ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ ಗಾಂಧಿ ಅಧಿಕಾರ ವಿಕೇಂದ್ರೀಕರಣದ ಹರಿಕಾರ: ಎಚ್‌.ಆಂಜನೇಯ

ಪಕ್ಷ ಸಂಘಟನೆಗೆ ಸಲಹೆ
Last Updated 21 ಮೇ 2020, 13:11 IST
ಅಕ್ಷರ ಗಾತ್ರ

ಚಿತ್ರದುರ್ಗ: ಹಣ ಮತ್ತು ತೋಳ್ಬಲ ಇದ್ದವರು ಮಾತ್ರ ಅಧಿಕಾರ ಹಿಡಿಯುತ್ತಿರುವುದನ್ನು ಗಮನಿಸಿದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರು ಅಧಿಕಾರ ವಿಕೇಂದ್ರೀಕರಣಕ್ಕಾಗಿ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದರು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಹೇಳಿದರು.

ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ರಾಜೀವ್‌ ಗಾಂಧಿ ಪುಣ್ಯಸ್ಮರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾಜದ ಕಟ್ಟಕಡೆಯ ವ್ಯಕ್ತಿಯೊಬ್ಬ ಉನ್ನತ ಅಧಿಕಾರಕ್ಕೆ ಏರುವುದು ಗಗನಕುಸುಮವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಸುಧಾರಣೆ ತರುವ ಉದ್ದೇಶದಿಂದ ರಾಜೀವ್‌ ಗಾಂಧಿ ಅವರು ಪಂಚಾಯತ್‌ ರಾಜ್‌ ವ್ಯವಸ್ಥೆ ರೂಪಿಸಿದರು. ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದರು. ಯುವ ಸಮೂಹಕ್ಕೆ ಮತದಾನದ ಹಕ್ಕು ನೀಡಿ, 21ನೇ ಶತಮಾನಕ್ಕೆ ದೇಶವನ್ನು ಸಜ್ಜುಗೊಳಿಸಿದರು’ ಎಂದು ಗುಣಗಾನ ಮಾಡಿದರು.

‘ದೇಶದಲ್ಲಿ ಏಕತೆ ಹಾಗೂ ಸಾಮರಸ್ಯ ಮೂಡಿಸಲು ರಾಜೀವ್‌ ಗಾಂಧಿ ಪ್ರಯತ್ನಿಸಿದರು. ಈ ಧ್ಯೇಯವೇ ಅವರ ಪ್ರಾಣಕ್ಕೆ ಮುಳುವಾಯಿತು. ರಾಜೀವ್‌ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. ರಫೆಲ್‌ ಹಗರಣದಂತಹ ಕಳಂಕವನ್ನೇ ಪ್ರಚಾರವೆಂದು ಭಾವಿಸಿದ್ದಾರೆ. ಬಿಜೆಪಿಯ ಈ ದುರಾಡಳಿತವನ್ನು ಕೊನೆಗೊಳಿಸಬೇಕಿದೆ’ ಎಂದರು.

‘ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿರುವುದನ್ನೇ ಹಿನ್ನಡೆ ಎಂದು ಭಾವಿಸಬಾರದು. ನಿರಾಶರಾಗದೆ ಪ್ರಾಮಾಣಿಕತೆಯಿಂದ ಪಕ್ಷ ಕಟ್ಟಿದರೆ ಅಧಿಕಾರ ಹುಡುಕಿಕೊಂಡು ಬರುತ್ತದೆ. ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ‘ಲಾಕ್‌ಡೌನ್‌ ಕಾರಣಕ್ಕೆ ದೇಶದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅನ್ನ, ಆಹಾರಕ್ಕೆ ಬಡವರು ಪರದಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಣೆ ಮಾಡಿದ ಪ್ಯಾಕೇಜ್‌ಗಳಿಂದ ಯಾವುದೇ ಪ್ರಯೋಜನವಿಲ್ಲ. ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ಯಾವುದೇ ಕೊಡುಗೆಗಳಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಧಿಕಾರದಲ್ಲಿರುವವರಿಗೆ ಸಾಮಾನ್ಯ ಜನರ ನೋವು ತಟ್ಟುತ್ತಿಲ್ಲ. ಇಂತಹ ಸಂದರ್ಭದಲ್ಲಿ ರಾಜೀವ್‌ಗಾಂಧಿ ಇರಬೇಕಿತ್ತು’ ಎಂದು ನೆನಪಿಸಿಕೊಂಡರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಾಜಿ ಅಧ್ಯಕ್ಷ ಫಾತ್ಯರಾಜನ್, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಹಿರಿಯ ಉಪಾಧ್ಯಕ್ಷರಾದ ಆರ್.ಕೆ.ನಾಯ್ಡು, ಶಬ್ಬೀರ್‍ ಅಹಮದ್, ಅಜ್ಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಸಂಪತ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT