ಭಾನುವಾರ, ಜುಲೈ 25, 2021
28 °C

ಚಿತ್ರದುರ್ಗ: ಅತ್ಯಾಚಾರ ಸಂತ್ರಸ್ತೆಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತಾಲ್ಲೂಕಿನ ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ಕೊರೊನಾ ಸೋಂಕು ಅಂಟಿರುವುದು ಬೆಂಗಳೂರಿನಲ್ಲಿ ದೃಢಪಟ್ಟಿದೆ. ಸೋಂಕಿತ ಮಹಿಳೆಯ ಸಂಪರ್ಕದಲ್ಲಿದ್ದ ಪೊಲೀಸರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಅತ್ಯಾಚಾರಕ್ಕೀಡಾದ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಅನಾರೋಗ್ಯಕ್ಕೆ ಒಳಗಾಗಿದ್ದರು. ಗರ್ಭಪಾತವಾಗಿ ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಾದ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಕೋವಿಡ್‌ ಇರುವುದು ದೃಢಪಟ್ಟಿದೆ.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪಿಎಸ್‌ಐ ಸೇರಿ 10 ಪೊಲೀಸರು ಸೋಂಕಿತ ಯುವತಿಯ ಪ್ರಾಥಮಿಕ ಸಂಪರ್ಕಿತರು. ಅತ್ಯಾಚಾರ ಸಂತ್ರಸ್ತೆಯ ಆರೋಗ್ಯ ತಪಾಸಣೆ ಮಾಡಿದ ಜಿಲ್ಲಾ ಆಸ್ಪತ್ರೆಯ ವೈದ್ಯರು ಕೂಡ ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲಾಗಿದೆ. ಪೊಲೀಸರನ್ನು ಗೃಹ ಕ್ವಾರಂಟೈನ್‌ಗೆ ಸೂಚನೆ ನೀಡಲಾಗಿದ್ದು, ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಬಿದರಕೆರೆಯ ಪ್ರಸನ್ನ ಎಂಬಾತ ಅತ್ಯಾಚಾರ ಆರೋಪಿ. ಲಾರಿ ಚಾಲಕನಾಗಿರುವ ಈತ ಗುಜರಾತಿನಲ್ಲಿದ್ದಾನೆ. ಲಾಕ್‌ಡೌನ್‌ ಕಾರಣಕ್ಕೆ ಈತನನ್ನು ವಶಕ್ಕೆ ಪಡೆಯಲು ಹಾಗೂ ವಿಚಾರಣೆ ನಡೆಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಈತ ವಿವಾಹಿತನಾಗಿದ್ದು, ಇಬ್ಬರು ಮಕ್ಕಳು ಕೂಡ ಇದ್ದಾರೆ.

20 ವರ್ಷದ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದನು. ಯುವತಿಯ ಬಳಿ ಇದ್ದ ₹ 60 ಸಾವಿರ ಹಣವನ್ನು ಪಡೆದು ವಂಚನೆ ಮಾಡಿದ್ದನು. ಅತ್ಯಾಚಾರಕ್ಕೆ ಒಳಗಾದ ಮಹಿತಿ ತಿಳಿಯುತ್ತಿದ್ದಂತೆ ಖಾಸಗಿ ಆಸ್ಪತ್ರೆಗೆ ಕರೆತಂದು ಗರ್ಭಪಾತ ಮಾಡಿಸಿ ಪರಾರಿಯಾಗಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಭರಮಸಾಗರ ಠಾಣೆಯ ಮೆಟ್ಟಿಲೇರಿದ್ದರು.

ಯುವತಿ ಕುಟುಂಬಕ್ಕೆ ಚಿಕಿತ್ಸೆಗೂ ಹಣವಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ₹ 25 ಸಾವಿರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ₹ 50 ಸಾವಿರ ನೆರವು ನೀಡಿದೆ. ಈ ಪರಿಹಾರ ಹಣದಲ್ಲಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.

‘ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಸುಧಾರಣೆ ಕಾಣಿಸದ ಪರಿಣಾಮ ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಗೆ ಜೂನ್‌ 8ರಂದು ದಾಖಲಿಸಲಾಗಿತ್ತು. ಜೂನ್‌ 10ರಂದು ಸಂತ್ರಸ್ತೆಗೆ ಸೋಂಕು ಇರುವುದು ದೃಢಪಟ್ಟಿದೆ. ಸೋಂಕು ತಗುಲಿದ್ದು ಹೇಗೆ ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು