ಗುರುವಾರ , ಮೇ 13, 2021
38 °C
ಕೋವಿಡ್ ಆತಂಕದಿಂದ ಭಕ್ತರ ಸಂಖ್ಯೆ ಕ್ಷೀಣ * ದೇಗುಲಗಳಲ್ಲಿ ಶಾಸ್ತ್ರೋಕ್ತವಾಗಿ ನಡೆದ ಪೂಜೆ

ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ರಾಮನವಮಿ ಸರಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಅದ್ದೂರಿಯಾಗಿ ನಡೆಯುತ್ತಿದ್ದ ರಾಮನವಮಿ ಉತ್ಸವವೂ ಕೋವಿಡ್‌ ಕಾರಣಕ್ಕೆ ಜಿಲ್ಲೆಯಲ್ಲಿ ಎರಡನೇ ವರ್ಷವೂ ಸರಳವಾಗಿ ನೆರವೇರಿತು.

ಕೋವಿಡ್ ಎರಡನೇ ಅಲೆಯಿಂದಾಗಿ ಶ್ರೀರಾಮ, ಆಂಜನೇಯ ದೇಗುಲಗಳಲ್ಲೂ ಬುಧವಾರ ಸಡಗರ, ಸಂಭ್ರಮ ಕಾಣಲಿಲ್ಲ. ಭಕ್ತರ ಸಂಖ್ಯೆಯೂ ವಿರಳವಾಗಿತ್ತು. ಆದರೆ, ರಾಮಭಕ್ತರ ಮನೆ–ಮನಗಳಲ್ಲಿ ರಾಮಜಪ ಎಂದಿನಂತೆಯೇ ನಡೆಯಿತು.

ಶ್ರೀರಾಮ, ಆಂಜನೇಯಸ್ವಾಮಿ ದೇವರ ಮೂರ್ತಿಗಳಿಗೆ ಹಲವು ದೇಗುಲಗಳಲ್ಲಿ ಪುಷ್ಪಾಲಂಕಾರ ಸೇವೆ ನೆರವೇರಿತು. ಆದರೆ, ಹಿಂದಿನಂತೆ ವಿಶೇಷ ಅಲಂಕಾರ ಇರಲಿಲ್ಲ. ಅರ್ಚಕರು ದೇಗುಲಗಳಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ಕೆಲ ಭಕ್ತರು ಕುಟುಂಬ ಸಮೇತ ದೇಗುಲಕ್ಕೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಕೆಲ ದೇಗುಲಗಳಲ್ಲಿ ಮಾತ್ರ ಪ್ರಸಾದವಾಗಿ ಪಾನಕ, ಮಜ್ಜಿಗೆ ವಿತರಿಸಲಾಯಿತು.

ಎಲ್ಲಿಯೂ ಅದ್ದೂರಿ ಮೆರವಣಿಗೆ ನಡೆಯಲಿಲ್ಲ. ಕೆಲವೆಡೆ ಶಾಸ್ತ್ರಕ್ಕಾಗಿ ನಡೆದರೂ ದೇಗುಲ ಸಮಿತಿ ಒಳಗೊಂಡು ಬೆರಳೆಣಿಕೆಯಷ್ಟು ಜನ ಮಾತ್ರ ಸೇರಿದ್ದರು. ಇಲ್ಲಿನ ತಗ್ಗಿನ ಆಂಜನೇಯಸ್ವಾಮಿ ದೇಗುಲದ ವತಿಯಿಂದ ಸರಳ ಮೆರವಣಿಗೆ ನೆರವೇರಿತು.

ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಉತ್ಸವದ ಅಂಗವಾಗಿ ಶ್ರೀರಾಮನ ಭಾವಚಿತ್ರ ಹಾಗೂ ಆಂಜನೇಯಸ್ವಾಮಿ ಉತ್ಸವಮೂರ್ತಿಗೆ ಅರ್ಚಕರಿಂದ ಸರಳವಾಗಿ ಪೂಜೆ ನೆರವೇರಿತು. ನೆಹರೂ ನಗರದ ಒಂದನೇ ತಿರುವಿನಲ್ಲಿರುವ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ ಅರ್ಚಕರು ರಾಮದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಹೊಳಲ್ಕೆರೆ ರಸ್ತೆಯ ಬರಗೇರಮ್ಮ‌ ದೇವಿ ದೇಗುಲದ ಆವರಣದಲ್ಲಿರುವ ಬರಗೇರಿ ಆಂಜನೇಯಸ್ವಾಮಿಗೆ ರಾಮನವಮಿ ಅಂಗವಾಗಿ ಅರ್ಚಕರು ಸರಳವಾಗಿ ಅಲಂಕರಿಸಿ ಪೂಜೆ ಸಲ್ಲಿಸಿದ್ದರು. ರಂಗಯ್ಯನಬಾಗಿಲ ಬಳಿಯ ರಾಮಮಂದಿರ, ಆಂಜನೇಯಸ್ವಾಮಿ, ಗಣಪತಿ ದೇಗುಲ, ತ್ಯಾಗರಾಜ ಬೀದಿಯ ರಾಮಮಂದಿರ, ಆಂಜನೇಯ ದೇಗುಲ, ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ, ಮದಕರಿನಾಯಕ ವೃತ್ತದಲ್ಲಿರುವ ರಕ್ಷಾ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಲಾಯಿತು.

ಭೋವಿ ಗುರುಪೀಠದ ಸಿದ್ದರಾಮೇಶ್ವರ ಮಠದ ಆವರಣದಲ್ಲಿರುವ ರಾಮಮಂದಿರ, ಬೆಟ್ಟದ ಆಂಜನೇಯಸ್ವಾಮಿ, ತಮಟಕಲ್ಲಿನ ಆಂಜನೇಯಸ್ವಾಮಿ, ವಾಸವಿ ವಿದ್ಯಾಸಂಸ್ಥೆ ಹತ್ತಿರವಿರುವ ರಾಮಮಂದಿರ, ಆಂಜನೇಯಸ್ವಾಮಿ, ಆನೆ ಬಾಗಿಲು ಬಳಿಯ ಆಂಜನೇಯಸ್ವಾಮಿ ಸೇರಿ ನಗರದ ಹಲವು ದೇಗುಲಗಳಲ್ಲಿ ಅರ್ಚಕರಿಂದ ಪೂಜೆ ಜರುಗಿತು.

ಗ್ರಾಮೀಣ ಪ್ರದೇಶದಲ್ಲಿಯೂ ಸರಳವಾಗಿ ರಾಮನವಮಿಯನ್ನು ಆಚರಿಸಲಾಯಿತು. ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಕೆಲವೆಡೆ ರಾಮನ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ, ಅತ್ಯಂತ ಸರಳವಾಗಿ ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು