ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಜಮೀನುಗಳಲ್ಲಿ ಹೆಚ್ಚಿದ ಜೋಪು; ಬೆಳೆಗಳು ಜಲಾವೃತ, ಸಂಕಷ್ಟದಲ್ಲಿ ರೈತರು

Last Updated 15 ನವೆಂಬರ್ 2021, 7:09 IST
ಅಕ್ಷರ ಗಾತ್ರ

ಲಕ್ಕಿಹಳ್ಳಿ (ಹೊಸದುರ್ಗ): ತಾಲ್ಲೂಕಿನ ಮಾಡದಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ನಸುಕಿನವರೆಗೂ ಹದ ಮಳೆಯಾಗಿದೆ.

ಹೋಬಳಿ ವ್ಯಾಪ್ತಿಯ ಲಕ್ಕಿಹಳ್ಳಿ, ಮಾಡದಕೆರೆ, ಬಂಟನಗವಿ, ಬನ್ಸೀಹಳ್ಳಿ, ನರಸೀಪುರ, ತಣಿಗೇಕಲ್ಲು, ಕಂಠಾಪುರ, ಜಾನಕಲ್ಲು ಸೇರಿ ಹಲವು ಗ್ರಾಮಗಳಲ್ಲಿ ಭಾನುವಾರವೂ ಬೆಳಿಗ್ಗೆಯಿಂದ ಸಂಜೆಯವರೆಗೂ ಆಗಾಗ ಸಾಧಾರಣ ಮಳೆ ಸುರಿಯಿತು. ಗಂಗೆಹಳ್ಳ, ಬಿಳೆಮರಡಿ, ಗೋಗಟ್ಟೆ, ಗುಂಡಿಹಳ್ಳ, ಹಿರೇಹಳ್ಳಗಳು ಹರಿಯುತ್ತಿವೆ. ಈ ಭಾಗದಲ್ಲಿ ಬರುವ ಬಹುತೇಕ ಕೆರೆಕಟ್ಟೆ, ಬ್ಯಾರೇಜ್‌, ಚೆಕ್‌ಡ್ಯಾಂ, ಕೃಷಿಹೊಂಡಗಳು ಭರ್ತಿಯಾಗಿವೆ.

ನಾಲ್ಕು ದಿನದಿಂದ ಮೋಡಕವಿದ ವಾತಾವರಣದೊಂದಿಗೆ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆ ಬರುತ್ತಿರುವುದರಿಂದ ಹಲವೆಡೆ ಜಮೀನುಗಳಲ್ಲಿ ತೇವಾಂಶ ಹೆಚ್ಚಾಗಿದೆ. ದೇವರಗುಡ್ಡ, ಹಾಲುರಾಮೇಶ್ವರ ಗುಡ್ಡ, ದುಗ್ಗಾವರ ಬೆಟ್ಟ, ಲಕ್ಕಿಹಳ್ಳಿ ಅಂದ್‌ಕಲ್ಲು ಗುಡ್ಡದಿಂದ ಸಾಕಷ್ಟು ನೀರು ನಿರಂತರವಾಗಿ ಹರಿಯುತ್ತಿದೆ. ಇದರಿಂದ ಜಮೀನುಗಳಲ್ಲಿ ಜೋಪು ಹೆಚ್ಚಾಗಿದೆ. ಹಲವು ರೈತರು ಜಮೀನುಗಳಿಗೆ ಕಾಲಿಡಲು ಆಗುತ್ತಿಲ್ಲ.

ಅಂದ್‌ಕಲ್ಲು ಗುಡ್ಡದಿಂದ ಹರಿಯುವ ನೀರು ಜಮೀನುಗಳಿಗೆ ನುಗ್ಗಬಾರದು ಎಂದು ಹಲವು ರೈತರು ಬದುಗಳನ್ನು ಹಾಕಿಸಿದ್ದರು. ಆದರೆ, ಜೋಪುನೀರು ಹೆಚ್ಚಾಗಿದ್ದರಿಂದ ಕೆಲವೆಡೆ ಬದುಗಳು ಒಡೆದಿದ್ದು, ಜಮೀನಿಗೆ ನೀರು ನುಗ್ಗುತ್ತಿದೆ. ಇದರಿಂದ ರಾಗಿ, ನವಣೆ, ಸಾಮೆ, ಹತ್ತಿ, ಮೆಕ್ಕೆಜೋಳ, ಅಡಿಕೆ, ತೆಂಗು ಸೇರಿ ಇನ್ನಿತರ ಬೆಳೆಗಳು ಜಲಾವೃತಗೊಂಡಿವೆ. ಕೊಯ್ಲಿಗೆ ಬಂದಿರುವ ರಾಗಿ, ನವಣೆ, ಮೆಕ್ಕೆಜೋಳ, ಹತ್ತಿ ಕಟಾವು ಮಾಡಿಕೊಳ್ಳಲು ಮಳೆ ಬಿಡುವು ಕೊಡದಿರುವುದರಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಒಂದು ತಿಂಗಳಿನಿಂದ ಜಮೀನಿನಲ್ಲಿ ಸಾಕಷ್ಟು ನೀರು ನಿಂತಿರುವುದರಿಂದ ಚಿಕ್ಕ ಅಡಿಕೆ ಗಿಡಗಳು ಕೊಳೆಯುತ್ತಿವೆ. ಕೊಳವೆಬಾವಿ ಕೊರೆಸಿದ್ದು, ಹೊಸಮಣ್ಣು ಹಾಗೂ ಗೊಬ್ಬರ ಏರಿಸಿದ್ದು ಸೇರಿ ಅಡಿಕೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೆವು. ಆದರೆ, ಅಧಿಕ ಮಳೆಯಿಂದ ತೇವಾಂಶ ಹೆಚ್ಚಾಗಿದೆ. ಗುಡ್ಡದಿಂದ ಹರಿದು ಬರುವ ನೀರು ಜಮೀನಿನಲ್ಲಿ ನಿಂತಿದ್ದು, ನಾಟಿ ಮಾಡಿದ್ದ ಅಡಿಕೆ ಸಸಿಗಳು ಕೊಳೆಯುತ್ತಿದೆ’ ಎಂದುಲಕ್ಕಿಹಳ್ಳಿ ರೈತ ರುದ್ರಪ್ಪ ಅಳಲು ತೋಡಿಕೊಂಡರು.

‘ಈ ವರ್ಷ ಯಾವೊಂದು ಬೆಳೆಯಲ್ಲೂ ಆದಾಯ ಕಾಣಲು ಸಾಧ್ಯವಾಗಲಿಲ್ಲ. ಶೇಂಗಾ ಹಾಗೂ ಮೆಕ್ಕೆಜೋಳ ಬೆಳೆಗೆ ಸಕಾಲಕ್ಕೆ ಮಳೆ ಬಾರದಿದ್ದರಿಂದ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಕುಸಿತವಾಯಿತು. ಈರುಳ್ಳಿಗೆ ತೇವಾಂಶದಿಂದ ರೋಗ ಬಂತು. ಒಮ್ಮೆ ಅನಾವೃಷ್ಟಿ, ಮತ್ತೊಮ್ಮೆ ಅತಿವೃಷ್ಟಿ. ಬೆಳೆಗೆ ಮಾಡಿರುವ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆ ಕಾಡುತ್ತಿದೆ’ ಅವರು ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT