ತೊಡಗಿದ್ದಾರೆ.

ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಕ್ಕಳು ಮಳೆಗಾಗಿ ಪ್ರಾರ್ಥಿಸಿ ಭಾನುವಾರ ಮಳೆಮಲ್ಲಪ್ಪನ ಪೂಜೆ ಮಾಡಿದರು.

ಬೆತ್ತಲೆ ಹುಡುಗನೊಬ್ಬ ತೆಲೆಯ ಮೇಲೆ ಹೊತ್ತ ಮಣೆಯ ಮೇಲೆ ಸಗಣಿಯಿಂದ ಮಾಡಿದ ಸಣ್ಣ ಗುಡ್ಡೆಯನ್ನಿರಿಸಿ ಅದಕ್ಕೆ ಹುಲ್ಲುಗರಿಕೆ, ವಿವಿಧ ಹೂಗಳಿಂದ ಅಲಂಕರಿಸಿ ಗ್ರಾಮದ ಮನೆಗಳ ಬಾಗಿಲಿಗೆ ಮೆರವಣಿಗೆ ಮೂಲಕ ಸಾಗಿ ಮಳೆಗಾಗಿ ‘ಹುಯ್ಯೋ ಹುಯ್ಯೋ ಮಳೆರಾಯ ರೈತನ ಹೊಲಕ್ಕೆ ನೀರಿಲ್ಲ’ ಎಂದು ಹಾಡಿದರು.

ಮನೆಯ ಮುಂದೆ ಬಂದ ಈ ಮಳೆಮಲ್ಲಪ್ಪನಿಗೆ ಮನೆಯವರು ನೀರೆರೆದು ಅವರಿಗೆ ಕಾಣಿಕೆ, ಧಾನ್ಯ ನೀಡಿದರು. ಇವುಗಳನ್ನು ಸ್ವೀಕರಿಸಿದ ಮಕ್ಕಳು ಊರ ಮುಂದಿನ ಕುಕ್ಕುವಾಡೇಶ್ವರಿ, ಈರಗಟ್ಟೆಪ್ಪ, ಚಿತ್ರಲಿಂಗ, ಕರಿಗಲ್ಲು, ದುರ್ಗಮ್ಮ, ಉಡಸಲಮ್ಮ, ದೇವಸ್ಥಾನಗಳ ಮುಂದೆ ಹೋಗಿ ಮಳೆಗಾಗಿಪ್ರಾರ್ಥಿಸಿದರು.

ಗ್ರಾಮಸ್ಥರು ನೀಡಿದ ಧಾನ್ಯದಿಂದ ಪ್ರಸಾದ ತಯಾರಿಸಿ ದೇವರಿಗೆ ಸಮರ್ಪಿಸಿ, ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT