ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗೇಲಿಗೆ ಒಳಗಾಗಿರುವ ವೈಚಾರಿಕತೆ

ಸಂಸ್ಕೃತಿ ಚಿಂತಕ ರಹಮತ್‌ ತರೀಕೆರೆ ಬೇಸರ
Last Updated 6 ಫೆಬ್ರುವರಿ 2023, 5:26 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರಸ್ತುತ ಭಾರತದಲ್ಲಿ ವೈಚಾರಿಕ, ತಾತ್ವಿಕ, ಸೈದ್ಧಾಂತಿಕ ಭಿನ್ನಮತಗಳು ಛಿದ್ರಗೊಂಡಿದ್ದು, ದುಷ್ಟ ಶಕ್ತಿಗಳ ಏಕೀಕರಣ ನೋಡುತ್ತಿದ್ದೇವೆ. ನಮಗೆ ನಿಜವಾಗಿಯೂ ಬೇಕಿರುವುದು ಧಮ್ಮದ ಮೈತ್ರಿ ಮತ್ತು ಕರುಣೆಯಂತಹ ತತ್ವಗಳ, ಜೀವಪರವಾದ ಶಕ್ತಿಗಳ, ದಮನಿತರ ಪರವಾಗಿ ಆಲೋಚನೆ ಮಾಡುವವರ ಏಕೀಕರಣ ಎಂದು ಸಂಸ್ಕೃತಿ ಚಿಂತಕ ರಹಮತ್‌ ತರೀಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ನವಯಾನ ಬುದ್ಧ ಧಮ್ಮ ಪ್ರಥಮ ವರ್ಷದ ಧಮ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎರಡು, ಮೂರು ವರ್ಷಗಳಲ್ಲಿ ಒಬ್ಬ ವ್ಯಕ್ತಿಯ ಶ್ರೀಮಂತಿಕೆಯನ್ನು ಕಂಡಿದ್ದು, ಈಗ ಆತನ ಕುಸಿತವನ್ನು ಕಾಣುತ್ತಿದ್ದೇವೆ. ಇದು ಬುದ್ಧನ ಧಮ್ಮದ ಭಾರತದ ಕಲ್ಪನೆಯಲ್ಲ’ ಎಂದು ತಿಳಿಸಿದರು.

‘ಬುದ್ಧನ ಪ್ರಬುದ್ಧ ಭಾರತದಲ್ಲಿ ಒಬ್ಬ ಮನುಷ್ಯ ಇದ್ದಕ್ಕಿದ್ದಂತೆ ಶ್ರೀಮಂತನಾಗಲು ಸಾಧ್ಯವೇ ಇಲ್ಲ. ಅವನ ಕುಸಿತ ಇಡೀ ದೇಶದ ಕುಸಿತವಾಗಲೂ ಸಾಧ್ಯವಿಲ್ಲ. ಭಾರತ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಅನ್ನುವುದು ನಮ್ಮ ಆರ್ಥಿಕ ವಿದ್ಯಮಾನಗಳ ನಡೆಯುವ ಷೇರುಪೇಟೆಯಲ್ಲಿ ನೋಡಿದರೆ ತಿಳಿಯುತ್ತದೆ’ ಎಂದರು.

‘ಮ್ಯಾನ್ಮಾರ್‌ ಮತ್ತು ಶ್ರೀ ಲಂಕಾ
ದಲ್ಲಿ ರಾಷ್ಟ್ರೀಯವಾದಿಗಳು ಸರ್ವಾಧಿಕಾರಿಗಳ ಜತೆ ಸೇರಿಕೊಂಡು ಹತ್ಯೆಗಳನ್ನು ಮಾಡಿದರು. ಇದು ಧಮ್ಮದ ಸಮಸ್ಯೆ ಅಲ್ಲ. ಧಮ್ಮವನ್ನು ಅಧಿಕಾರಸ್ಥರು ಬಳಸಿಕೊಳ್ಳುವ ಸಮಸ್ಯೆ. ಒಂದು ನಾಗರಿಕ, ಪ್ರಜ್ಞಾವಂತ ಸಮಾಜದಲ್ಲಿ ಮಾತ್ರ ಧಮ್ಮಕ್ಕೆ ಈ ಬಗೆಯ ಅಪಚಾರ ಆಗುವುದಿಲ್ಲ’ ಎಂದು ತಿಳಿಸಿದರು.

‘ಭಾರತದಲ್ಲಿ ದಮನಿತ ಸಮುದಾಯಗಳ ಕೈಯಲ್ಲಿ ಧಮ್ಮ ಇರುವುದರಿಂದ ಅದನ್ನು ಸದಾ ಜೀವಂತವಾಗಿ ಮುನ್ನಡೆಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಚರಿತ್ರೆ ಎಂದಿಗೂ ನಮ್ಮ ಮುಂದೆ ಇರಬೇಕು. ನಾವು ಸ್ವಲ್ಪ ಹಾದಿ ತಪ್ಪಿದರೂ, ನಮ್ಮ ಕೈಯಲ್ಲಿರುವ ಧಮ್ಮ ಇನ್ನೊಬ್ಬರಿಗೆ ತೊಂದರೆ ಮಾಡುವಂತ ಸಂಗತಿ ಆಗುತ್ತದೆ. ನಾವು ಅದನ್ನು ಜೀವಂತವಾಗಿಡಬೇಕೆಂದರೆ ನಮ್ಮಲ್ಲಿ ಪ್ರಜ್ಞಾಪೂರ್ವಕ ವೈಚಾರಿಕತೆ, ಮಾನವೀಯತೆ ಇರಬೇಕು’ ಎಂದು ಹೇಳಿದರು.

‘ಧ್ಯಾನ, ಯೋಗ ಎಂದು ಕರೆಯುವುದರ ಹಿಂದೆ ಬುದ್ಧ ಇದ್ದಾನೆ. ದೇಶದ ಎಲ್ಲ ಚಳುವಳಿ, ದೊಡ್ಡ ಚಿಂತನೆಗಳ ಹಿಂದೆ ವೈಚಾರಿಕತೆ ಮತ್ತು ಮಾನವೀಯತೆ ಇದೆ ಎಂಬುದನ್ನು ನಾವು ಮರೆಯಬಾರದು. ದುರದೃಷ್ಟವಶಾತ್ ಇವತ್ತು ಭಾರತದಲ್ಲಿ ವೈಚಾರಿಕತೆ ಗೇಲಿಗೆ ಒಳಗಾಗಿದೆ. ವಿಚಾರವಂತರನ್ನು ಕೊಲೆ ಮಾಡಲಾಗುತ್ತಿದೆ. ಇಂತಹ ಕಾಲದಲ್ಲಿ ವೈಚಾರಿಕತೆ, ಮನುಷ್ಯತ್ವ ಬಹಳ ಮುಖ್ಯ’ ಎಂದು ತಿಳಿಸಿದರು.

‘ವೈಚಾರಿಕ ಪರಂಪರೆಯನ್ನು ಕಳೆದುಕೊಂಡ ಸಮಾಜ ಜ್ಞಾನದ ಸಮಾಜ ಆಗಿರಲು ಸಾಧ್ಯವಿಲ್ಲ. ಮಾಧ್ಯಮಗಳು ವೈಚಾರಿಕತೆ ಕೊಲ್ಲುವ ಸಾಧನಗಳಾಗಿವೆ. ನಮ್ಮ ಪರಂಪರಾಗತವಾದ ಜೀವನ ಕ್ರಮದಲ್ಲೇ ಬುದ್ಧ ತತ್ವಗಳಿರಬಹುದು. ನಮ್ಮ ಪರಂಪರೆಯಲ್ಲಿ ಬುದ್ಧನ ತತ್ವ ಯಾವ ರೂಪದಲ್ಲಿದೆ ಎಂಬುದನ್ನು ಹುಡುಕಬೇಕಿದೆ’ ಎಂದರು.

ಚಿಂತಕರಾದ ಪ್ರೊ.ಸಿ.ಕೆ.ಮಹೇಶ್‌, ಕಸವನಹಳ್ಳಿ ಶಿವಣ್ಣ, ಗೌತಮ್‌ ಆವರ್ತಿ, ವಿ.ಬಸವರಾಜ್‌, ಡಿ.ದುರುಗೇಶಪ್ಪ, ಸಿ.ವಿ.ಚಿಕ್ಕಣ್ಣ, ಕೆ.ಕುಮಾರ್‌, ರಾಮು ಗೋಸಾಯಿ, ಆನಂದ್‌ ಕುಮಾರ್‌, ಸಂಜೀವ ಕುಮಾರ್‌ ಪೋತೆ, ಕೆ.ರುದ್ರಪ್ಪ, ಇಮ್ತಿಯಾಜ್‌ ಹುಸೇನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT