ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹ | ಕೋಟೆನಾಡು ತಲುಪಿದ ಸ್ವಾಮೀಜಿ ಪಾದಯಾತ್ರೆ

ಪರಿಶಿಷ್ಟ ಪಂಗಡದ ಮೀಸಲಾತಿ
Last Updated 12 ಜೂನ್ 2019, 14:23 IST
ಅಕ್ಷರ ಗಾತ್ರ

ಚಿತ್ರದುರ್ಗ: ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಹಾಗೂ ಆರ್ಥಿಕ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆ ಬುಧವಾರ ಕೋಟೆನಾಡು ಚಿತ್ರದುರ್ಗ ಪ್ರವೇಶಿಸಿತು.

ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಜೂನ್ 9 ರಂದು ಹರಿಹರದ ರಾಜನಹಳ್ಳಿಯಿಂದ ಆರಂಭವಾದ ಬೃಹತ್ ಪಾದಯಾತ್ರೆ ಭರಮಸಾಗರ ಮೂಲಕ ಚಿತ್ರದುರ್ಗ ತಲುಪಿತು.

ನಕಲಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳು ಮತ್ತು ಪಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆ ರಾಜಧಾನಿವರೆಗೂ ನಡೆಯಲಿದೆ. ಬೃಹತ್ ಪಾದಯಾತ್ರೆಯಲ್ಲಿ ನಾಯಕ ಸಮುದಾಯದ ನೂರಾರು ಜನ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಪ್ರತಿ ದಿನ ಸರಾಸರಿ 30 ಕಿ.ಮೀ ಸಾಗುವ ಈ ಪಾದಯಾತ್ರೆ ಚಿತ್ರದುರ್ಗ, ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜೂನ್ 24 ರಂದು ಬೆಂಗಳೂರು ತಲುಪಲಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪಾದಯಾತ್ರೆಗೆ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಭವ್ಯ ಸ್ವಾಗತ ಕೋರಲಾಗುತ್ತಿದೆ. ಪಾದಯಾತ್ರೆಯಲ್ಲಿ ಸಾಗುವ ಸಮುದಾಯದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಹೆದ್ದಾರಿ ತಡೆದು ಪ್ರತಿಭಟನೆ:ಸಿರಿಗೆರೆ ವೃತ್ತದ ಸಮೀಪ ಸಮಾವೇಶ ನಡೆಸಿ ಕೆಲ ಕಾಲ ಪುಣೆ–ಬೆಂಗಳೂರು ಹೆದ್ದಾರಿ ತಡೆ ನಡೆಸಲಾಯಿತು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸಿರಿಗೆರೆ ವೃತ್ತದ ಸಮೀಪದ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ‘ಪರಿಶಿಷ್ಟ ಪಂಗಡದವರು ಮೀಸಲಾತಿ ಹೆಚ್ಚಳ ಮಾಡುವಂತೆ ಅನೇಕ ಬಾರಿ ಒತ್ತಾಯಿಸಿದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ನೋವಿನ ಸಂಗತಿ’ ಎಂದರು.

‘ರಾಜ್ಯದಲ್ಲಿ ನಾಯಕ ಸಮಾಜ ಹೆಚ್ಚಿನ ಸಂಖ್ಯೆಯಲ್ಲಿದೆ. ದಶಕಗಳಿಂದ ನಾಯಕ ಸಮಾಜಕ್ಕೆ ಅನ್ಯಾಯವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಲೇ ಪರಿಶಿಷ್ಟ ಪಂಗಡಕ್ಕೆ ಶೇ 7.5 ಮೀಸಲಾತಿ ಘೋಷಣೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಾಯಕ ಸಮಾಜದವರಿಗೆ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಆಗಿರುವ ಅನಾನುಕೂಲವನ್ನು ಸರಿಪಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.

ರಾಜೀನಾಮೆಗೆ ಸಿದ್ಧ:ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ‘ಪಾದಯಾತ್ರೆ ಬೆಂಗಳೂರು ತಲುಪುವದರೊಳಗೆ ಮೀಸಲಾತಿ ಘೋಷಣೆ ಆಗಬೇಕು. ನಾಯಕ ಸಮುದಾಯದವರು ಸ್ವಾಭಿಮಾನಿಗಳಾಗಿದ್ದು, ನ್ಯಾಯಯುತ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಿ ಸರ್ಕಾರ ಗೌರವ ಉಳಿಸಿಕೊಳ್ಳಬೇಕು’ ಎಂದರು.

‘ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಜಗಳೂರು ಕ್ಷೇತ್ರದಿಂದ ಆಯ್ಕೆಯಾಗಿದ್ದೇನೆ. ಸಮಾಜದ ಹಿತಕ್ಕಾಗಿ ರಾಜೀನಾಮೆ ನೀಡಲು ಸಿದ್ದನಾಗಿದ್ದೇನೆ. ನಾಯಕ ಸಮಾಜದಿಂದ ಆಯ್ಕೆಯಾದ ಎಲ್ಲ 17 ಶಾಸಕರು ಕೂಡ ಶ್ರೀಗಳ ಆದೇಶಕ್ಕೆ ಬದ್ಧರಾಗಿ ನಡೆಯುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT