ಶನಿವಾರ, ಜನವರಿ 23, 2021
28 °C
ಮತಾಂತರ ಚಿಂತನಾ-ಮಂಥನಾ ಸಭೆ

ಅಲ್ಪತೃಪ್ತಿಗೆ ಮತಾಂತರ ಸಲ್ಲದು: ಶಾಂತವೀರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಭಕ್ತರು ಹಾಗೂ ಮಠಾಧೀಶರ ನಡುವಿನ ಸಂವಹನ ಕೊರತೆಯಿಂದಾಗಿ ಮತಾಂತರ ಹೆಚ್ಚುತ್ತಿದೆ. ಆದ್ದರಿಂದ ಈಗಾಗಲೇ ಮತಾಂತರ ಆಗಿರುವ, ಅದರೆಡೆಗೆ ಒಲವು ತೋರಿರುವವರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಭೋವಿ ಗುರುಪೀಠದಲ್ಲಿ ಗುರುವಾರ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದಿಂದ ‘ಮತಾಂತರ’ ಕುರಿತು ಆಯೋಜಿಸಿದ್ದ ಮಠಾಧೀಶರ ಚಿಂತನಾ-ಮಂಥನಾ ಸಭೆಯಲ್ಲಿ ಅವರು ಮಾತನಾಡಿದರು.

‘ಬಡವ-ಬಲ್ಲಿದ, ಶಿಕ್ಷಿತ-ಅಶಿಕ್ಷಿತ, ವರ್ಗ-ವರ್ಣ ಎಲ್ಲವನ್ನೂ ಮೀರಿ ಮತಾಂತರ ನಡೆಯುತ್ತಿದೆ. ಉತ್ತಮ ಶಿಕ್ಷಣ, ಸಂಸ್ಕಾರ, ಸ್ವಯಂ ಪರಿಶ್ರಮದಿಂದ ಸಾಮಾಜಿಕ ನ್ಯಾಯ ಪಡೆಯಬೇಕೆ ಹೊರತು ಅಲ್ಪತೃಪ್ತಿಗೆ ಮತಾಂತರ ಸಲ್ಲದು’ ಎಂದರು.

‘ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಸಮಸಮಾಜ ನಿರ್ಮಾಣದ ಉದ್ದೇಶ ಹೊಂದಿದೆ. ಆದ ಕಾರಣ ಆರ್ಥಿಕಾಭಿವೃದ್ಧಿ ಸಹಿತ ಎಲ್ಲರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದಾಗ ಮಾತ್ರ ಸಂವಿಧಾನದ ಆಶಯ ಈಡೇರಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಭಗೀರಥ ಗುರುಪೀಠದ ಪುರುಷೋತ್ತಮನಂದಪುರಿ ಸ್ವಾಮೀಜಿ, ‘ಜಾತಿ ವ್ಯವಸ್ಥೆ, ಕೀಳರಿಮೆ ಮತಾಂತರಕ್ಕೆ ಪ್ರಮುಖ ಕಾರಣ. ಬಡತನ, ಶಿಕ್ಷಣ ಮತ್ತು ಆರೋಗ್ಯ ಸೇವೆ ನೀಡುವ ನೆಪದಲ್ಲಿ ಕೆಲ ಮಿಷನರಿಗಳು ಮತಾಂತರವನ್ನು ಪ್ರೋತ್ಸಾಹಿಸುತ್ತಿವೆ’ ಎಂದು ದೂರಿದರು.

ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ‘ವಿದ್ಯಾವಂತ ಯುವತಿಯರೇ ಮತಾಂತರಕ್ಕೆ ಒಳಾಗುತ್ತಿರುವುದು ಆತಂಕ ಉಂಟು ಮಾಡಿದೆ. ವಿಶ್ವಕ್ಕೆ ಗುರುವಾಗುವ ಶಕ್ತಿ ಭಾರತಕ್ಕಿದೆ. ಹೀಗಿರುವಾಗ ಅನ್ಯ ದೇಶಗಳ ಮತ್ತೊಂದು ಧರ್ಮಕ್ಕೆ ಮತಾಂತರ ಏಕೆ ಆಗಬೇಕು’ ಎಂದು ಪ್ರಶ್ನಿಸಿದರು.

ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಮಹಾಲಿಂಗ ಸ್ವಾಮೀಜಿ, ಸರ್ದಾರ ಸೇವಾಲಾಲ್ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಇಮ್ಮಡಿ ಕೇತೇಶ್ವರ ಸ್ವಾಮೀಜಿ, ಬಸವ ಗುಂಡಯ್ಯ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ವಿಎಚ್‌ಪಿ ಮುಖಂಡರಾದ ಬಸವರಾಜ್, ಕುಬೇರಪ್ಪ, ಬಜರಂಗದಳದ ಪ್ರಭಂಜನ್, ಓಂಕಾರ್ ಇದ್ದರು.

***

ದೇಶದ ಎಲ್ಲಾ ದೇಗುಲಗಳು ಸಾರ್ವತ್ರಿಕವಾಗಬೇಕು. ಶಿಕ್ಷಣದ ಪಠ್ಯಕ್ರಮದಲ್ಲಿರುವ ಕೆಲ ಅಂಶ ಬದಲಾಗಬೇಕು. ಶೋಷಣೆರಹಿತ ಕೇಂದ್ರಗಳ ಸ್ಥಾಪನೆಯಾಗಬೇಕು. ಮತಾಂತರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು.

-ಕೃಷ್ಣ ಯಾದವಾನಂದ ಸ್ವಾಮೀಜಿ, ಯಾದವ ಗುರುಪೀಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು