ಸೋಮವಾರ, ನವೆಂಬರ್ 29, 2021
21 °C
ಲೋಕದೊಳಲು ಕೆರೆಯಲ್ಲಿ ಅಲಂಕೃತ ಮಂಟಪದಲ್ಲಿ ದೇವರ ಉತ್ಸವ, ದೊಡ್ಡೆಡೆ ಸೇವೆ

ಹೊಳಲ್ಕೆರೆ: ರಂಗನಾಥಸ್ವಾಮಿ ತೆಪ್ಪೋತ್ಸವ ನಾಳೆ

ಸಾಂತೇನಹಳ್ಳಿ ಸಂದೇಶ್ ಗೌಡ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ: ತಾಲ್ಲೂಕಿನ ಐತಿಹಾಸಿಕ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ತೆಪ್ಪೋತ್ಸವ ನ.27ರಂದು ನಡೆಯಲಿದೆ.

ಗ್ರಾಮಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದ್ದು, ನಾಡಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ತೆಪ್ಪೋತ್ಸವಕ್ಕೆ ವಿಶೇಷ ಮಂಟಪ ನಿರ್ಮಿಸಲಾಗಿದ್ದು, ಅಲಂಕೃತ ಮಂಟಪದಲ್ಲಿ ದೇವರ ಮೂರ್ತಿಯ ಉತ್ಸವ ನಡೆಯಲಿದೆ.

ಈಚೆಗೆ ಸುರಿದ ಮಳೆಯಿಂದ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ಬೆಳಿಗ್ಗೆ ಗಂಗಾಪೂಜೆ, ಬಾಗಿನ ಸಮರ್ಪಣೆ ನಡೆಯಲಿದೆ. ಕೆರೆ ಏರಿಯ ಮೇಲಿರುವ ಸಿಡಿಲೇಶ್ವರ ಸ್ವಾಮಿಗೆ ರುದ್ರಾಭಿಷೇಕ, ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ ನಡೆದ ನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2ರಿಂದ ರಾತ್ರಿ 11ರ ವರೆಗೆ ತೆಪ್ಪೋತ್ಸವ ನಡೆಯಲಿದೆ.

ಬೆಳಿಗ್ಗೆ 11ಕ್ಕೆ ಧಾರ್ಮಿಕ ಸಮಾರಂಭ ನಡೆಯಲಿದ್ದು, ಶಾಸಕ ಎಂ. ಚಂದ್ರಪ್ಪ, ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕ ಎ.ವಿ. ಉಮಾಪತಿ, ಎಲ್.ಬಿ. ರಾಜಶೇಖರ್, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜಗನ್ನಾಥ ಸಾಗರ್, ಕಂದಾಯ ಇಲಾಖೆಯ ನಿವೃತ್ತ ಪ್ರಾದೇಶಿಕ ಆಯುಕ್ತ ಜಿ.ಎಂ. ಧನಂಜಯ, ನಿವೃತ್ತ ಡಿಐಜಿಪಿ ಡಾ.ಜಿ.ರಮೇಶ್ ಸೇರಿ ಹಲವು ಗಣ್ಯರು ಭಾಗವಹಿಸುವರು.

ಗ್ರಾಮದಲ್ಲಿ ದೊಡ್ಡಹೊಟ್ಟೆ ರಂಗನಾಥ ಸ್ವಾಮಿಯ ದೇವಾಲಯ ಇದ್ದು, ಬೆಟ್ಟದ ಮೇಲೆ ಉದ್ಭವ ಮೂರ್ತಿ ಇದೆ. ಮಳೆಗಾಲದಲ್ಲಿ ಹಸಿರು ಹೊದ್ದು ಮಲೆನಾಡ ಪ್ರಕೃತಿ ಸೌಂದರ್ಯ ಹೊಂದಿರುವ ಈ ಬೆಟ್ಟ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿದೆ. ಬೆಟ್ಟದ ಮೇಲೆ ಕಲ್ಯಾಣಿ, ಮಂಟಪಗಳು, ಬಿಲ್ಲುದೋಣಿ, ತೂಗುವ ಗುಂಡು, ಮಾಸ್ತಿಗಲ್ಲು, ವೀರಗಲ್ಲುಗಳಿದ್ದು, ಶನಿವಾರ ಮತ್ತು ಭಾನುವಾರ ಭಕ್ತರಿಂದ ತುಂಬಿರುತ್ತದೆ. ದೇವರಿಗೆ ರಾಜ್ಯದೆಲ್ಲೆಡೆ ಭಕ್ತರಿದ್ದು, ಶ್ರಾವಣ ಮಾಸ ಹಾಗೂ ಜಾತ್ರೆಯ ಸಂದರ್ಭದಲ್ಲಿ ಹೆಚ್ಚು ಜನ ಭೇಟಿ ನೀಡುತ್ತಾರೆ.

ನ.28ರಂದು ಬೆಳಿಗ್ಗೆ 9ಕ್ಕೆ ದೊಡ್ಡೆಡೆ ಸೇವೆ ನಡೆಯಲಿದೆ ಎಂದು ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

ಟ್ರಸ್ಟ್ ವಾರ್ಷಿಕೋತ್ಸವ

ಬೆಟ್ಡದ ಮೇಲಿರುವ ದೊಡ್ಡಹೊಟ್ಟೆ ರಂಗನಾಥಸ್ವಾಮಿಯ ದೇವಾಲಯ 2019ರಲ್ಲಿ ಹೆಚ್ಚು ಮಳೆ ಸುರಿದಿದ್ದರಿಂದ ಕುಸಿದು ಬಿದ್ದಿತ್ತು. ದೇವಾಲಯವನ್ನು ಪುನರ್ನಿರ್ಮಾಣ ಮಾಡುವ ಉದ್ದೇಶದಿಂದ ಸೇವಾ ಟ್ರಸ್ಟ್ ರಚನೆ ಮಾಡಿದ್ದು, ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ವಾರ್ಷಿಕೋತ್ಸವ ನಡೆಯುತ್ತದೆ.

‘ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಏಳು ಊರಿನ ಒಡೆಯ ಎಂದೇ ಹೆಸರಾಗಿದ್ದು, ಲೋಕದೊಳಲು ಸೇರಿ ಬೊಮ್ಮನ ಕಟ್ಟೆ, ತಿರುಮಲಾಪುರ, ಸಾಂತೇನಹಳ್ಳಿ, ವಿಶ್ವನಾಥನ ಹಳ್ಳಿ, ಆವಿನಹಟ್ಟಿ, ಇಡೇಹಳ್ಳಿ, ಗುಂಡೇರಿ ಗ್ರಾಮದ ಮುಖಂಡರನ್ನು ಟ್ರಸ್ಟ್ ಒಳಗೊಂಡಿದೆ. ಒಂದು ವರ್ಷದಲ್ಲಿ ದೇವಾಲಯ ನಿರ್ಮಾಣಕ್ಕೆ ಭಕ್ತರಿಂದ 25 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಲಾಗಿದೆ’ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ಎಲ್.ಆರ್.ತಿಮ್ಮೇಶ್, ಗೌರವಾಧ್ಯಕ್ಷ ವೀರಭದ್ರಪ್ಪ, ಉಪಾಧ್ಯಕ್ಷ ಎಲ್.ಆರ್.ರಂಗಸ್ವಾಮಿ, ಕಾರ್ಯದರ್ಶಿ ಗವಿರಂಗಪ್ಪ ಹಾಗೂ ಖಜಾಂಚಿ ಷಡಾಕ್ಷರಪ್ಪ.

ದೇವಾಲಯ ನಿರ್ಮಾಣಕ್ಕೆ ದಾನಿಗಳು ಧನಸಹಾಯ ಮಾಡಬೇಕು ಎಂದು ಅವರು ಕೋರಿದ್ದಾರೆ.

***

ಬೆಟ್ಟದ ಮೇಲಿನ ದೇವಾಲಯದ ಮೆಟ್ಟಿಲುಗಳು ಕುಸಿದು ಬಿದ್ದಿದ್ದು, ₹3 ಕೋಟಿ ವೆಚ್ಚದಲ್ಲಿ ಹೊಸ ಮೆಟ್ಟಿಲು ನಿರ್ಮಿಸಲಾಗುತ್ತಿದೆ.

ಎಂ.ಚಂದ್ರಪ್ಪ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು