ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.28, 29ಕ್ಕೆ ‘ಟಿಪ್ಪು ನಿಜಕನಸುಗಳು’ ನಾಟಕ: ಅಡ್ಡಂಡ ಸಿ.ಕಾರ್ಯಪ್ಪ

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾಹಿತಿ
Last Updated 19 ಡಿಸೆಂಬರ್ 2022, 11:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಟಿಪ್ಪು ಸುಲ್ತಾನ್‌ ಇತಿಹಾಸಕ್ಕೆ ಸಂಬಂಧಿಸಿದಂತೆ ರಂಗಾಯಣದ ಕಲಾವಿದರು ರೂಪಿಸಿದ ವಿಶೇಷ ರಂಗಪ್ರಯೋಗ ‘ಟಿಪ್ಪು ನಿಜಕನಸುಗಳು’ ನಾಟಕ ಡಿ.28 ಮತ್ತು 29ರಂದು ನಗರದ ತರಾಸು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ.

ಮೂರುವರೆ ಗಂಟೆಯ ಈ ಪ್ರದರ್ಶನ ಸಂಜೆ 6ಕ್ಕೆ ಆರಂಭವಾಗಲಿದೆ. ಮಧ್ಯೆ ಹತ್ತು ನಿಮಿಷ ವಿರಾಮ ಇರಲಿದೆ. ₹ 100 ಟಿಕೆಟ್‌ ನಿಗದಿಪಡಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಹಾಗೂ www.rangayana.org ಜಾಲತಾಣದಲ್ಲಿ ಟಿಕೆಟ್‌ ಲಭ್ಯ ಇವೆ ಎಂದು ನಾಟಕವನ್ನು ರಚಿಸಿ ನಿರ್ದೇಶಿಸಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ಈ ವಿಶೇಷ ರಂಗಪ್ರಯೋಗ ರಾಜ್ಯದ ಎಲ್ಲೆಡೆ ಪ್ರದರ್ಶನಗೊಳ್ಳಬೇಕು ಎಂಬ ಯೋಜನೆಯನ್ನು ರಂಗಾಯಣ ರೂಪಿಸಿದೆ. ರಂಗಪಯಣದ ಮೊದಲ ಹೆಜ್ಜೆ ಬೆಂಗಳೂರಿನಿಂದ ಆರಂಭಗೊಂಡಿದೆ. ಡಿ.27ರಂದು ದಾವಣಗೆರೆ, ಡಿ.31, ಜ.1ರಂದು ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ ಸೇರಿ ಹಲವೆಡೆ ಮೊದಲ ಹಂತದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಟಿಕೆಟ್‌ ಖರೀದಿಸಿ ನಾಟಕ ವೀಕ್ಷಿಸಿ’ ಎಂದು ಮನವಿ ಮಾಡಿದರು.

‘ಮೈಸೂರು ಸಂಸ್ಥಾನ ಆಕ್ರಮಿಸಿಕೊಂಡ ಪರ್ಷಿಯನ್‌ ಮೂಲದ ಟಿಪ್ಪು ಬಗೆಗೆ ಅತಿರಂಜಿತ ಚರಿತ್ರೆ ದಾಖಲಾಗಿದೆ. ಭಾರತೀಯ ಸಂಸ್ಕೃತಿಯ ಮೇಲೆ ನಡೆದ ಮುಸ್ಲಿಂ ದೊರೆಗಳ ಆಕ್ರಮಣಕಾರಿ ಕೃತ್ಯಗಳನ್ನು ಅತ್ಯಂತ ಜಾಣತನದಿಂದ ಮುಚ್ಚಿಡಲಾಗಿದೆ. ಇಂತಹ ಇತಿಹಾಸವನ್ನೇ ಪಠ್ಯಗಳಲ್ಲಿ ಬೋಧಿಸಲಾಗಿದೆ. ಟಿಪ್ಪು ಬಗ್ಗೆ ಸತ್ಯದರ್ಶನ ಮಾಡಿಸುವುದು ನಾಟಕದ ಉದ್ದೇಶ’ ಎಂದು ಹೇಳಿದರು.

‘ಟಿಪ್ಪು ಸುಲ್ತಾನ್‌ ಹೊಗಳುವ ಮೂಲಕ ವೋಟ್‌ಬ್ಯಾಂಕ್‌ ರಾಜಕಾರಣ ನಿರ್ಮಾಣಗೊಂಡಿದೆ. ಕನ್ನಡವನ್ನು ಕೊಂದ ಟಿಪ್ಪುವನ್ನು ಕನ್ನಡ ಪ್ರೇಮಿ ಎಂದು ಬಣ್ಣಿಸಿರುವುದು ಅಘಾತಕಾರಿಯಾಗಿದೆ. ಇಂತಹ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ಡೋಂಗಿವಾದವನ್ನು ನಿಷ್ಕ್ರಿಯೆಗೊಳಿಸಿ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವ ದೃಷ್ಟಿಯಿಂದ ಈ ನಾಟಕ ರೂಪಿಸಲಾಗಿದೆ. 15 ದೃಶ್ಯಗಳ ಈ ನಾಟಕ ಮೈಸೂರಿನಲ್ಲಿ 12 ಪ್ರದರ್ಶನ ಕಂಡಿದೆ’ ಎಂದರು.

ಚಂದಮಾವ, ಕಾಗೆ ಗುಬ್ಬಕ್ಕನ ಕಥೆ ಇದಲ್ಲ. ಅಧಿಕೃತ ದಾಖಲೆಗಳನ್ನು ಆಧರಿಸಿ ನಾಟಕ ರಚಿಸಲಾಗಿದೆ. ನಾಟಕದ ಬಗ್ಗೆ ಅಪಸ್ವರ ಎತ್ತುವವರು ರಂಗಪ್ರಯೋಗ ವೀಕ್ಷಿಸಲಿ.
ಅಡ್ಡಂಡ ಸಿ.ಕಾರ್ಯಪ್ಪ,ರಂಗಾಯಣ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT