ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಈಡೇರಿಸಲು ಬದ್ಧ

ಆಮ್ ಅದ್ಮಿ ಪಕ್ಷದ (ಎಎಪಿ) ದಶಮಾನೋತ್ಸವ, ಬಿ.ಇ.ಜಗದೀಶ್‌ ಹೇಳಿಕೆ
Last Updated 26 ನವೆಂಬರ್ 2022, 13:17 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂವಿಧಾನದ ಆಶಯ, ಮಹಾತ್ಮ ಗಾಂಧೀಜಿ ಅವರ ಕನಸನ್ನು ಸಾಕಾರಗೊಳಿಸಿ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ ಉದ್ದೇಶದಿಂದ ಸ್ಥಾಪನೆಗೊಂಡ ಆಮ್‌ ಆದ್ಮಿ ಪಕ್ಷ (ಎಎಪಿ) ದಶಮಾನೋತ್ಸವ ಸಂಭ್ರಮದಲ್ಲಿದೆ. ನಿರೀಕ್ಷೆ ಮೀರಿ ಜನರು ಪಕ್ಷವನ್ನು ಬೆಂಬಲಿಸುತ್ತಿದ್ದಾರೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ.ಜಗದೀಶ್‌ ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ. ಸ್ವಾತಂತ್ರ್ಯ ಸಿಕ್ಕ ಮೂರು ವರ್ಷದಲ್ಲಿ ಸಂವಿಧಾನ ಅನುಷ್ಠಾನಕ್ಕೆ ಬಂದಿದೆ. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಪ್ರಯತ್ನವನ್ನು ಯಾವುದೇ ರಾಜಕೀಯ ಪಕ್ಷ ಮಾಡಿಲ್ಲ. ರಾಷ್ಟ್ರೀಯ ಸಂವಿಧಾನ ದಿನದಂದು ಸ್ಥಾಪನೆಯಾದ ಎಎಪಿ ಈ ಕಾರ್ಯವನ್ನು ಮಾಡಲು ಬದ್ಧವಾಗಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷದ ವರಿಷ್ಠ ಅರವಿಂದ ಕೇಜ್ರೀವಾಲ್‌ ದೂರದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಅಮೆರಿಕ, ಇಂಗ್ಲೆಂಡ್ ಮಾದರಿಯಲ್ಲಿ ರೂಪಿಸುವ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಆಹಾರ, ಶಿಕ್ಷಣ ಹಾಗೂ ಆರೋಗ್ಯ ಸಿಕ್ಕಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ದೇಶದ ಶೇ 80ರಷ್ಟು ಜನರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಮೂಲಸೌಲಭ್ಯವನ್ನು ಸರ್ಕಾರ ಉಚಿತವಾಗಿ ನೀಡಿದರೆ ಮಾತ್ರ ಅವರು ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ. ಶೇ 20ರಷ್ಟು ಇರುವ ಶ್ರೀಮಂತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ರೈತರಿಗೆ ಉಚಿತ ವಿದ್ಯುತ್‌ ನೀಡಲು ಸಾಧ್ಯವಿಲ್ಲ ಎಂಬ ಮೋದಿ ಹೇಳಿಕೆ ಅಸಂಬದ್ಧ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲ ಧರ್ಮದ ಜನರು ಶಾಂತಿಯುತವಾಗಿ ಬದುಕಬೇಕು ಎಂಬುದು ಸಂವಿಧಾನದ ಆಶಯ. ಧಾರ್ಮಿಕ ಆಚರಣೆ ಅವರ ಮನೆಗೆ ಸೀಮಿತ ಆಗಿರಬೇಕು. ಧಾರ್ಮಿಕ ಆಚರಣೆಯಲ್ಲಿ ರಾಜಕೀಯ ಪ್ರವೇಶ ಮಾಡಬಾರದು. ಧರ್ಮದಲ್ಲಿ ರಾಜಕೀಯ ಬೆರೆಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ’ ಎಂದು ಆರೋಪಿಸಿದರು.

‘ಮಧ್ಯ ಕರ್ನಾಟಕದ ಚಿತ್ರದುರ್ಗ ಅಭಿವೃದ್ಧಿಯಾಗಿಲ್ಲ. ಕೈಗಾರಿಕೆ ಬೆಳೆಸಲು ಪೂರಕ ವಾತಾವರಣ ಇದ್ದರೂ ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶನ ಮಾಡಿಲ್ಲ. ಎಎಪಿ ಅಧಿಕಾರಕ್ಕೆ ಬಂದರೆ ಚಿತ್ರದುರ್ಗದ ಅಭಿವೃದ್ಧಿಗೆ ಒತ್ತು ನೀಡಲಿದೆ. ಗುಜರಾತ್ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಆಸೆ ಎಎಪಿಗೆ ಇಲ್ಲ. ಆದರೆ, ಇಲ್ಲಿ ಸಿಗುವ ಜನಬೆಂಬಲ ಪಕ್ಷಕ್ಕೆ ಶಕ್ತಿ ತುಂಬಲಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ’ ಎಂದು ಹೇಳಿದರು.

‘ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ’

ಭಷ್ಟಾಚಾರದ ವಿರುದ್ಧ ಕಹಳೆ ಮೊಳಗಿಸಿದ ಎಎಪಿ, ಜನರ ಆಶಯಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದೇ ಪಕ್ಷದ ಮೂಲ ಉದ್ದೇಶ ಎಂದು ಎಎಪಿ ಜಿಲ್ಲಾ ಘಟಕದ ಪ್ರಚಾರ ಸಮಿತಿ ಅಧ್ಯಕ್ಷ ಆರ್‌.ಶೇಷಣ್ಣ ಕುಮಾರ್‌ ತಿಳಿಸಿದರು.

‘ಆಮ್ ಆದ್ಮಿ ಪಕ್ಷಕ್ಕೆ ದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತದೆ. ಪಂಜಾಬ್‌ನಲ್ಲಿ ಅಧಿಕಾರ ಹಿಡಿದಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಅಧಿಕ ಮತ ಪಡೆದಿದ್ದೇವೆ. ಗುಜರಾತ್ ರಾಜ್ಯದಲ್ಲಿ ಕೂಡ ಉತ್ತಮ ಫಲಿತಾಂಶ ನಿರೀಕ್ಷೆ ಮಾಡುತ್ತಿದ್ದೇವೆ. ಯುವ ಸಮೂಹ ಸಂವಿಧಾನದ ಮಹತ್ವವನ್ನು ಅರಿತು ದೇಶದ ಅಭಿವೃದ್ಧಿಗೆ ಶ್ರಮಿಸುವ ಪಕ್ಷವನ್ನು ಗುರುತಿಸಬೇಕು’ ಎಂದರು.

ಎಎಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಫಾರೂಕ್, ಕಾರ್ಯದರ್ಶಿ ಕೆಂಚಪ್ಪ, ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ ಕಾರ್ಯದರ್ಶಿ ಅನಿಲಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT