ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಭೂಮಿಯಲ್ಲೇ ಮೊಳಕೆಯೊಡೆದ ಶೇಂಗಾ

ಕೊಯ್ಲಿಗೆ ತೊಂದರೆ; ಕಾರ್ಮಿಕರು ಸಿಗದೇ ರೈತರ ಪರದಾಟ
Last Updated 8 ಸೆಪ್ಟೆಂಬರ್ 2022, 7:07 IST
ಅಕ್ಷರ ಗಾತ್ರ

ಹೊಸದುರ್ಗ: ಕೆಲವು ದಿನಗಳಿಂದ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೊಯ್ಲಿಗೆ ಬಂದಿದ್ದ ಶೇಂಗಾ ಭೂಮಿಯಲ್ಲೇ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲವಲ್ಲ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಪ್ರತಿನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಜಮೀನು ಸಂಪೂರ್ಣ ತೇವವಾಗಿದ್ದು, ಶೇಂಗಾ ಕೊಯ್ಲು ಮಾಡಲು ಆಗದೇ ರೈತರು ಪರದಾಡುವಂತಾಗಿದೆ. ಹಸಿ ಹೆಚ್ಚಾಗಿರುವುದರಿಂದ ಶೇಂಗಾ ಮೊಳಕೆ ಒಡೆಯಲಾರಂಭಿಸಿದೆ.

‘ಗಿಡವೊಂದಕ್ಕೆ 50ರಿಂದ 60 ಕಾಯಿ ನಿರೀಕ್ಷಿಸಲಾಗಿತ್ತು. ಆದರೆ, ಈಗ ಮೊಳಕೆಯೊಡೆದ ಕಾಯಿಗಳನ್ನು ಹೊರತುಪಡಿಸಿ ಗರಿಷ್ಠ 10 ಕಾಯಿ ಕೈಗೆಟುಕುವುದೂ ಕಷ್ಟ. 15 ದಿನ ಮೊದಲೇ ಶೇಂಗಾ ಕೀಳಬೇಕಿತ್ತು. ಮಳೆಯಿಂದಾಗಿ ಅದು ಸಾಧ್ಯವಾಗಲಿಲ್ಲ’ ಎಂದು ತಾಲ್ಲೂಕಿನ ಮಳಲಿ ಗ್ರಾಮದ ರೈತ ಹರೀಶ್ ಅಳಲು ತೋಡಿಕೊಂಡರು.

ಈಗಾಗಲೇ ಗಿಡಗಳಲ್ಲಿನಶೇ 25ರಷ್ಟು ಕಾಯಿಗಳು ಮೊಳಕೆಯೊಡೆದಿವೆ. ಈ ಹಿಂದೆ 1 ಎಕರೆ ಭೂಮಿಯಲ್ಲಿ 10 ಕ್ವಿಂಟಲ್ ಶೇಂಗಾ ಸಿಗುತ್ತಿತ್ತು. ಈ ಬಾರಿ 5 ಕ್ವಿಂಟಲ್ ಸಿಗುವುದೂ ಕಷ್ಟವಾಗಿದೆ. ಮಳೆಯಿಂದಾಗಿ ಜಮೀನಿನಲ್ಲಿ ಆವರಿಸಿಕೊಂಡಿಡಿರುವ ಕೆಸರಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಯಾರೂ ಮುಂದೆ ಬರುತ್ತಿಲ್ಲ.

ಬಂದರೂ ಕೆಲಸ ಮಾಡುವುದು ಸುಲಭವಲ್ಲ ಎಂಬ ಸ್ಥಿತಿ ಇದೆ. ಶೇಂಗಾದಲ್ಲಿ ಮಣ್ಣು ಜೊತೆಗೆ ಹುಲ್ಲು ಹೆಚ್ಚಾಗಿದ್ದು, ಪ್ರತಿನಿತ್ಯ ಕೊಯ್ಲ ಮಾಡಲು 6ರಿಂದ 7 ಜನ ಕಾರ್ಮಿಕರು ಬೇಕಾಗುತ್ತದೆ. ಕಿತ್ತಿರುವ ಶೇಂಗಾವನ್ನು ಮನೆಯತ್ತ ಸಾಗಿಸುವ ಬಗ್ಗೆಯೂ ಸಹ ಯೋಚಿಸುವಂತಾಗಿದೆ’ ಎಂದು ಅವರು ಹೇಳುತ್ತಾರೆ.

‘ನಿರಂತರ ಮಳೆಯಿಂದಾಗಿ ಜಾನುವಾರು ಸಹ ಕೊಟ್ಟಿಗೆಯಲ್ಲೇ ಉಳಿಯುವಂತಾಗಿದೆ. ಶೇಂಗಾ ಸೊಪ್ಪು ಕೊಳೆಯುತ್ತಿದ್ದು, ಮುಂದೆ ಮೇವು ಸಿಗುವುದೂ ಸಂಶಯ ಎಂಬಂತಿದೆ. ಹೆಚ್ಚಿಗೆ ಆದಾಯ ಪಡೆಯುವುದಿರಲಿ, ಖರ್ಚು ಮಾಡಿರುವಷ್ಟು ಹಣ ಬಂದರೆ ಸಾಕು ಎಂಬ ಸ್ಥಿತಿ ರೈತರದ್ದಾಗಿದೆ’ ಎಂದು ಬುರುಡೇಕಟ್ಟೆಯ ರೈತ ಲವ ಹೇಳಿದ್ದಾರೆ.

ಬುರುಡೇಕಟ್ಟೆ, ಬಳ್ಳೇಕೆರೆ, ಆನಿವಾಳ, ರಂಗೈನೂರು, ಜಮ್ಮಾಪುರ, ಚಿಕ್ಕಮ್ಮನಹಳ್ಳಿ, ಮಲ್ಲಪ್ಪನಹಳ್ಳಿ, ಚಿಕ್ಕಯಗಟಿ ಸೇರಿದಂತೆ ಹಲವೆಡೆ ಶೇಂಗಾ ಕಾಯಿಯನ್ನೇ ಬಿಟ್ಟಿಲ್ಲ. ಹೀಗಾದರೇ ಪರಿಸ್ಥಿತಿ ಏನು ಎಂಬ ಚಿಂತೆ ರೈತರಿಗೆ ಕಾಡತೊಡಗಿದೆ. ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ನೀಡಿದಲ್ಲಿ ಹಿಂಗಾರು ಹಂಗಾಮಿನ ಬೆಳೆ ಬೆಳೆಯಲು ಅನುಕೂಲ ವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

ಜಮೀನುಗಳಲ್ಲಿ ನೀರು ನಿಂತು, ಶೇಂಗಾ ಬೆಳೆ ಹಾನಿಗೊಳಗಾಗಿರುವ ಪ್ರದೇಶಗಳ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರೈತರು ಆಯಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.

ಈಶ, ಸಹಾಯಕ ಕೃಷಿ ನಿರ್ದೇಶಕ

ಈ ಬಾರಿ ರೈತರ ಉತ್ತಮ ಇಳುವರಿಯ ಕನಸು ಕನಸಾಗಿಯೇ ಉಳಿದಿದೆ. ಮಳೆಯಿಂದಾಗಿ ಹಾನಿಯಾಗಿರುವ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕು.

ಹರೀಶ್‌, ಮಳಲಿ ಗ್ರಾಮದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT