ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವದಲ್ಲಿ ಮೊಳಗಿದ ದೇಶಭಕ್ತಿ ಕಹಳೆ

ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ
Last Updated 26 ಜನವರಿ 2023, 9:53 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಗುರುವಾರ ನಡೆದ 74ನೇ ಗಣರಾಜ್ಯೋತ್ಸವದಲ್ಲಿ ದೇಶಭಕ್ತಿ ಅನಾವರಣಗೊಂಡಿತು. ಆಕರ್ಷಕ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶಾಭಿಮಾನವನ್ನು ಇಮ್ಮಡಿಗೊಳಿಸಿದವು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅವರು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತೆ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಚಾಲನೆ ಸಿಕ್ಕಿತು. ಧ್ವಜಾರೋಹಣ ನೆರವೇರಿಸಿ ಪಥಸಂಚಲನಕ್ಕೆ ಸಜ್ಜಾದ ತಂಡಗಳ ಪರಿವೀಕ್ಷಣೆಯನ್ನು ತೆರದ ವಾಹನದಲ್ಲಿ ನಡೆಸಿದರು. ಕ್ರೀಡಾಂಗಣದಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಸಚಿವರು ಭಾಷಣ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಕ್ಕೆ ಸಜ್ಜಾಗಿದ್ದ ಶಾಲೆ–ಕಾಲೇಜು ಮಕ್ಕಳು 45 ನಿಮಿಷ ಅದ್ಭುತ ಪ್ರದರ್ಶನ ನೀಡಿದರು. ಹಾಡು, ನೃತ್ಯ, ರೂಪಕಗಳ ಮೂಲಕ ಪ್ರತಿಯೊಬ್ಬರಲ್ಲಿ ದೇಶಭಕ್ತಿ ಮೂಡಿಸುವಲ್ಲಿ ಯಶಸ್ವಿಯಾದರು.

ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 300 ವಿದ್ಯಾರ್ಥಿನಿಯರು ವಿಭಿನ್ನತೆಯಲ್ಲಿ ಏಕತೆ ಸಾರುವ ನೃತ್ಯ ಪ್ರದರ್ಶಿಸಿದರು. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಕಾಶ್ಮೀರ ಸೇರಿ ಹಲವು ರಾಜ್ಯಗಳ ಸಂಸ್ಕೃತಿಯನ್ನು ಕಟ್ಟಿಕೊಟ್ಟರು. ಪ್ರವೀಣ್‌ ಗೋಡ್ಕಿಂಡಿ ಕೊಳಲು ವಾದನದಿಂದ ಕಾಂತಾರ ಚಿತ್ರದ ಹಾಡಿನ ವರೆಗೆ ಹಲವು ಗೀತೆಗಳಿಗೆ ಹೆಜ್ಜೆ ಹಾಕಿದರು.

ಗಾರ್ಡಿಯಲ್ ಏಂಜಲ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರೂಪಕವನ್ನು ಪ್ರದರ್ಶಿಸಿದ್ದು ಗಮನ ಸೆಳೆಯಿತು. ಕ್ರಾಂತಿಯ ಕಹಳೆ ಮೊಳಗಿದ ರೀತಿ, ಹೋರಾಟದ ಕಿಚ್ಚು ಹೆಚ್ಚಿಸಿದ ಪರಿಯನ್ನು ಮಕ್ಕಳು ಮನೋಜ್ಞವಾಗಿ ಕಟ್ಟಿಕೊಟ್ಟರು. ವೆಸ್ಟರ್ನ್‌ ಹಿಲ್‌ ಶಾಲೆ, ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆ ಮಕ್ಕಳು ನಡೆಸಿದ ಆಕರ್ಷಕ ನೃತ್ಯ ನೋಡುಗರ ಮನಸೂರೆಗೊಂಡಿತು.

ಇದಕ್ಕೂ ಮುನ್ನ 23 ತಂಡಗಳು ಆಕರ್ಷಕ ಪಥಸಂಚಲನ ನಡೆಸಿದವು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆ, ನಾಗರಿಕ ಪೊಲೀಸ್ ತುಕಡಿ, ಗೃಹರಕ್ಷಕ ದಳ, ಅಬಕಾರಿ, ಅರಣ್ಯ, ಎನ್‌ಸಿಸಿ ಸೇರಿ ಹಲವು ತಂಡಗಳು ಗಾಂಭೀರ್ಯದಿಂದ ಸಾಗಿದವು. ಸರ್ಕಾರಿ ವಿಜ್ಞಾನ ಕಾಲೇಜು, ಸಂತ ಜೋಸೆಫ್ ಕಾನ್ವೆಂಟ್, ವಿದ್ಯಾವಿಕಾಸ ಶಾಲೆ, ಗೂಳಯ್ಯನಹಟ್ಟಿ ಮೊರಾರ್ಜಿ ದೇಸಾಯಿ ಬಾಲಕಿಯರ ಪ್ರೌಢಶಾಲೆ, ಪಾರ್ಶ್ವನಾಥ ಶಾಲೆ, ಡಾನ್‌ ಬಾಸ್ಕೋ ಸಂಸ್ಥೆ, ಜ್ಞಾನಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.

‘ಸಂವಿಧಾನವೇ ಧರ್ಮಗ್ರಂಥ’

‘ಭಾರತೀಯತೆ ಎನ್ನುವ ರಾಷ್ಟ್ರ ಧರ್ಮಕ್ಕೆ ಸಂವಿಧಾನವೇ ಧರ್ಮಗ್ರಂಥ. ಸಾಂವಿಧಾನಿಕ ಪ್ರಜ್ಞೆಯೇ ಅಭಿವೃದ್ಧಿಗೆ ರಹದಾರಿ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಇದನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

‘ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರಜೆಗಳು ಆಳುವವರನ್ನು ಆಯ್ಕೆ ಮಾಡುವ ವ್ಯವಸ್ಥೆ ಇಲ್ಲಿದೆ. ಈ ಮೂಲಕ ಪ್ರಜೆಗಳೇ ಸ್ವತಃ ಆಡಳಿತ ನಡೆಸುವ ಮಾದರಿ ದೇಶದಲ್ಲಿದೆ. ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತ, ಮೂರನೇ ಸ್ಥಾನಕ್ಕೆ ಏರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಚಿತ್ರದುರ್ಗ ಜಿಲ್ಲೆ ಅಭಿವೃದ್ಧಿ ಹೊಂದುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆ, ವೈದ್ಯಕೀಯ ಕಾಲೇಜು, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಯೋಜನೆ ಜಾರಿಗೊಳಿಸಲಾಗುತ್ತಿದೆ. 200 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ರೈತರಿಗೆ ಪಹಣಿ ಸೇರಿ ಹಲವು ಸೇವೆಗಳನ್ನು ನೀಡಲಾಗುತ್ತಿದೆ. ಕೆರೆಗಳನ್ನು ತುಂಬಿಸಿ ರೈತರ ಕಣ್ಣೀರು ಒರೆಸು ಕೆಲಸ ಮಾಡಲಾಗಿದೆ’ ಎಂದರು.

ಕ್ರೀಡಾಪುಟುಗಳಾದ ಪ್ರಜಾ.ಸಿ.ಎಸ್, ಸದ್ದಾಂ ಹುಸೇನ್, ವೈಶಾಲಿ, ಗುರುರಾಜ್.ಪಿ., ಛಾಯಾಶ್ರೀ.ಎನ್.ಎಂ., ಲಿಖಿತ್.ಎಂ.ಸಿ, ರಾಧ.ವಿ, ಡಾ.ಎಸ್.ಸಿ.ವೀರಭದ್ರಪ್ಪ, ಟಿ.ಲೋಕೇಶ್ವರ, ಮೆಹಬೂಬಿ, ಇಸ್ಮಾಯಿಲ್, ಶಿವರಾಜ್, ಹುಸೇನ್ ಅವರನ್ನು ಸನ್ಮಾನಿಸಲಾಯಿತು. ಕೃಷಿ ಹಾಗೂ ತೋಟಗಾರಿಕೆಯಲ್ಲಿ ಸಾಧನೆ ಮಾಡಿದ ಮಾಜಿ ಸಚಿವ ಎಚ್.ಏಕಾಂತಯ್ಯ ಗೈರಾಗಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಐದು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ವಿತರಿಸಲಾಯಿತು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT