ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಧಾರಾಕಾರ ಮಳೆಗೆ ಕೋಟೆನಾಡಿನ ಹೊಂಡಗಳು ಭರ್ತಿ
Last Updated 29 ಜುಲೈ 2020, 15:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ವರುಣನ ಆರ್ಭಟ ಮುಂದುವರಿದಿದೆ. ಗುಡುಗು, ಸಿಡಿಲು, ಬಿರುಗಾಳಿ ಸಹಿತ ಬುಧವಾರ ಧಾರಾಕಾರ ಮಳೆ ಸುರಿದಿದೆ.

ಸಂಜೆ 6ರ ಸುಮಾರಿಗೆ ಕೆಲವೆಡೆ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. 7ಕ್ಕೆ ಆರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಬಿರುಸು ಪಡೆಯಿತು. ಎರಡು ಗಂಟೆಗೂ ಅಧಿಕ ಹೊತ್ತು ಉತ್ತಮ ಮಳೆಯಾಯಿತು. ರಾತ್ರಿ 8ರ ಬಳಿಕ ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಯಿತು.

ಚಿತ್ರದುರ್ಗ ನಗರದ ತುರುವನೂರು ರಸ್ತೆ ಮಾರ್ಗದ ಕೆಳಸೇತುವೆ, ಜೆಸಿಆರ್ ಬಡಾವಣೆ ಕೆಳಭಾಗದ ಕೆಳಸೇತುವೆ, ಬಿ.ಡಿ. ರಸ್ತೆ ಮಾರ್ಗದ ಪೈ ಇಂಟರ್‌ನ್ಯಾಷನಲ್‌ ಷೋರೂಂನಿಂದ ಗಾಂಧಿ ವೃತ್ತದವರೆಗೂ ಮಳೆಯಿಂದಾಗಿ ಜಲಾವೃತವಾಯಿತು. ಈ ಮಾರ್ಗಗಳಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡಬೇಕಾಯಿತು. ಮಳೆ ನೀರಿನ ಜತೆ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದು ಅವಾಂತರ ಸೃಷ್ಟಿಸಿತು.

ಆಗಿಂದಾಗ್ಗೆ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಅನೇಕ ಹೊಂಡ, ಕಲ್ಯಾಣಿಗಳು ತುಂಬುವ ಹಂತ ತಲುಪಿವೆ. ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡ ತುಂಬಿದ್ದು, ಕೋಡಿ ಬಿದ್ದಿದೆ. ಸಿಹಿನೀರು ಹೊಂಡ ಭರ್ತಿಯಾಗಿದ್ದು, ಇನ್ನೊಂದೆರಡು ಬಿರುಸಿನ ಮಳೆಯಾದರೆ ಕೋಡಿ ಬೀಳಲಿದೆ. ಸಂತೆಹೊಂಡ ಭರ್ತಿಯಾಗಿದೆ. ಈ ಹೊಂಡಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.

ಕಳೆದ ಒಂದು ವಾರದಿಂದಲೂ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದಾಗಿ ಅನೇಕ ಕೆರೆ-ಕಟ್ಟೆ, ವಡ್ಡು, ಬಾವಿಗಳಿಗೂ ನೀರು ಹರಿದಿದೆ. ಅಂತರ್ಜಲ ಮಟ್ಟ ದಿನೇ ದಿನೇ ಹೆಚ್ಚಳವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT