ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಕಾಲ್ಮುರು: ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ ಓದುವ ಅಭಿಯಾನ ಜಾರಿ

ಸದೃಢ ಶಿಕ್ಷಣ ನೀಡುವ ಉದ್ದೇಶ, 1-8ನೇ ತರಗತಿಗಳಿಗೆ ಅನ್ವಯ
Last Updated 15 ಜನವರಿ 2022, 7:09 IST
ಅಕ್ಷರ ಗಾತ್ರ

ಮೊಳಕಾಲ್ಮುರು:ವಿದ್ಯಾರ್ಥಿಗಳಿಗೆ ಬೇರುಮಟ್ಟದಲ್ಲಿ ಗುಣಾತ್ಮಕ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಈ ವರ್ಷದಿಂದ ಕೇಂದ್ರ ಸರ್ಕಾರ ನೂತನವಾಗಿ ‘ಓದುವ ಅಭಿಯಾನ’ ಕಾರ್ಯಕ್ರಮ ಜಾರಿ ಮಾಡಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಮಂತ್ರಾಲಯ ಮತ್ತು ರಾಜ್ಯ ಶಿಕ್ಷಣ ಇಲಾಖೆ ವತಿಯಿಂದ ಇದನ್ನು ಜಾರಿ ಮಾಡಿದ್ದು, ಅಂಗನವಾಡಿಯಿಂದ 8 ನೇ ತರಗತಿಯವರೆಗಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗಲಿದೆ. ಜ. 1ರಿಂದ ಕಾರ್ಯಕ್ರಮ ಆರಂಭವಾಗಿದ್ದು, ಏ. 10ಕ್ಕೆ ಮುಕ್ತಾಯವಾಗಲಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಶುಕ್ರವಾರ ‘ಪ್ರಜಾವಾಣಿ’ ಜತೆ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತ ಕೌಶಲಗಳನ್ನು ಹೆಚ್ಚಿಸುವುದಕ್ಕಾಗಿ ಕಾರ್ಯಕ್ರಮ ರೂಪಿತವಾಗಿದೆ. ತರಗತಿವಾರು ವಿಷಯಗಳನ್ನು ಸಿದ್ಧಪಡಿಸಲಾಗಿದೆ. ಮೊದಲಿನ ಪದ್ಧತಿಯನ್ನು ಮಾರ್ಪಾಡು ಮಾಡಿ ನಿಗದಿತ ಅವಧಿಯಲ್ಲಿ ಸೂಚಿತ ವಿಷಯದ ಬಗ್ಗೆ ಕಡ್ಡಾಯ ಶಿಕ್ಷಣ ನೀಡಬೇಕಿರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.

100 ದಿನಗಳನ್ನು 14 ವಾರಗಳಾಗಿ ವಿಂಗಡಿಸಲಾಗಿದೆ. ವಾರವಾರು ಗ್ರಂಥಾಲಯ ಭೇಟಿ, ವರ್ಣಮಾಲ ಪ್ರಪಂಚ, ಕುಟುಂಬ ಕಥೆಗಳು, ಜಾನಪದ ವಿನೋದ, ಮಾತನಾಡುವುದು, ಉಡುಗೆ ಹೇಳುವುದು, ಕವನ ಹೇಳುವುದು, ಕಥೆ ಹೇಳುವುದು, ಸಾಹಿತ್ಯ, ಪಾಕ ವಿಧಾನ ವೀಕ್ಷಿಸುವುದು, ರಂಗಪರಿಕರಗಳ ಸಂಗ್ರಹ, ನಮ್ಮ ನಾಯಕರು, ಮ್ಯಾಜಿಕ್, ಪಾತ್ರಗಳ ಪರಿಚಯ, ಸ್ನೇಹಿತರ ಜತೆ ಓದುವುದು ಸೇರಿದಂತೆ ಹಲವು ಚಟುವಟಿಕೆಗಳನ್ನು ರೂಪಸಿಲಾಗಿದೆ. ತರಗತಿ ವಾರು ಚಟುವಟಿಕೆಗಳು ಭಿನ್ನವಾಗಿದೆ ಎಂದು ಹೇಳಿದರು.

ಶಿಕ್ಷಕರಿಗೆ ಈ ಸಂಬಂಧ ತರಬೇತಿ ನೀಡಲಾಗಿದ್ದು, ಅಗತ್ಯ ಪರಿಕರಗಳನ್ನು ವಿತರಿಸಲಾಗಿದೆ. ವಾರವಾರು ಶೈಕ್ಷಣಿಕ ಚಟುವಟಿಕೆ ನಿಗದಿ ಮಾಡಿರುವುದು, ಮಕ್ಕಳ ಕಲಿಕೆಗೆ ಮತ್ತು ಶಿಕ್ಷಕರ ಶ್ರಮಕ್ಕೆ ಒತ್ತು ನೀಡಲಿದೆ. ಕೋವಿಡ್ ನಂತರ ಶಿಕ್ಷಣ ಕ್ಷೇತ್ರವನ್ನು ಸಕ್ರಿಯವಾಗಿಸಲು ಮತ್ತು ಹೊಸದಾಗಿ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಯೋಜನೆ ಜಾರಿಯಾಗಿದೆ’ ಎಂದು ವಿವರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್. ತಿಪ್ಪೇಸ್ವಾಮಿ ಮಾತನಾಡಿ, ‘ಪ್ರಾಥಮಿಕ ಹಂತದ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಯೋಜನೆ ತುಂಬಾ ಸಹಕಾರಿಯಾಗಿದೆ. ಮಾದರಿಗಳನ್ನು ಬಳಸಿ ಬೋಧನೆ ಮಾಡಲಾಗುತ್ತಿದ್ದು, ಶಿಕ್ಷಕರು ತುಂಬಾ ಉತ್ಸಾಹದಿಂದ ಬೋಧನೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ’ ಎಂದು
ಹೇಳಿದರು.

.....

ಮಗುವಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿದೆ. ವಿವಿಧ ಕೋನಗಳಲ್ಲಿ ನಿಗದಿತ ಸಮಯದಲ್ಲಿ ಶಿಕ್ಷಣ ನೀಡುವುದರಿಂದ ಮಗು ಹೆಚ್ಚು ಅಭಿವೃದ್ಧಿ ಹೊಂದಲಿದೆ.

-ವೆಂಕಟೇಶ್, ಬಿಇಒ, ಮೊಳಕಾಲ್ಮುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT